Breaking: ರಾಜ್ಯದಲ್ಲಿ 23 ಜನರ ಮೇಲೆ ಪ್ರಚೋದನಕಾರಿ ಭಾಷಣ ಕೇಸ್ ದಾಖಲು; ಹಾಸನದ್ದು ವಿಶೇಷ ಕೇಸ್
ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೆ ಒಟ್ಟು 23 ಪ್ರಚೋದನಕಾರಿ ಭಾಷಣದ ಕೇಸ್ ದಾಖಲು ಮಾಡಲಾಗಿದೆ.
ಬೆಂಗಳೂರು (ಏ.24): ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೆ ಒಟ್ಟು 23 ಪ್ರಚೋದನಕಾರಿ ಭಾಷಣದ ಕೇಸ್ ದಾಖಲು ಮಾಡಲಾಗಿದೆ. ಇನ್ನು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಂದು ವಿಶೇಷ ಕೇಸ್ ದಾಖಲಾಗಿದೆ ಎಂದು ರಾಜ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಹಂತದ ಮತದಾನದ ಸಿದ್ಧತೆಯ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದುಯವರೆಗೆ 23 ಪ್ರಚೋದನಕಾರಿ ಭಾಷಣದ ಕೇಸ್ ದಾಖಲಾಗಿದೆ. ಈ ಪೈಕಿ ಬಿಜೆಪಿ 12, ಕಾಂಗ್ರೆಸ್ 9, ಜೆಡಿಎಸ್ 2 ಹಾಗೂ ಇತರೆ 5 ನಾಯಕರ ಮೇಲೆ ಕೇಸ್ ದಾಖಲಿಸಲಾಗಿದೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ ಬಗ್ಗೆಯೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಲ್ಲ ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್; ಡಬಲ್ ಸೆಕ್ಯೂರಿಟಿ ಅಳವಡಿಕೆ
ವಿಧಾನಸೌಧದಲ್ಲಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವಿಚಾರವಾಗಿ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಇಲ್ಲಿ ನಿಯಮ ಉಲ್ಲಂಘನೆ ಆಗಿರುವುದು ಕಂಡುಬಂದಲ್ಲಿ ಅವರ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮನೋಜಕುಮಾರ ಮೀನಾ ಹೇಳಿದರು.
ಇನ್ನು ಹಾಸನ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರ ಅಶ್ಲೀಲ ವಿಡಿಯೋ ತುಣುಕುಗಳು ಹಂಚಿಕೆಯಾದ ವಿಚಾರದ ಕೇಸ್ ಬಗ್ಗೆ ಮಾತನಾಡಿ, ಈ ಕುರಿತು ದೂರು ಸ್ವೀಕಾರ ಮಾಡಿದ್ದೇವೆ. ಈ ಬಗ್ಗೆ ತನಿಖೆಯಾಗ್ತಿದೆ. ಸೂಕ್ತ ಕ್ರಮ ಕೈಗೊಳ್ಳಲು ಆಯೋಗ ವಿವರ ಪಡೆಯುತ್ತಿದೆ ಎಂದು ಹೆಚ್ಚಿನ ವಿವರ ನೀಡಲು ಮನೋಜ್ ಕುಮಾರ್ ಮೀನಾ ನಿರಾಕರಣೆ ಮಾಡಿದರು.