ಬೆಂಗಳೂರು(ಮೇ.12): 18 ವರ್ಷ ಮೇಲ್ಪಟ್ಟವರಿಗೂ ಕೋವಿಡ್‌ ಲಸಿಕೆ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದ ಬೆನ್ನಲ್ಲೇ ಭಾರೀ ಬೇಡಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಸಿಕಾ ಕೇಂದ್ರಗಳ ಮುಂದೆ ದಿನವಿಡೀ ಜನರ ಸರತಿ ಸಾಲು ಕಂಡುಬಂದಿದ್ದು, ಅನೇಕ ಮಂದಿ ಲಸಿಕೆ ಸಿಗದೆ ಹಿಂದಿರುಗಿದ್ದಾರೆ.

ಮಂಗಳವಾರ ಲಸಿಕಾ ಕೇಂದ್ರಗಳತ್ತ ಜನ ದೊಡ್ಡ ಸಂಖ್ಯೆಯಲ್ಲಿ ದಾಂಗುಡಿಯಿಟ್ಟಕಾರಣ ಬಹುತೇಕ ಕಡೆಗಳಲ್ಲಿ ಜನಜಂಗುಳಿಯಾಗಿ ಗೊಂದಲವೇರ್ಪಟ್ಟಿದೆ. ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಜನ ಆರೋಗ್ಯ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ ಪ್ರಸಂಗಗಳು ಉಡುಪಿ, ದಾವಣಗೆರೆ ಸೇರಿದಂತೆ ಕೆಲವೆಡೆ ನಡೆದಿದೆ. ಇನ್ನು ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಲಸಿಕಾ ಕೇಂದ್ರಕ್ಕೆ ತೆರಳಿದ್ದರಿಂದ ಬಳ್ಳಾರಿಯಲ್ಲಿ ನೂಕುನುಗ್ಗಲು ಏರ್ಪಟ್ಟಿದೆ.

ಬುಕ್‌ ಮಾಡಿದ್ದರೂ ಲಸಿಕೆ ಇಲ್ಲ:

ಬೆಂಗಳೂರು ಸೇರಿದಂತೆ ಹೆಚ್ಚಿನ ನಗರಗಳಲ್ಲಿ ಮುಂಗಡವಾಗಿ ನೋಂದಣಿ ಮಾಡಿ ಲಸಿಕಾ ಕೇಂದ್ರಕ್ಕೆ ಹೋದರೂ ಟೋಕನ್‌ ಸಿಗದೆ ಹಿಂದುರುಗಿದವರ ಸಂಖ್ಯೆಯೇ ಹೆಚ್ಚಾಗಿತ್ತು. ಇನ್ನು ಕೆಲವೆಡೆ ಮುಂಜಾನೆಯಿಂದಲೇ ಜನ ಕಾದು ಕಾದು ಸುಸ್ತಾಗಿ ಲಸಿಕೆ ಸಿಗದೆ ಹಿಂದುರುಗಿದ್ದಾರೆ. ಏತನ್ಮಧ್ಯೆ ಲಸಿಕೆ ಪಡೆಯಲು ಎಲ್ಲ ವಯೋಮಾನದವರೂ ಆಗಮಿಸಿದ್ದರಿಂದ ವಯೋವೃದ್ಧರು ಗಂಟೆಗಳ ಕಾಲ ಸರತಿ ಸಾಲಲ್ಲಿ ನಿಂತ ತೊಂದರೆ ಅನುಭವಿಸಿದ ಘಟನೆಗಳೂ ವರದಿಯಾಗಿವೆ. ಕೋಲಾರ, ಹಾಸನ, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಯಾದಗಿರಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಮೇಲ್ಕಂಡ ರೀತಿಯ ಚಿತ್ರಣವೇ ಕಂಡು ಬಂದಿದೆ.

"

ಕಾದು ಕುಳಿತ ಯುವ ಸಮೂಹ:

ಹುಬ್ಬಳ್ಳಿ-ಧಾರವಾಡದಲ್ಲಿ 18 ವರ್ಷದ ಮೇಲ್ಪಟ್ಟವರಿಗೆ ಈಗಾಗಲೇ ವ್ಯಾಕ್ಸಿನ್‌ ಪ್ರಾರಂಭವಾಗಿದೆ. ಆದರೆ ಸರಿಯಾದ ಸಮಯಕ್ಕೆ ವ್ಯಾಕ್ಸಿನ್‌ ಬಾರದೆ ಯುವ ಸಮೂಹ ಕಾಯುತ್ತಾ ಕುಳಿತ್ತಿದ್ದ ದೃಶ್ಯ ಕಂಡುಬಂತು. ಬೆಳಗಾವಿ, ಬಾಗಲಕೋಟೆ ಸೇರಿ ಕೆಲವೆಡೆಗಳಲ್ಲಿ ಮಂಗಳವಾರ 2ನೇ ಡೋಸ್‌ ಮಾತ್ರ ನೀಡಲಾಗಿದ್ದು, ಮೊದಲ ಡೋಸ್‌ ಪಡೆಯಲು ಆಗಮಿಸಿದ್ದವರಿಗೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಸಾಧ್ಯವಾಗಿಲ್ಲ.

ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಷ್ಟುವ್ಯಾಕ್ಸಿನ್‌ ಪೂರೈಕೆಯಾಗದ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರಗಳ ಮುಂದೆ ನೂಕುನುಗ್ಗಲು ಕಂಡುಬಂತು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಸಿಕೆ ನೀಡಿದ್ದು, 2ನೇ ಡೋಸ್‌ ಪಡೆಯಲು ಬಂದವರ ವಾಪಸ್‌ ಕಳುಹಿಸಲಾಯಿತು. ಉತ್ತರ ಕನ್ನಡದ ಲಸಿಕಾ ಕೇಂದ್ರಗಳಲ್ಲಿ ತಲಾ 150 ಮಂದಿಗೆ ಮಾತ್ರ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಆ್ಯಪ್‌ ಮುಖಾಂತರ ನೋಂದಣಿ ಮಾಡಿಕೊಂಡವರಿಷ್ಟೇ ಲಸಿಕೆ ನೀಡಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಗೆ ಸೋಮವಾರ 10 ಸಾವಿರ ಡೋಸ್‌ ಲಸಿಕೆ ಆಗಮಿಸಿದ್ದು, ಮಂಗಳವಾರವೇ 9,500 ಡೋಸ್‌ ನೀಡಲಾಗಿದೆ. ಇನ್ನು ಉಡುಪಿ ಹಾಗೂ ಮಡಿಕೇರಿ ಜಿಲ್ಲೆಗಳಲ್ಲೂ ಯುವ ಮಂದಿ ಸಾಕಷ್ಟುಉತ್ಸಾಹ ತೋರಿದ್ದು, ಲಸಿಕೆಗೆ ಭಾರೀ ಬೇಡಿಕೆ ಕಂಡು ಬಂದಿದೆ.

ಕ್ಯೂ ನಿಂತು ಬೊಬ್ಬೆ ಹೊಡೀಬೇಡಿ

ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಈಗ ಎರಡನೇ ಡೋಸ್‌ ಲಸಿಕೆ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಯಾರೂ ಕೂಡ ಆತಂಕಕ್ಕೆ ಒಳಗಾಗಿ ಕ್ಯೂ ನಿಂತು ಬೊಬ್ಬೆ ಹೊಡೆಯುವ ಅಗತ್ಯವಿಲ್ಲ. ಹಂತಹಂತವಾಗಿ ಲಸಿಕೆ ರಾಜ್ಯಕ್ಕೆ ಬರುತ್ತಿದೆ. ಬಂದಂತೆ ವಿತರಣೆ ಮಾಡಲಾಗುತ್ತಿದೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona