28ಕ್ಕೆ 28 ಕ್ಷೇತ್ರ ಗೆದ್ದುಕೊಡುತ್ತೇವೆ, ಪ್ರಧಾನಿ ಮೋದಿಗೆ ಯಡಿಯೂರಪ್ಪ ಭರವಸೆ!
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ ರ್‍ಯಾಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ರಾಜ್ಯದ 28 ಕ್ಷೇತ್ರ ಗೆಲ್ಲಿಸಿಕೊಡುವ ಭರವಸೆಯನ್ನು ಮೋದಿಗೆ ನೀಡಿದ್ದಾರೆ. ಯಡಿಯೂರಪ್ಪ ಭಾಷಣದ ವಿವರ ಇಲ್ಲಿದೆ
ಬೆಂಗಳೂರು(ಏ.20) ಪ್ರಧಾನಿ ನರೇಂದ್ರ ಮೋದಿಯಿಂದ ಭಾರತ ವಿಶ್ವಮಟ್ಟದಲ್ಲಿ ಹಿರಿಮೆ-ಗರಿಮೆ ಸಂಪಾದಿಸಿದೆ. ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ಕಾಂಗ್ರೆಸ್ ಮೊಸಳೆ ಕಣ್ಣೀರಿಡುತ್ತಿದ್ದಾರೆ. ಕೇಂದ್ರದಿಂದ ಅನ್ಯಾಯ ಅಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಯಾವ ವಿಚಾರದಲ್ಲಿ ಅನ್ಯಾಯ ಆಗಿದೆ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಷ್ಟು ಸ್ಥಾನವನ್ನು ಈ ಬಾರಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, ಮೋದಿ ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಈ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಇದೀಗ ಕಾರ್ಯಕರ್ತರು ವಿರಮಿಸಬಾರದು. ಮೋದಿಯಂತೆ ನಿರಂತರ ಕೆಲಸ ಮಾಡುತ್ತಾ ಬಿಜೆಪಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿಕೊಡುವಂತೆ ಮನವಿ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.