Asianet Suvarna News Asianet Suvarna News

ಲಾಕ್‌ಡೌನ್‌ ಬ್ರಹ್ಮಾಸ್ತ್ರ: ರಾಜ್ಯದಲ್ಲಿ ಒಂದೇ ತಿಂಗಳಲ್ಲಿ ಸೋಂಕು 60% ಇಳಿಕೆ!

* ತಗ್ಗಿದ ಸೋಂಕು, ಸಾವಿನ ಅಬ್ಬರ

* ರಾಜ್ಯದಲ್ಲಿ ಒಂದೇ ತಿಂಗಳಲ್ಲಿ ಸೋಂಕು 60% ಇಳಿಕೆ!

* ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಬ್ರಹ್ಮಾಸ್ತ್ರ ಎಂಬುದು ಸಾಬೀತು

* ಮೇ ತಿಂಗಳ ಮೊದಲ 9 ದಿನದಲ್ಲಿ 5 ಲಕ್ಷ ಕೇಸ್‌, ಜೂನ್‌ ತಿಂಗಳ 9 ದಿನದಲ್ಲಿ 2 ಲಕ್ಷ ಕೇಸ್‌

Lockdown Effect Covid Cases Decreased 60 pc within a month in karnataka  pod
Author
Bangalore, First Published Jun 12, 2021, 7:37 AM IST

ಬೆಂಗಳೂರು(ಜೂ.12): ಕೋವಿಡ್‌-19 ಹೆಮ್ಮಾರಿಯ ನಾಗಲೋಟಕ್ಕೆ ಕಡಿವಾಣ ಹಾಕಲು ಲಾಕ್‌ಡೌನ್‌ ಬ್ರಹ್ಮಾಸ್ತ್ರ ಎಂಬುದು ರಾಜ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಎಲ್ಲ ದಾಖಲೆಗಳನ್ನು ಪುಡಿಗಟ್ಟಿಸಾಗುತ್ತಿದ್ದ ಕೊರೋನಾ ವೈರಾಣುವಿಗೆ ತಕ್ಕ ಮಟ್ಟಿಗೆ ಲಗಾಮು ಹಾಕಲು ಯಶಸ್ವಿಯಾಗಿದೆ.

ಮೇ ತಿಂಗಳ ಮೊದಲ 9 ದಿನಕ್ಕೆ ಹೋಲಿಸಿದರೆ ಜೂನ್‌ ತಿಂಗಳಲ್ಲಿ ಈವರೆಗೆ ಸುಮಾರು ಶೇ.60ರಷ್ಟುಸೋಂಕಿನ ಪ್ರಮಾಣ ಕಡಿಮೆಯಾಗಿದೆ. ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಕೋವಿಡ್‌ ಸೋಂಕಿನ ಸಾವು, ನೋವಿಗೆ ಕಾರಣವಾಗಿದ್ದ ಮೇ ತಿಂಗಳು ಇಡೀ ಜನತಾ ಕಫ್ರ್ಯೂ ಮತ್ತು ಲಾಕ್‌ಡೌನ್‌ನಿಂದ ರಾಜ್ಯ ಬಂಧಿಯಾಗಿತ್ತು. ಏಪ್ರಿಲ್‌ 27ರಂದು ಜನತಾ ಕಫ್ರ್ಯೂ ಹೇರುವ ಹೊತ್ತಿಗೆ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದವು. ಪ್ರತಿದಿನ 30 ಸಾವಿರ ಮೀರಿ ಪ್ರಕರಣಗಳು ವರದಿಯಾಗುತ್ತಿತ್ತು. ಆ ಹೊತ್ತಿಗೆ ಕೊರೋನಾ ಸಾವು ನೋವಿನ ಬಹುತೇಕ ಪ್ರಕರಣಗಳು ಬೆಂಗಳೂರಿಲ್ಲೇ ವರದಿಯಾಗುತ್ತಿತ್ತು. ಆಸ್ಪತ್ರೆಯಲ್ಲಿ ಬೆಡ್‌, ಔಷಧಿ, ಆಮ್ಲಜನಕ ಸಿಗದೇ ಸೋಂಕಿತರು ಪರದಾಡುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿತ್ತು. ಚಿತಾಗಾರದಲ್ಲಿ ಶವ ಸುಡಲು ಕೂಡ ಒದ್ದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಲಾಕ್‌ಡೌನ್‌ ಹೇರುತ್ತಿದ್ದಾರೆ ಎಂಬ ಸೂಚನೆ ಪಡೆದ ಜನರು ಬೆಂಗಳೂರು ತೊರೆದು ತಮ್ಮ ತಮ್ಮ ಊರಿಗೆ ಹಿಂತಿರುಗುತ್ತಿದ್ದಂತೆ ರಾಜ್ಯಾದ್ಯಂತ ಕೋವಿಡ್‌ ಅಬ್ಬರ ತಾರಕಕ್ಕೇರಿತು. ರಾಜ್ಯ ಸರ್ಕಾರ ಕೂಡ ಈ ವಲಸೆಯನ್ನು ಸರಿಯಾಗಿ ನಿರ್ವಹಿಸಲು ವಿಫಲವಾಯಿತು.

ಇಳಿಕೆಯ ಹಾದಿ:

ಏಪ್ರಿಲ್‌ 30 ರಿಂದ ಮೇ 9ರವರೆಗೆ ನಿರಂತರವಾಗಿ 40 ರಿಂದ 50 ಸಾವಿರದವರೆಗೆ ಕೋವಿಡ್‌ ಪ್ರಕರಣ ವರದಿಯಾಗಿತ್ತು. ಪಾಸಿಟಿವಿಟಿ ದರ ಶೇ 30 ಮೀರಿ ದಾಖಲಾಗಿತ್ತು. ಪ್ರತಿದಿನ ಎಂಟತ್ತು ಜಿಲ್ಲೆಗಳಲ್ಲಿ ಸಾವಿರ ಮೀರಿ ಪ್ರಕರಣಗಳು ವರದಿಯಾಗಲು ಪ್ರಾರಂಭಿಸಿದವು. ಮೇ 10ರಿಂದ ಮೇ 22ರವರೆಗೆ ನಿರಂತರವಾಗಿ 30 ಸಾವಿರ ಮೀರಿ ಪ್ರಕರಣಗಳು ವರದಿಯಾಗಿದ್ದು ಆ ಬಳಿಕ ದಿನಗಳಲ್ಲಿ ಸೋಂಕಿನ ಪ್ರಮಾಣದಲ್ಲಿ ಇಳಿಕೆ ದಾಖಲಾಗಿದೆ. ಕಳೆದ ಕೆಲ ದಿನಗಳಿಂದ 10 ಸಾವಿರ ಅಸುಪಾಸಿನಲ್ಲಿ ಪ್ರಕರಣ ಬರುತ್ತಿದೆ.

ಇಳಿಕೆಗೆ ಬೆಂಗಳೂರು ಮುನ್ನುಡಿ:

ಆದರೆ ಲಾಕ್‌ ಡೌನ್‌ ಹೇರಿದ ಎರಡು ವಾರಗಳ ಬಳಿಕ ಕೋವಿಡ್‌ ಪ್ರಕರಣಗಳಲ್ಲಿ ನಿರೀಕ್ಷೆಯಂತೆ ಇಳಿಕೆ ದಾಖಲಾಗಲು ಪ್ರಾರಂಭಿಸಿತು. ಈ ಇಳಿಕೆ ಪ್ರವೃತ್ತಿ ಮೊದಲು ದಾಖಲಾಗಿದ್ದೆ ಬೆಂಗಳೂರು ನಗರದಲ್ಲಿ. ಇದರೊಂದಿಗೆ ಸೋಂಕಿನ ಅಬ್ಬರ ಆರಂಭದಲ್ಲಿ ಕಾಣಿಸಿಕೊಂಡಿದ್ದ ಬೀದರ್‌, ಕಲಬುರ್ಗಿಯಲ್ಲೂ ಸೋಂಕು ನಿಧಾನವಾಗಿ ಇಳಿಯಲು ಪ್ರಾರಂಭಗೊಂಡಿತು.

ಪಾಸಿಟಿವಿಟಿ ದರ:

ಲಾಕ್‌ಡೌನ್‌ ಇರದ ಏ.21ರಿಂದ ಏ. 27ರ ಅವಧಿಯಲ್ಲಿ ರಾಜ್ಯದ ಪಾಸಿಟಿವಿಟಿ ದರ ಶೇ. 14.7ರಷ್ಟಿತ್ತು.ಆದರೆ ಸತತವಾಗಿ 1.70 ಲಕ್ಷ ಮೀರಿ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ಮೇ 10 ರ ಹೊತ್ತಿಗೆ ಬರುವಾಗ ರಾಜ್ಯದ ಪಾಸಿಟಿವಿಟಿ ದರ ಶೇ. 30 ಮೀರಿ ವರದಿಯಾಗುತ್ತಿತ್ತು. ಇದೇ ವೇಳೆ ಕೋವಿಡ್‌ ಪರೀಕ್ಷೆಯ ಪ್ರಮಾಣದಲ್ಲಿ ನಾಟಕೀಯ ಕುಸಿತ ದಾಖಲಾಗಿತ್ತು. ಮೇ 14ಕ್ಕೆ ಕೇವಲ 1.24 ಲಕ್ಷ ಪರೀಕ್ಷೆ ಮಾತ್ರ ನಡೆದಿತ್ತು. ಸೋಂಕು ಉತ್ತುಂಗದಲ್ಲಿದ್ದರೂ ಕೂಡ ಮೇ ಅಂತ್ಯದರೆಗೂ ಪರೀಕ್ಷೆಯ ಪ್ರಮಾಣ ಮಾತ್ರ 1.25 ಲಕ್ಷದ ಅಸುಪಾಸಿನಲ್ಲೇ ಉಳಿದಿತ್ತು. ಏಪ್ರಿಲ್‌ ಅಂತ್ಯಕ್ಕೆ 3 ಲಕ್ಷದಷ್ಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಆಗಿ ಮೇ 15ರ ಹೊತ್ತಿಗೆ 6 ಲಕ್ಷ ಮೀರಿತ್ತು. ಗುಣಮುಖರ ಸಂಖ್ಯೆ ಶೇ 70ಕ್ಕೆ ಇಳಿದಿತ್ತು. ಮೇ 17ಕ್ಕೆ ಸಾರ್ವಕಾಲಿಕ ದಾಖಲೆಯ ಶೇ.39.40 ಪಾಸಿಟಿವಿಟಿ ದರ ದಾಖಲಾದರೆ ಮೇ 5ಕ್ಕೆ 50,000 ಮೀರಿ ದೈನಂದಿನ ಸೋಂಕು ಪತ್ತೆಯಾಗಿತ್ತು. ಆದರೆ ಜನತಾ ಕಫ್ರ್ಯೂ ಹೇರಿ 16ನೇ ದಿನ ಅಂದರೆ ಮೇ 13ಕ್ಕೆ ಕೋವಿಡ್‌ ಪ್ರಕರಣಗಳ ಸಂಖ್ಯೆ 35,297ಕ್ಕೆ ಕುಸಿಯಿತು. ಅಂದಿನಿಂದ ಕೇವಲ ಎರಡು ಬಾರಿ ಮಾತ್ರ 40 ಸಾವಿರದ ಗಡಿಯನ್ನು ದೈನಂದಿನ ಪ್ರಕರಣ ದಾಟಿದೆ. ಸೋಂಕಿತರ ಪ್ರಮಾಣಕ್ಕಿಂತ ಗುಣಮುಖರ ಪ್ರಮಾಣ ಹೆಚ್ಚಾಗಿ ವರದಿಯಾಗುವ ಪೃವೃತ್ತಿ ಮೇ 18ಕ್ಕೆ ಪ್ರಾರಂಭವಾಗಿದ್ದು ಇನ್ನೂ ಮುಂದುವರಿದಿದೆ, ಇದರಿಂದ ಮತ್ತೆ ಗುಣಮುಖರ ಸಂಖ್ಯೆ ಶೇ.90ರ ಸಮೀಪಕ್ಕೆ ಬಂದಿದೆ.

ಮೇ 20ಕ್ಕೆ ತಿಂಗಳಲ್ಲಿ ಮೊದಲ ಬಾರಿಗೆ 30 ಸಾವಿರಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯವ್ಯಾಪಿ ಇಳಿಕೆ ಕಂಡುಬರಲು ಪ್ರಾರಂಭವಾಯಿತು. ಆದರೆ ಕೋವಿಡ್‌ನಿಂದ ಮೃತ ಪಟ್ಟವರ ಸಂಖ್ಯೆ ಮೇ 18ರ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದೆ.

ಶೇ.60ರಷ್ಟು ಇಳಿಕೆ:

ಏಪ್ರಿಲ್‌ 27 ರಿಂದ ಮೇ 9ರವರೆಗೆ 5.65 ಲಕ್ಷ ಮಂದಿಯಲ್ಲಿ ಸೋಂಕು ಧೃಢ ಪಟ್ಟಿತ್ತು. ಮೇ 10 ರಿಂದ ಮೇ 20ರ ವರೆಗಿನ ಅವಧಿಯಲ್ಲಿ 3.62 ಲಕ್ಷ, ಮೇ 21ರಿಂದ ಮೇ 31ರ ಅವಧಿಯಲ್ಲಿ 2.68 ಲಕ್ಷ ಮತ್ತು ಜೂನ್‌ 1ರಿಂದ ಜೂನ್‌ 9 ರವರೆಗೆ 2.18 ಲಕ್ಷ ಮಂದಿಯಲ್ಲಿ ಸೋಂಕು ಧೃಢ ಪಟ್ಟಿದೆ. ಅಂದರೆ ಜೂನ್‌ ಮೊದಲ 10 ದಿನಗಳಲ್ಲಿ ಮೇ ತಿಂಗಳ ಮೊದಲ ಹತ್ತು ದಿನಗಳಿಗೆ ಹೋಲಿಸಿದರೆ ಶೇ. 60ಕ್ಕಿಂತಲೂ ಹೆಚ್ಚು ಸೋಂಕು ಕಡಿಮೆ ಆಗಿದೆ. ಅದರೆ ಸೋಂಕಿನ ಪ್ರಮಾಣ ಭಾರಿ ಏರಿಕೆ ಆಗಿದ್ದ ಸಂದರ್ಭದಲ್ಲಿಯೂ ಕೋವಿಡ್‌ ಪರೀಕ್ಷೆಯ ಪ್ರಮಾಣವನ್ನು ಸರ್ಕಾರ ಕಡಿತ ಮಾಡಿದ್ದು ಆರೋಗ್ಯ ತಜ್ಞರ ಅಚ್ಚರಿಗೆ ಕಾರಣವಾಗಿದೆ. ಈಗ ಸೋಂಕು ಇಳಿಕೆ ದಾಖಲಿಸುತ್ತಿದ್ದು ಸರ್ಕಾರ ಪರೀಕ್ಷೆ ಪ್ರಮಾಣ ಹೆಚ್ಚಿಸುತ್ತಿದೆ.

Follow Us:
Download App:
  • android
  • ios