ಲೋ ಬಿಪಿಯಾಗಿ ಮರದಿಂದ ಬಿದ್ದು ಪೊಲೀಸ್‌ ಸಿಬ್ಬಂದಿ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಗನ್‌ಮ್ಯಾನ್‌ ನೆಟ್ಲಿ ‘ಬಿ’ ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ ಲೋಕೇಶ್‌ (40) ಮೃತಪಟ್ಟಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಕಾನ್‌ಬೈಲ್‌ನಲ್ಲಿ ನಡೆದಿದೆ.

ಮಡಿಕೇರಿ (ಆ.7) :  ಲೋ ಬಿಪಿಯಾಗಿ ಮರದಿಂದ ಬಿದ್ದು ಪೊಲೀಸ್‌ ಸಿಬ್ಬಂದಿ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಗನ್‌ಮ್ಯಾನ್‌ ನೆಟ್ಲಿ ‘ಬಿ’ ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ ಲೋಕೇಶ್‌ (40) ಮೃತಪಟ್ಟಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಕಾನ್‌ಬೈಲ್‌ನಲ್ಲಿ ನಡೆದಿದೆ.

ಅವರು ಎಂ.ಪಿ.ಅಪ್ಪಚ್ಚು ರಂಜನ್‌ ಅವರ ಗನ್‌ಮ್ಯಾನ್‌ ಆಗಿ 12 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದರು. ಸದ್ಯ ಪೊಲೀಸ್‌ ಇಲಾಖೆಯಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ವೃತ್ತಿಯಲ್ಲಿದ್ದರು. ಜನರಿಗೆ ಚಿರಪರಿಚಿತರಾಗಿದ್ದ ಲೋಕೇಶ್‌, ಕಾನ್‌ಬೈಲ್‌ ಗ್ರಾಮದ ತೋಟದಲ್ಲಿ ಮರದ ಕೆಲಸ ಮಾಡುವ ವೇಳೆ ಲೋ ಬಿಪಿಯಾಗಿ ಮರದಿಂದ ಬಿದ್ದು ಮೃತಪಟ್ಟಿದ್ದಾರೆ.

ಭಾನುವಾರ ಆಗಿದ್ದ ಕಾರಣ ಮನೆಯಲ್ಲೇ ಇದ್ದ ಲೋಕೇಶ್‌, ಮನೆಯ ಸಮೀಪದಲ್ಲಿದ್ದ ತೋಟಕ್ಕೆ ತೆರಳಿ ಮಾವಿನ ಮರದ ಮೇಲೆ ಹತ್ತಿ ಕಸಿ ಮಾಡಲು ಸುಮಾರು 40 ಅಡಿ ಎತ್ತರಕ್ಕೆ ಏರಿದ್ದರು. ಮರದ ತುದಿಗೆ ಹತ್ತಿದ್ದ ಸಂದರ್ಭ ಬಿಪಿ ಲೋ ಆಗಿದೆ.

Angry Husband : ಟೀಗೆ ಸಕ್ಕರೆ ಹೆಚ್ಚಾದ್ರೂ ಗಂಡಂಗೆ ಕೋಪ, ಮಡದಿಯರಿಗೆ ಬಂತು ಬಿಪಿ!

ಈ ವೇಳೆ ತಮ್ಮೊಂದಿಗಿದ್ದ ಸಹೋದರನ ಬಳಿ ಶುಗರ್‌ ಲೆವೆಲ್‌ ಡೌನ್‌ ಆಗುತ್ತಿದೆ. ಮನೆಗೆ ಹೋಗಿ ಸ್ವಲ್ಪ ಸಕ್ಕರೆ ತರುವಂತೆ ಸೂಚಿಸಿದ್ದಾರೆ. ಸಹೋದರ ಮನೆಗೆ ತೆರಳಿ ಸಕ್ಕರೆ ತರುವ ಹೊತ್ತಿಗೆ ಲೋಕೇಶ್‌ ಮರದಿಂದ ಕಾಂಕ್ರೀಟ್‌ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರ ಕೈ ಮತ್ತು ಕಾಲಿನ ಮೂಳೆ ಮುರಿದಿದೆ. ತಕ್ಷಣವೇ ಅವರನ್ನು ಮಡಿಕೇರಿ ಆಸ್ಪತ್ರೆಗೆ ರವಾನಿಸಿದರೂ ಮಾರ್ಗಮಧ್ಯೆ ಲೋಕೇಶ್‌ ಕೊನೆಯಿಸಿರೆಳೆದಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿದರು.

ಮಾಜಿ ಶಾಸಕ ಅಪ್ಪಚ್ಚು ರಂಜನ್‌ ಅವರೊಂದಿಗೆ ಗುರುತಿಸಿಕೊಂಡಿದ್ದ ಲೋಕೇಶ್‌ ಅವರ ಸಾವಿನ ಸುದ್ದಿ ತಿಳಿದ ತಕ್ಷಣ ಅಪ್ಪಚ್ಚು ರಂಜನ್‌, ಕೆ.ಜಿ.ಬೋಪಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಎಂ.ಎಲ್‌ ಸಿ ಸುಜಾ ಕುಶಾಲಪ್ಪ, ಬಿಜೆಪಿ ಮುಖಂಡ ಬಿ.ಬಿ.ಭಾರತೀಶ್‌, ವಿವಿಧ ಪಕ್ಷದ ಮುಖಂಡರು ಇದ್ದರು.

ಅಂತ್ಯಕ್ರಿಯೆ ಅವರ ಸ್ವಂತ ತೋಟದಲ್ಲಿ ಪೊಲೀಸ್‌ ಗೌರವದೊಂದಿಗೆ ಸೋಮವಾರ ಬೆಳಗ್ಗೆ ನಡೆಯಲಿದೆ. ಮೃತ ಲೋಕೇಶ್‌ ತಂದೆ, ತಾಯಿ, ಪತ್ನಿ, ಮಗಳು ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

ವಿಧಾನಸೌಧದಲ್ಲಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌, ಆರ್.ಅಶೋಕ್‌ ಅಸ್ವಸ್ಥ: ಆಸ್ಪತ್ರೆ ರವಾನೆ

ಕಣ್ಣೀರಿಟ್ಟಅಪ್ಪಚ್ಚು ರಂಜನ್‌

ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಮಾಜಿ ಶಾಸಕ ಅಪ್ಪಚ್ಚು ರಂಜನ್‌, ತನ್ನೊಂದಿಗೆ ಸುಮಾರು 10 ವರ್ಷಗಳಿಂದ ಲೋಕೇಶ್‌ ಗನ್‌ಮ್ಯಾನ್‌ ಆಗಿ ಕೆಲಸ ಮಾಡಿದ್ದರು. ಬಹಳ ಬುದ್ಧಿವಂತರಾಗಿದ್ದು, 2018ರಲ್ಲಿ ಪ್ರಕೃತಿ ವಿಕೋಪ ನಡೆದ ಸಂದರ್ಭದಲ್ಲಿ ಮೊದಲು ಅವರು ರಸ್ತೆಗಳಲ್ಲಿ ಹೋಗಿ ಸುರಕ್ಷಿತವಾಗಿದೆಯಾ ಇಲ್ವಾ ಎಂದು ನೋಡಿ ನಂತರ ನನ್ನನ್ನು ಬರಲು ಹೇಳುತ್ತಿದ್ದರು. ಒಂದು ರೀತಿಯ ಕುಟುಂಬದ ಸದಸ್ಯನ ರೀತಿಯಲ್ಲಿ ನನ್ನೊಂದಿಗೆ ಇದ್ದರು. ಆದರೆ ಇವತ್ತು ಮರ ಕಸಿ ಮಾಡಲು ಹೋಗಿ ಮೃತಪಟ್ಟಿದ್ದಾರೆ ಎಂದು ಕಣ್ಣೀರಿಟ್ಟರು. ಪೊಲೀಸ್‌ ಇಲಾಖೆ ಸಿಬ್ಬಂದಿ, ಲೋಕೇಶ್‌ ಸಾವನ್ನು ನೆನೆದು ಕಂಬನಿ ಮಿಡಿದಿದ್ದಾರೆ.