Asianet Suvarna News Asianet Suvarna News

‘ಹಿಂದೂ ಮತ ಬೇಡ’ ಸುಳ್ಸುದ್ದಿ ವಿರುದ್ಧ ಸಿಎಂ ಸಿದ್ದರಾಮಯ್ಯ ದೂರು

ವಾರ್ತಾಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕೃತ್ಯದಲ್ಲಿ ಭಾಗಿಯಾದ ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್, ವಿಜಯ್ ಹೆರಗು, ಪಂಡು ಮೋದಿ ಕ ಪರಿವಾರ, ಬಿಎಸ್‌ವೈ ಸಪೋರ್ಟರ್ಸ್‌, ದಾವಣಗೆರೆ ಬಿಜೆಪಿ, ದಾತ್ರಿ ಗೋಶಾಲೆ ಎಂಬ ಖಾತೆಗಳ ವಿರುದ್ಧ ದೂರು ದಾಖಲಾಗಿದೆ.

Lok sabha election Karnataka CM Siddaramaiah files complaint against fake news clipping about hindu vote rav
Author
First Published Apr 11, 2024, 8:29 AM IST

ಬೆಂಗಳೂರು (ಏ.11): ‘ಬಿಜೆಪಿ-ಜೆಡಿಎಸ್‌ ಮಿತ್ರಮಂಡಳಿ ಕೃಪಾಪೋಷಿತ ಕಿಡಿಗೇಡಿಗಳು ವಾರ್ತಾಪತ್ರಿಕೆ ಹೋಲುವ ನಕಲಿ ಪತ್ರಿಕಾ ಸುದ್ದಿ ತುಣುಕನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಬಗ್ಗೆ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದೇನೆ. ಇದರ ಹಿಂದಿರುವ ದುಷ್ಟ ಶಕ್ತಿಯನ್ನು ನ್ಯಾಯದ ಕೈಗೆ ಒಪ್ಪಿಸಲಾಗುವುದು. ಇನ್ನು ಮುಂದೆಯೂ ಯಾರೇ ಸುಳ್ಳು ಸುದ್ದಿ ಸೃಷ್ಟಿಸಿದರೂ, ಹರಡಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ‘ಹಿಂದೂಗಳ ಅಗತ್ಯ ನಮಗೆ ಬೇಡ, ಮುಸ್ಲಿಮರ ಮತ ಸಾಕು. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಬಯಸುತ್ತೇನೆ. ಬಿಜೆಪಿಯವರ ಓಲೈಕೆ ಟೀಕೆಗೆ ತಲೆಕೆಡಿಸಿಕೊಳ್ಳಲ್ಲ’ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿರುವಂತೆ ಸುಳ್ಳು ಪತ್ರಿಕಾ ತುಣುಕು ಸೃಷ್ಟಿಸಿ ಶೇರ್‌ ಮಾಡಲಾಗಿತ್ತು.

ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವುದು ಕಾಂಗ್ರೆಸ್ ಜಾಯಮಾನ: ಗೋವಿಂದ ಕಾರಜೋಳ

ಈ ಬಗ್ಗೆ ಎಕ್ಸ್‌ ಖಾತೆ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕಿಡಿಗೇಡಿಗಳು ಜನರ ಕೋಮುಭಾವನೆ ಕೆರಳಿಸುವ ಸುದ್ದಿಯನ್ನು ತುಂಬಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ರಾಜಕೀಯ ವಿರೋಧಿಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ಎದುರಿಸಲಾಗದೆ ಇಂತಹ ಅಡ್ಡದಾರಿ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಬಿಜೆಪಿ ಮತ್ತು ಜೆಡಿಎಸ್‌ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಹತ್ತು ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಪಕ್ಷವೊಂದು ಚುನಾವಣೆ ಗೆಲ್ಲಲು ಸುಳ್ಳು ಸುದ್ದಿಯ ಮೊರೆ ಹೋಗುವಂತಹ ಹೀನಾಯ ಸ್ಥಿತಿಗೆ ತಲುಪಬಾರದಿತ್ತು ಎಂದು ಕಿಡಿ ಕಾರಿದ್ದಾರೆ.

ಇದೇ ವೇಳೆ ಸುಳ್ಳು ಸುದ್ದಿಗಳನ್ನು ನಂಬಿ ಶೇರ್‌ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ಸುಳ್ಳು ಸುದ್ದಿಯ ಸೃಷ್ಟಿಕರ್ತರು, ಅವರ ಬೆನ್ನ ಹಿಂದೆ ಬೆಂಬಲಕ್ಕೆ ನಿಂತಿರುವವರು ಹೀಗೆ ಫೇಕ್‌ ಫ್ಯಾಕ್ಟರಿಯನ್ನು ಕಾನೂನಿನ ಮೂಲಕ ಬೇರು ಸಹಿತ ಕಿತ್ತೆಸೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

7 ಮಂದಿ ವಿರುದ್ಧ ಎಫ್‌ಐಆರ್‌;

ಪ್ರತಿ ಪೋಸ್ಟ್‌ ಮಾಡಿ ಎಚ್ಚರಿಕೆ!

ವಾರ್ತಾಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕೃತ್ಯದಲ್ಲಿ ಭಾಗಿಯಾದ ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್, ವಿಜಯ್ ಹೆರಗು, ಪಂಡು ಮೋದಿ ಕ ಪರಿವಾರ, ಬಿಎಸ್‌ವೈ ಸಪೋರ್ಟರ್ಸ್‌, ದಾವಣಗೆರೆ ಬಿಜೆಪಿ, ದಾತ್ರಿ ಗೋಶಾಲೆ ಎಂಬ ಖಾತೆಗಳ ವಿರುದ್ಧ ದೂರು ದಾಖಲಾಗಿದೆ.

 

ಸುಳ್ಸುದ್ದಿಗಳ ಹಾವಳಿ ಮಧ್ಯೆ, ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಸವಾಲು!

ಫೇಕ್ ನ್ಯೂಸ್‌ಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಯಾರೂ ಕೂಡ ಅಂತಹ ಕಾನೂನುಬಾಹಿರ ಕೃತ್ಯಕ್ಕೆ ಕೈಹಾಕಬಾರದು ಎಂದು ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದೆವು. ಆದರೂ ನನ್ನ ವಿರುದ್ಧವೇ ಸುಳ್ಳು ಸುದ್ದಿ ಸೃಷ್ಟಿಸಿ, ಜನರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಕಾನೂನಿನ ಮೂಲಕ ಈ ಪ್ರಕರಣವನ್ನು ತಾರ್ಕಿಕ ಅತ್ಯಂಕ್ಕೆ ಕೊಂಡೊಯ್ಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಎಫ್‌ಐಆರ್‌ ಪ್ರತಿಯನ್ನು ಮುಖ್ಯಮಂತ್ರಿಗಳು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Follow Us:
Download App:
  • android
  • ios