Asianet Suvarna News Asianet Suvarna News

ಲೋಕಸಭಾ ಚುನಾವಣೆ: ಬಿಜೆಪಿ ಜತೆ ಮೈತ್ರಿ ಏರ್ಪಟ್ಟರೆ 7 ಕ್ಷೇತ್ರಕ್ಕೆ ಜೆಡಿಎಸ್‌ ಬೇಡಿಕೆ?

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವುದೇ ಅಂತಿಮಗೊಂಡಲ್ಲಿ ಹೆಚ್ಚೂ ಕಡಮೆ ಏಳು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಇಡುವ ಸಾಧ್ಯತೆ ಇರುವುದರಿಂದ ರಾಜ್ಯ ಬಿಜೆಪಿ ಪಾಳೆಯದಲ್ಲಿ ಸಣ್ಣ ಆತಂಕ ಕಾಣಿಸಿಕೊಂಡಿದೆ.

Loksabha election 2024 JDS demand for 7 constituencies if alliance with BJP bengaluru rav
Author
First Published Jul 17, 2023, 4:57 AM IST | Last Updated Jul 17, 2023, 4:57 AM IST

ಬೆಂಗಳೂರು (ಜು.17) :  ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವುದೇ ಅಂತಿಮಗೊಂಡಲ್ಲಿ ಹೆಚ್ಚೂ ಕಡಮೆ ಏಳು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಇಡುವ ಸಾಧ್ಯತೆ ಇರುವುದರಿಂದ ರಾಜ್ಯ ಬಿಜೆಪಿ ಪಾಳೆಯದಲ್ಲಿ ಸಣ್ಣ ಆತಂಕ ಕಾಣಿಸಿಕೊಂಡಿದೆ.

ಸಂಖ್ಯಾ ದೃಷ್ಟಿಯಿಂದ ಒಟ್ಟು 28 ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ಬೇಡಿಕೆ ಇಡುವುದು ದೊಡ್ಡದೇನಲ್ಲ ಎಂಬ ಭಾವನೆ ಜೆಡಿಎಸ್‌ ನಾಯಕರದ್ದಾದರೂ ಬಿಜೆಪಿ ಮಟ್ಟಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಲಿದೆ. ಹೀಗಾಗಿ, ರಾಜ್ಯ ಬಿಜೆಪಿಯಲ್ಲಿ ಈಗಲೇ ಈ ಬಗ್ಗೆ ಬಿರುಸಿನ ಚರ್ಚೆ ಆರಂಭವಾಗಿದೆ.

ಜೆಡಿಎಸ್‌ ಹಳೆ ಮೈಸೂರು ಭಾಗದಲ್ಲಿಯೇ ಪ್ರಾಬಲ್ಯ ಹೊಂದಿರುವುದರಿಂದ ಸಹಜವಾಗಿಯೇ ಈ ಭಾಗದ ಲೋಕಸಭಾ ಕ್ಷೇತ್ರಗಳನ್ನೇ ತನಗೆ ಬಿಟ್ಟುಕೊಡುವಂತೆ ಕೇಳುವುದು ನಿಶ್ಚಿತ. ಹಳೆ ಮೈಸೂರು ಭಾಗದ ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳಿಗೆ ಬೇಡಿಕೆ ಇಡುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲೇ ಜೆಡಿಎಸ್‌ ಪಾಳೆಯದಲ್ಲೂ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.

India gate: ಬಿಜೆಪಿ-ಜೆಡಿಎಸ್ ಮೈತ್ರಿಗೆ ಕ್ಷಣಗಣನೆ!

ಆದರೆ, ಜೆಡಿಎಸ್‌ ನಿರೀಕ್ಷೆಯಲ್ಲಿರುವ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿಯ ಹಾಲಿ ಸಂಸದರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಭರ್ಜರಿ ಜಯ ಗಳಿಸಿರುವ ಬಿಜೆಪಿ ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರಿನಲ್ಲೂ ಗೆಲುವಿನ ಬಾವುಟ ಹಾರಿಸಿದೆ. ಈ ಪೈಕಿ ಮೈಸೂರಿನ ಪ್ರತಾಪ್‌ ಸಿಂಹ ಮತ್ತು ಕೋಲಾರದ ಮುನಿಸ್ವಾಮಿ ಅವರು ಮತ್ತೊಮ್ಮೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಚಿಕ್ಕಬಳ್ಳಾಪುರದ ಬಿ.ಎನ್‌.ಬಚ್ಚೇಗೌಡ ಮತ್ತು ತುಮಕೂರಿನ ಜಿ.ಎಸ್‌.ಬಸವರಾಜು ಅವರು ವಯೋಸಹಜ ಕಾರಣದಿಂದ ಈ ಬಾರಿ ಸ್ಪರ್ಧಿಸುವುದಿಲ್ಲ ಎಂಬುದು ಖಾತ್ರಿಯಾಗಿದೆ.

ಈ ನಾಲ್ಕೂ ಕ್ಷೇತ್ರಗಳಲ್ಲೂ ಬಿಜೆಪಿ ಸಂಘಟನೆಯೂ ಬಲಗೊಂಡಿದೆ. ಸಂಘಟನೆ ದುರ್ಬಲವಾಗಿದ್ದರೆ ಬಿಟ್ಟುಕೊಡುವುದು ಕಷ್ಟವಾಗುತ್ತಿರಲಿಲ್ಲ. ಆದರೆ, ಪಕ್ಷದ ನೆಲೆ ಗಟ್ಟಿಯಾಗಿರುವ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಸರಿಯಾಗಲಿಕ್ಕಿಲ್ಲ. ಹಾಸನ, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟುಕೊಡುವುದಕ್ಕೆ ತೊಂದರೆ ಉಂಟಾಗುವುದಿಲ್ಲ. ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಈಗ ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ ಅಂಬರೀಷ್‌ ಅವರಿಗೆ ಬೇರೊಂದು ಕ್ಷೇತ್ರ ನೀಡಬಹುದು ಎಂಬ ಮಾತು ಬಿಜೆಪಿ ಮುಖಂಡರಿಂದ ಕೇಳಿಬರುತ್ತಿವೆ.

Party Rounds: ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಬಹುತೇಕ ಫೈನಲ್‌?

ಇನ್ನೂ ಜೆಡಿಎಸ್‌ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವುದು ನಿಶ್ಚಿತವಾಗಿಲ್ಲ. ಚರ್ಚೆ ಆರಂಭಿಕ ಹಂತದಲ್ಲಿದೆ. ಅಧಿಕೃತ ಮಾತುಕತೆ ಆರಂಭವಾದ ಬಳಿಕ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರ ಅಭಿಪ್ರಾಯ ಕೇಳಲಿದ್ದಾರೆ. ಆಗ ವಾಸ್ತವಾಂಶವನ್ನು ವಿವರಿಸಿದರಾಯಿತು ಎಂಬ ನಿಲವಿಗೆ ಪಕ್ಷದ ಮುಖಂಡರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios