ಬೆಂಗಳೂರು(ಜು.13): ರಾಜಧಾನಿ ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಿಧಿಸಲು ನಿರ್ಧರಿಸಿರುವ ಒಂದು ವಾರದ ಲಾಕ್‌ಡೌನ್‌ ನಂತರ ಎರಡು ಅಥವಾ ಮೂರು ವಾರಕ್ಕೆ ವಿಸ್ತರಣೆಯಾಗುವ ಸಾಧ್ಯತೆಯಿದೆ.

ಆದರೆ, ಅದು ಮೊದಲ ಒಂದು ವಾರದಲ್ಲಿ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಮತ್ತು ಸೋಂಕಿನ ಚೈನ್‌ ಮುರಿಯುವಲ್ಲಿ ಎಷ್ಟರಮಟ್ಟಿಗೆ ಸಹಾಯಕಾರಿಯಾಗುತ್ತದೆ ಎಂಬುದರ ಮೇಲೆ ವಿಸ್ತರಣೆ ನಿರ್ಧಾರವಾಗಲಿದೆ.

ಹಾಸಿಗೆ ಇಲ್ಲದೆ ವಿಕ್ಟೋರಿಯಾ ಮುಂದೆ ಜೀವ ಬಿಟ್ಟವೃದ್ಧೆ, ಸತ್ತ ನಂತ್ರ ಕೊರೋನಾ ಟೆಸ್ಟ್ ಮಾಡಿದ ವೈದ್ಯರು

ಬುಧವಾರದಿಂದ ಒಂದು ವಾರಗಳ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಲಾಕ್‌ಡೌನ್‌ ಜಾರಿಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಈಗಾಗಲೇ ಪ್ರಕಟಿಸಿದೆ. ಸೋಮವಾರ ಈ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವೀಡಿಯೋ ಸಂವಾದ ನಡೆಸಲಿದ್ದಾರೆ. ಈ ಸಭೆಯ ನಂತರ ಲಾಕ್‌ಡೌನ್‌ ವ್ಯಾಪ್ತಿಗೆ ಇನ್ನಷ್ಟುಜಿಲ್ಲೆಗಳ ಸೇರ್ಪಡೆಯಾಗಲಿವೆ.

ಒಟ್ಟಾರೆಯಾಗಿ ಲಾಕ್‌ಡೌನ್‌ ಅವಧಿ ಮಂಗಳವಾರ ರಾತ್ರಿ 8ರಿಂದಲೇ ಆರಂಭಗೊಳ್ಳಲಿದೆ. ಒಂದು ವಾರದಲ್ಲಿ ಆಯಾ ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದಾಗಿ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟುವಲ್ಲಿ ಪರಿಣಾಮ ಬೀರಿದೆಯೇ ಎಂಬುದನ್ನು ಕಾದು ನೋಡಲಾಗತ್ತದೆ.

ಆಸ್ಪತ್ರೆಗಳಿಗೆ ಅಲೆದರೂ ಹಾಸಿಗೆ ಸಿಗಲಿಲ್ಲ: ಮಗನ ಮುಂದೆಯೇ ಪ್ರಾಣ ಬಿಟ್ಟ ತಾಯಿ..!

ಸೋಂಕಿನ ವೇಗ ತಡೆಗಟ್ಟುವಲ್ಲಿ ಲಾಕ್‌ಡೌನ್‌ ನೆರವಾಗಿದ್ದರೆ ಆಗ ಲಾಕ್‌ಡೌನ್‌ ಅವಧಿಯನ್ನು ಮತ್ತೆ ಒಂದು ವಾರ ಅಥವಾ ಎರಡು ವಾರಕ್ಕೆ ವಿಸ್ತರಿಸುವ ಬಗ್ಗೆ ಮತ್ತೊಮ್ಮೆ ಆಯಾ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ.

ಆದರೆ, ಒಂದು ವೇಳೆ ಮೊದಲ ಒಂದು ವಾರದ ಲಾಕ್‌ಡೌನ್‌ನಿಂದಾಗಿ ಕೊರೋನಾ ಸೋಂಕಿನ ವೇಗ ನಿಯಂತ್ರಿಸಲು ಸಾಧ್ಯವಾಗದಿದ್ದರೆ ಆಗ ಲಾಕ್‌ಡೌನ್‌ ವಿಸ್ತರಿಸುವ ಪ್ರಸ್ತಾಪವನ್ನು ಕೈಬಿಟ್ಟು ಪರ್ಯಾಯ ಮಾರ್ಗೋಪಾಯಗಳತ್ತ ಗಮನಹರಿಸಲಾಗುವುದು ಎಂದೂ ಸರ್ಕಾರದ ಹಿರಿಯ ಸಚಿವರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.