ಕಲಬುರಗಿ ಟಿಕೆಟ್ ಫೈಟ್ : ಮಹಾಭಾರತ ಸಂಗ್ರಾಮ  

ಕಲಬುರಗಿ :  ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಗುಂಪಿನ ನಾಯಕ, ‘ಸೋಲಿಲ್ಲದ ಸರದಾರ’ ಡಾ. ಮಲ್ಲಿಕಾರ್ಜುನ ಖರ್ಗೆ ಹುರಿಯಾಳಾಗಿರುವುದರಿಂದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲಿರುವ ಕಲಬುರಗಿ(ಮೀಸಲು) ಲೋಕಸಭಾ ಕ್ಷೇತ್ರವು ಈ ಬಾರಿ ‘ಜಂಗೀಕುಸ್ತಿ’ ಅಖಾಡವಾಗು​ವುದು ಖಚಿತ.

ಲೋಕಸಭಾ ಚುನಾವಣೆ: ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಿದೆ ಬಾಗಲಕೋಟೆ

ನಿರಂತರ 9 ಬಾರಿ ಅಸೆಂಬ್ಲಿ, 2 ಬಾರಿ ಪಾರ್ಲಿಮೆಂಟ್‌ ಚುನಾವಣೆ ಗೆದ್ದಿರುವ ಕಾಂಗ್ರೆಸ್‌ನ ‘ಗೆಲ್ಲುವ ಕುದುರೆ’ ಡಾ. ಮಲ್ಲಿಕಾರ್ಜುನ ಖರ್ಗೆ ಗೆಲುವಿನ ‘ನಾಗಾಲೋಟ’ಕ್ಕೆ ಬ್ರೇಕ್‌ ಹಾಕಲು ಬಿಜೆಪಿಯು ಕಾಂಗ್ರೆ​ಸ್‌ನ ಬುಟ್ಟಿಗೆ ಕೈ ಹಾಕಿ​ರು​ವುದು ಹಾಗೂ ಇದು ರಾಜ್ಯ ಸಮ್ಮಿಶ್ರ ಸರ್ಕಾ​ರದ ವಿರುದ್ಧದ ಆಪ​ರೇ​ಷನ್‌ ಕಮ​ಲದ ಭಾಗವೂ ಆಗಿ​ರು​ವುದು ಈ ಪೈಪೋ​ಟಿಯ ರೋಚ​ಕ​ತೆ​ಯನ್ನು ಹೆಚ್ಚಿ​ಸಿದೆ.

ಟಿಕೆಟ್ ಫೈಟ್: ಉತ್ತರ ಕನ್ನಡದಲ್ಲಿ ಹೆಗಡೆ ಓಟಕ್ಕೆ ದೇಶಪಾಂಡೆ ಹಾಕ್ತಾರಾ ತಡೆ?

ಮಲ್ಲಿ​ಕಾ​ರ್ಜುನ ಖರ್ಗೆ ಹಾಗೂ ಅವರ ಪುತ್ರ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಸೆಟೆ​ದು ನಿಂತು ಪಕ್ಷ​ದಿಂದಲೇ ಒಂದು ಕಾಲನ್ನು ಹೊರಗೆ ಇಟ್ಟಿ​ರುವ ಚಿಂಚೋಳಿ ಶಾಸಕ ಡಾ. ಉಮೇ​ಶ್‌ ಜಾಧವ್‌ ಅವರು ಬಿಜೆ​ಪಿಯ ‘ಆಪ​ರೇ​ಷನ್‌ ಕಮ​ಲ’ಕ್ಕೆ ಒಳ​ಗಾಗಿದ್ದು, ಲೋಕ​ಸ​ಭೆ​ಯಲ್ಲಿ ಬಿಜೆಪಿ ಟಿಕೆ​ಟ್‌​ನಿಂದ ಖರ್ಗೆ ಎದುರು ಸ್ಪರ್ಧಿ​ಸ​ಲಿ​ದ್ದಾರೆ ಎಂದೇ ಹೇಳ​ಲಾ​ಗು​ತ್ತಿದೆ. ಇದು ಖರ್ಗೆ ಗೆಲುವಿನ ಓಟಕ್ಕೆ ಸವಾಲೊಡ್ಡಿದೆ. ಕಳೆದೊಂದು ತಿಂಗಳಿಂದ ಖರ್ಗೆ ಕುಟುಂಬದ ವಿರುದ್ಧ ಹರಿಹಾಯುತ್ತಲೇ ತಮ್ಮ ಸಮಾಜದ ಮತಗಳನ್ನು ಏಕತ್ರ ಮಾಡುತ್ತ, ಜೊತೆಗೆ ಮೇಲ್ವರ್ಗದ ಮತಗಳ ಕಟ್ಟು ಕಟ್ಟಿಕೊಂಡು ಡಾ. ಜಾಧವ ಬಿಜೆಪಿ ಹುರಿಯಾಳಾಗುವ ಹವಣಿಕೆಯಲ್ಲಿದ್ದಾರೆ.

ಇದು ಖರ್ಗೆ ವರ್ಸಸ್‌ ಮೋದಿ ಕದನ

ಸ್ಥಳೀಯವಾಗಿ ಖರ್ಗೆ ವಿರುದ್ಧ ಬಿಜೆಪಿ ಯಾರನ್ನೇ ಕಣಕ್ಕಿಳಿಸಿದರೂ ಇಲ್ಲಿನ ಘನಘೋರ ರಾಜಕೀಯ ಸಂಗ್ರಾಮವನ್ನು ಜನತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಡಾ.ಖರ್ಗೆ ನಡುವಿನ ಸಮರ ಎಂದೇ ಬಣ್ಣಿಸುತ್ತಿದ್ದಾರೆ. ಬಿಜೆಪಿ ಹಾಗೂ ಮೋದಿ- ಅಮಿತ್‌ ಶಾ ದಾರಿಗೆ ಸವಾಲಾಗಿರುವ ಖರ್ಗೆ ವ್ಯಕ್ತಿತ್ವ ಕಮಲ ಪಡೆಯನ್ನು ಕೆಣಕಿರುವುದರಿಂದ ಹೇಗಾದರೂ ಮಾಡಿ ಖರ್ಗೆಗೆ ಈ ಬಾರಿ ಸೋಲಿನ ರುಚಿ ತೋರಿಸಲೇಬೇಕು ಎಂಬ ಸಿದ್ಧತೆಯಲ್ಲಿದೆ ಕೇಸರಿ ಪಡೆ. ದಿಲ್ಲಿಯಿಂದಲೇ ‘ರಾಜಕೀಯ ಚದುರಂಗ’ ಸಿದ್ಧಪಡಿಸಿ, ಕಲಬುರಗಿ ‘ಲೋಕಲ್‌ ಪಾಲಿಟಿಕ್ಸ್‌’ನಲ್ಲಿ ದಾಳ ಉರುಳಿಸಲು ಮೋದಿ-ಶಾ ಸಜ್ಜಾಗಿದ್ದಾರೆ ಎಂದೇ ಬಿಜೆಪಿ ವಲಯ ಬಿಂಬಿ​ಸು​ತ್ತಿ​ದೆ.

ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್‌ ವಿವೇಕರಾವ್‌?

ಕಾಂಗ್ರೆಸ್‌ನ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸತತ 2 ಬಾರಿ ಸಂಸತ್‌ಗೆ ಆಯ್ಕೆ ಮಾಡಿರುವ ಕಲಬುರಗಿ ಲೋಕಸಭೆ ಕ್ಷೇತ್ರ 1951ರ ಸಾರ್ವತ್ರಿಕ ಚುನಾವಣೆಗೂ ಮುನ್ನ ರಚನೆಯಾದದ್ದು. 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕಲಬುರಗಿ, ಕಾಂಗ್ರೆಸ್‌ ಪಕ್ಷದತ್ತ ಒಲವಿರುವ ಪ್ರದೇಶ. ಕಾಂಗ್ರೆಸ್‌ನ ಅಭೇದ್ಯ ಕೋಟೆ ಇದ್ದಾಗ್ಯೂ 1996ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಖಮರುಲ್‌ ಇಸ್ಲಾಂ, 1998ರಲ್ಲಿ ಬಿಜೆಪಿಯಿಂದ ಕಣದಲ್ಲಿದ್ದ ಬಸವರಾಜ ಪಾಟೀಲ್‌ ಸೇಡಂ ಇಲ್ಲಿನ ಕಾಂಗ್ರೆಸ್‌ ಪಾರುಪತ್ಯಕ್ಕೆ ಬ್ರೇಕ್‌ ಹಾಕಿದ್ದರು. ಇವೆರಡು ಬೆಳವಣಿಗೆಗಳನ್ನು ಹೊರತುಪಡಿಸಿದರೆ ಉಳಿದ ಯಾವ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಹೊರತುಪಡಿಸಿ ಅನ್ಯ ಪಕ್ಷ ಕಲಬುರಗಿಯಲ್ಲಿ ತನ್ನ ಛಾಪು ಮೂಡಿಸಿಲ್ಲ. ಕ್ಷೇತ್ರ ಇಲ್ಲಿಯವರೆಗೂ ಕಂಡಂತಹ ಒಟ್ಟು 17 ಲೋಕಸಭೆ ಚುನಾವಣೆಗಳಲ್ಲಿ 15ರಲ್ಲಿ ಕಾಂಗ್ರೆಸ್‌ ಗೆದ್ದರೆ ಕೇವಲ 2 ಬಾರಿ ಅನ್ಯಪಕ್ಷಗಳು ಗೆಲವು ಕಂಡಿವೆ.

ಖರ್ಗೆ ಗೆಲುವು ಸುಲಭವೇ?

2014ರಲ್ಲಿ ಇಲ್ಲಿಂದ 2ನೇ ಬಾರಿಗೆ ಗೆದ್ದು ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಗುಂಪಿನ ನಾಯಕರಾಗಿರುವ ಡಾ.ಮಲ್ಲಿಕಾರ್ಜುನ ಖರ್ಗೆಗೆ ಈ ಬಾರಿ ಗೆಲುವು ಸುಲಭದ ತುತ್ತೆ? ಖರ್ಗೆ ಗೆಲುವಿನ ದಾರಿಯಲ್ಲಿ ಬಿಜೆಪಿ ಒಡ್ಡುವ ಸವಾಲು ಎಂತಹದ್ದು ಎಂಬಿತ್ಯಾದಿ ರೋಚಕ ಚರ್ಚೆಗಳು ಕ್ಷೇತ್ರಾದ್ಯಂತ ಶುರುವಾಗಿವೆ. ಈ ಕ್ಷೇತ್ರದಡಿ ಬರುವ 8 ಅಸೆಂಬ್ಲಿ ಕ್ಷೇತ್ರಗಳಲ್ಲಿ 4 ಕಾಂಗ್ರೆಸ್‌, 3 ಬಿಜೆಪಿ ಹಾಗೂ 1ರಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಘನಘೋರ ಹಣಾಹಣಿ ನಿರೀಕ್ಷಿಸಲಾಗುತ್ತಿದೆ.

ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?

ಜಿಲ್ಲೆಯ ಬದಲಾದ ರಾಜಕೀಯ ಸನ್ನಿವೇಶ, ಜಾತಿ ಸಮೀಕರಣ ಲೋಕಸಭೆ ಚುನಾವಣೆಯಲ್ಲಿ ಹತ್ತು ಹಲವು- ರೋಚಕ ತಿರುವುಗಳಿಗೆ ಕಾರಣವಾಗಲಿದೆ. ಗುರುಮಠಕಲ್‌ನಿಂದ ಸತತ 2 ಬಾರಿ ಗೆದ್ದಿದ್ದ, ಕೋಲಿಮತ ಸಮಾಜದ ಪ್ರಮುಖ ಬಾಬೂರಾವ ಚಿಂಚನ್ಸೂರ್‌, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌, ಚಿತ್ತಾಪುರ ಮಾಜಿ ಶಾಸಕ ವಿಶ್ವನಾಥ ಪಾಟೀಲ್‌ ಹೆಬ್ಬಾಳ ಮತ್ತು ಗೆಳೆಯರ ಗುಂಪು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿ ಖರ್ಗೆ ಕುಟುಂಬದ ವಿರುದ್ಧ ಸಮರ ಸಾರಿದೆ. ಇದಲ್ಲದೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ‘ಕಮಲ’ ಅರಳಿದೆ. ಖರ್ಗೆ ಕಟ್ಟಾಬೆಂಬಲಿಗ ಡಾ. ಶರಣಪ್ರಕಾಶ ಪಾಟೀಲ್‌ ಸೋಲು ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?

ಇವೆಲ್ಲ ರಾಜಕೀಯ ಲೆಕ್ಕಾಚಾರದ ಮಧ್ಯೆಯೂ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಭಿವೃದ್ಧಿ ಚಿಂತನೆ, ಪಕ್ಷ ನಿಷ್ಠೆ, ವಿವಾದ ರಹಿತ ಬದುಕು ಕ್ಷೇತ್ರದಲ್ಲಿ ಮತದಾರರ ಮಾನ್ಯತೆ ಪಡೆದುಕೊಂಡಿದೆ. ಹೀಗಾಗಿ ‘ಕಲಬುರಗಿ ಹೆಮ್ಮೆ, ಖರ್ಗೆ ಮತ್ತೊಮ್ಮೆ’ ಎಂದು ಕಾಂಗ್ರೆಸ್ಸಿಗರು ಪ್ರಚಾ​ರಕ್ಕೆ ಮುಂದಾ​ಗಿ​ದ್ದಾ​ರೆ.

ಖರ್ಗೆ ಎದುರು ಜಾಧವ್‌?

ಇನ್ನು ‘ಆಪರೇಷನ್‌ ಕಮಲ’ದಲ್ಲಿ ಹೆಸರು ಕೇಳಿಬಂದಿರುವ ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ ಕಾಂಗ್ರೆಸ್‌ ಪಕ್ಷ ಬಿಟ್ಟು ಬಿಜೆಪಿ ಸೇರಿ ಖರ್ಗೆ ವಿರುದ್ಧ ಹುರಿಯಾಳಾಗುವ ದಟ್ಟಸುದ್ದಿ ಹರಡಿರುವುದು ಕೂಡ ಖರ್ಗೆ ಗೆಲುವಿನ ನಾಗಾಲೋಟಕ್ಕೆ ಸವಾಲೊಡ್ಡಿದೆ. ಕಲಬುರಗಿಯಿಂದ ಈ ಬಾರಿ ಬಂಜಾರ ಸಮಾಜದವರಿಗೆ ಟಿಕೆಟ್‌ ಎಂದು 4 ತಿಂಗಳ ಹಿಂದೆ ಯಡಿಯೂರಪ್ಪ ಹೇಳಿ ಹೋದ ದಿನದಿಂದಲೂ ಬಿಜೆಪಿಯಲ್ಲಿ ಬಂಜಾರ ಸಮುದಾಯಕ್ಕೆ ಸೇರಿರುವ ಟಿಕೆಟ್‌ ಆಕಾಂಕ್ಷಿಗಳ ದೊಡ್ಡ ಗುಂಪು ಕಾಣಿಸಿಕೊಂಡಿದೆ. ಜಿಪಂ ಮಾಜಿ ಉಪಾಧ್ಯಕ್ಷ ಸುಭಾಷ ರಾಠೋಡ (ಬೇಟಿ ಬಚಾವೋ- ಬೇಟಿ ಪಡಾವೋ ಆಂದೋಲನ ರಾಜ್ಯ ಸಂಚಾಲಕ), ನಾಮದೇವ ರಾಠೋಡ (ಬಿಜೆಪಿ ಮುಖಂಡರು), ಬಾಬೂರಾವ ಚವ್ಹಾಣ್‌ (ಮಾಜಿ ಸಚಿವ) ಹೆಸರು ಪ್ರಮುಖವಾಗಿವೆ.

ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್‌ ಎದುರು ಬಿಜೆಪಿ ಸ್ಪರ್ಧಿ ಯಾರು..?

ಇನ್ನು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ್‌, ಮಾಜಿ ಸಚಿವ, ಬಿಜೆಪಿ ಮುಖಂಡ ಸುನೀಲ ವಲ್ಯಾಪೂರೆ, ಜಿಪಂ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ, ಶ್ಯಾಮರಾವ್‌ ಪ್ಯಾಟಿ ಹೆಸರು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಹೈಕಮಾಂಡ್‌ ಸಂಪರ್ಕಿಸಿ ಸುನೀಲ ವಲ್ಯಾಪೂರೆ ಬಗ್ಗೆ ಅಭಿಪ್ರಾಯ ಕೇಳಿದೆ ಎನ್ನಲಾಗುತ್ತಿದೆ.

ಕೇರಳದ ಸ್ಟೀಫನ್‌ ಇಲ್ಲಿ ಬಂದು ಗೆದ್ದಿದ್ದರು!

1951ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಾಮಿ ರಮಾನಂದ ತೀರ್ಥರು ಆಯ್ಕೆಯಾಗಿದ್ದಾಗ ಕಲಬುರಗಿಯು ಹೈದ್ರಾಬಾದ್‌ ಸಂಸ್ಥಾನಕ್ಕೆ ಸೇರಿತ್ತು. 1957ರಲ್ಲಿ ಮಹಾದೇವಪ್ಪ ಯಶ್ವಂತರಾವ ವಿಜಯ ಸಾಧಿಸಿದ ಹೊತ್ತಲ್ಲಿ ರಾಜ್ಯ ಪುನರ್ವಿಂಗಡಣೆಯಾಗಿ ಕಲಬುರಗಿ ಕರ್ನಾಟಕ ಸæೕರಿ ದ್ವಿ ಸದಸ್ಯ ಕ್ಷೇತ್ರವಾಯ್ತು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್‌, ವೀರೇಂದ್ರ ಪಾಟೀಲರೂ ಇಲ್ಲಿಂದಲೇ ಲೋಕಸಭೆ ಗೆದ್ದವರು. 1980ರಲ್ಲಿ ಧರಂಸಿಂಗ್‌ ಲೋಕಸಭೆಗೇನೋ ಗೆದ್ದರು, ಆದರೆ ಸಂಸತ್ತನ್ನು ಪ್ರವೇಶಿಸದೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ ಕಲಬುರಗಿ ಕಂಡ ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿ ಆಪ್ತ, ಕೇರಳದ ಸ್ಟೀಫನ್‌ ಕಣಕ್ಕಿಳಿದು ಜಯಭೇರಿ ಬಾರಿಸಿದ್ದರು.

ಸತತ 11 ಗೆಲುವು: ಖರ್ಗೆ ಸೋಲಿಲ್ಲದ ಸರದಾರ

1972ರಲ್ಲಿ ಗುರುಮಠಕಲ್‌(ಯಾದಗಿರಿ ಜಿಲ್ಲೆ) ಅಸೆಂಬ್ಲಿ ಕ್ಷೇತ್ರದಿಂದ ಶಾಸಕರಾಗಿ ಗೆದ್ದ ಡಾ. ಮಲ್ಲಿಕಾರ್ಜುನ ಖರ್ಗೆ ಅಂದಿನಿಂದ ಗೆಲ್ಲುತ್ತಲೇ ಹೊರಟವರು. ಗುರುಮಿಠಕಲ್‌ನಿಂದ ಸತತ 8 ಬಾರಿ ಶಾಸಕರಾಗಿದ್ದ ಅವರು ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಗುರುಮಿಠಕಲ್‌ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತಿತವಾದಾಗ ಚಿತ್ತಾಪುರಕ್ಕೆ ಬಂದು ಅಲ್ಲಿಯೂ 9ನೇ ಬಾರಿಗೆ ಅಸೆಂಬ್ಲಿ ಚುನಾವಣೆ ಗೆದ್ದರು. 2009, 2014 ರಲ್ಲಿ ಲೋಕಸಭೆ ಸ್ಪರ್ಧಿಸಿ ಕಲಬುರಗಿ ಕ್ಷೇತ್ರದಿಂದ ಸತತ ಗೆಲವು ಕಂಡವರು. ಖರ್ಗೆ ಎದುರಿಸಿದ ಅಸೆಂಬ್ಲಿ, ಲೋಕಸಭೆ ಎಲ್ಲ 11 ಚುನಾವಣೆ ಗೆಲ್ಲುವ ಮೂಲಕ ಇದುವರೆಗೂ ಗೆಲ್ಲುವ ಕುದುರೆಯಾಗಿಯೇ ರಾಜಕೀಯದಲ್ಲಿ ದಾಖಲೆ ಬರೆದವರು. 76 ವರ್ಷ ವಯಸ್ಸಿನ ಹಾಗೂ ಸತತ ಗೆಲ್ಲುವ ಕುದುರೆಯಾಗಿರುವ ಡಾ. ಖರ್ಗೆ ಅವರಿಗೆ ಈ ಚುನಾವಣೆ ಪ್ರತಿಷ್ಠೆಯಾಗಲಿದೆ.

4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌,  3ರಲ್ಲಿ ಬಿಜೆಪಿ ಶಾಸಕರು

ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ 4ರಲ್ಲಿ ಕಾಂಗ್ರೆಸ್‌ ಶಾಸಕರು ಇದ್ದರೆ, 3ರಲ್ಲಿ ಬಿಜೆಪಿ ಹಾಗೂ 1ರಲ್ಲಿ ಜೆಡಿಎಸ್‌ ಶಾಸಕರು ಇದ್ದಾರೆ. ಅಫಜಲ್ಪುರ, ಜೇವರ್ಗಿ, ಕಲಬುರಗಿ (ಉತ್ತರ), ಚಿತ್ತಾಪುರ (ಮೀಸಲು)ದಲ್ಲಿ ಕಾಂಗ್ರೆಸ್‌, ಸೇಡಂ, ಕಲಬುರಗಿ (ದಕ್ಷಿಣ), ಕಲಬುರಗಿ (ಗ್ರಾಮೀಣ)ದಲ್ಲಿ ಬಿಜೆಪಿ ಹಾಗೂ ಗುರುಮಠಕಲ್‌ನಲ್ಲಿ ಜೆಡಿಎಸ್‌ ಶಾಸಕರು ಇದ್ದಾರೆ.

ವರದಿ :   ಶೇಷಮೂರ್ತಿ ಅವಧಾನಿ