ಬೆಂಗಳೂರು: ಹಾಲಿ ಸಂಸದರು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳನ್ನು ಬದಲಾಯಿಸುವ ಅಗತ್ಯ ಕಂಡು ಬಂದಲ್ಲಿ ಪಕ್ಷದ ವರಿಷ್ಠರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ. 

ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಾಲಿ ಸಂಸದರು ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಅವರ ಕಾರ್ಯ ನಿರ್ವಹಣೆ ಬಗ್ಗೆ ಆರೋಪಗಳಿರುವ ಉದಾಹರಣೆ ಇಲ್ಲ ಎಂದು ಸಮರ್ಥಿಸಿಕೊಂಡರು. 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಒಂದು ವೇಳೆ ಹಾಲಿ ಸಂಸದರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಅನಿವಾರ್ಯವಾಗಿ ಒಂದೆರಡು ಕಡೆ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಬಂದರೆ ಆ ಬಗ್ಗೆ ಕೇಂದ್ರದ ನಾಯಕರೇ ನಿರ್ಧರಿಸಲಿದ್ದಾರೆ. ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.