Asianet Suvarna News Asianet Suvarna News
breaking news image

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಳೆಯ ನೆರೆ, ಮುಖ್ಯದ್ವಾರವನ್ನೇ ಬಂದ್‌ ಮಾಡಿದ ಗ್ರಾಮಸ್ಥರು!

ವಿಮಾನ ನಿಲ್ದಾಣದ ಅವೈಜ್ಞಾನಿಕ ಚರಂಡಿ ಸಂಪರ್ಕದಿಂದ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಸೇರಿ ಕೆಂಜಾರಿನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಮುಖ್ಯ ದ್ವಾರವನ್ನೇ ಬಂದ್‌ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದ ವಿದ್ಯಮಾನ ನಡೆದಿದೆ.

Locals protest against Mangaluru International Airport over water damage gow
Author
First Published Jul 2, 2024, 4:39 PM IST

ಮಂಗಳೂರು (ಜು.2): ವಿಮಾನ ನಿಲ್ದಾಣದ ಅವೈಜ್ಞಾನಿಕ ಚರಂಡಿ ಸಂಪರ್ಕದಿಂದ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಸೇರಿ ಕೆಂಜಾರಿನಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮುಖ್ಯ ದ್ವಾರವನ್ನೇ ಬಂದ್‌ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದ ವಿದ್ಯಮಾನ ನಡೆದಿದೆ.

ಮಂಗಳೂರು ವಿಮಾನ ನಿಲ್ದಾಣ ಎತ್ತರದ ಗುಡ್ಡ ಪ್ರದೇಶದಲ್ಲಿದೆ. ವಿಮಾನ ನಿಲ್ದಾಣದಿಂದ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ಕೆಂಜಾರು ಹಾಗೂ ವಿಮಾನ ನಿಲ್ದಾಣ ಸುತ್ತಮುತ್ತಲಿನ ಹಲವು ಮನೆಗಳಿಗೆ ನೆರೆ ಭೀತಿ ಆವರಿಸಿದೆ. ಈ ಬಗ್ಗೆ ವಿಮಾನ ನಿಲ್ದಾಣ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸೂಕ್ತ ವ್ಯವಸ್ಥೆ ಕಲ್ಪಿಸದೆ ಮಳೆ ನೀರನ್ನು ಅವೈಜ್ಞಾನಿಕವಾಗಿ ಹೊರಗೆ ಬಿಡುತ್ತಿರುವುದರಿಂದಲೇ ಸಮಸ್ಯೆ ಬಿಗಡಾಯಿಸಿದೆ ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಆರೋಪಿಸಿದರು.

ಮಾಜಿ ಸಂಸದೆ ಸುಮಲತಾ ವಿರೋಧಿಸಿದ್ದ ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್‌ಗೆ ಜಿಲ್ಲಾಡಳಿತ ಸಿದ್ಧತೆ!

ವಿಮಾನ ನಿಲ್ದಾಣದ ರಸ್ತೆ ತಡೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಅಡಚಣೆ ಉಂಟಾಯಿತು. ತಕ್ಷಣ ಬಜಪೆ ಪೊಲೀಸರು ಆಗಮಿಸಿ ಗ್ರಾಮಸ್ಥರನ್ನು ಮನಒಲಿಸಿ ರಸ್ತೆ ತಡೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಸಮಸ್ಯೆ ನಿವಾರಿಸುವ ಭರವಸೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ರಸ್ತೆ ತಡೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಭದ್ರತೆ ಹೊಣೆ ಹೊತ್ತಿರುವ ಕೇಂದ್ರ ಕೈಗಾರಿಕಾ ಭದ್ರತಾಪಡೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೊಕ್ಕಾಂ ಹೂಡಿದ್ದಾರೆ.

ವಿಮಾನ ನಿಲ್ದಾಣದ ನೀರು ಗ್ರಾಮಕ್ಕೆ ಹರಿದು ಸಮಸ್ಯೆಗೆ ಸಂಬಂಧಿಸಿ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್‌ಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ವಿದ್ಯಮಾನ ನಡೆಯಿತು. ಸಮಸ್ಯೆ ಕೇಳಲು ಬಂದರೂ ಐದು ನಿಮಿಷ ಕೂಡ ನಿಂತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕರಂಬಾರು ಗ್ರಾಮದ ಮನೆಗೆ ಭೇಟಿ ನೀಡಿದ ವೇಳೆ ತಹಶಿಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಮಂಗಳೂರು ಸಹಾಯಕ ಕಮಿಷನರ್‌ ಹರ್ಷವರ್ಧನ್ ಎದುರಲ್ಲೇ ಮನೆ ಮಂದಿ ತರಾಟೆಗೆ ಗುರಿಪಡಿಸಿದರು. ಮಾತ್ರವಲ್ಲ ಕಂದಾಯ‌ ಅಧಿಕಾರಿಗಳು ಹಾಗೂ ಪಂಚಾಯತ್ ಅಧಿಕಾರಿಗಳನ್ನೂ ಗ್ರಾಮಸ್ಥರು ತರಾಟೆಗೆತ್ತಿಕೊಂಡರು. ವಿಮಾನ ನಿಲ್ದಾಣ ಅಧಿಕಾರಿಗಳನ್ನು ಸಂಪರ್ಕಿಸಿ ಈ ತೊಂದರೆಯನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಸಗಾಯಕ ಕಮಿಷನರ್‌ ಭರವಸೆ ನೀಡಿದರು.

ವಿಜಯಪುರದಲ್ಲಿ ಒಂಟಿ ಎತ್ತು ದಾಖಲೆಯ ಮಾರಾಟ, 18 ಲಕ್ಷ 1 ಸಾವಿರಕ್ಕೆ ಸೋಲ್ಡ್‌!

ಕರಾವಳಿಯಲ್ಲಿ ಮಳೆ ಬಿರುಸು, ಯೆಲ್ಲೋ ಅಲರ್ಟ್ ಘೋಷಣೆ:
ಕರಾವಳಿಯಲ್ಲಿ ಸೋಮವಾರ ಅಪರಾಹ್ನದಿಂದ ಮಳೆ ಬಿರುಸುಗೊಂಡಿದೆ. ದ.ಕ.ಜಿಲ್ಲೆಯಾದ್ಯಂತ ಸಂಜೆಯಿಂದ ಆಗಾಗ ಹಗುರದಿಂದ ಸಾಧಾರಣ ಮಳೆ ಕಾಣಿಸಿದೆ. ಇದೇ ವೇಳೆ ಭಾರತೀಯ ಹವಾಮಾನ ಇಲಾಖೆ ಜು.2ರಿಂದ 4ರ ವರೆಗೆ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಿದೆ.

ದ.ಕ.ದಲ್ಲಿ ಕಳೆದ ಎರಡು ದಿನಗಳಿಂದ ಕ್ಷೀಣವಾಗಿದ್ದ ಮಳೆ ಈಗ ತುಸು ಬಿರುಸು ಪಡೆದುಕೊಂಡಿದೆ. ಸೋಮವಾರ ಮಧ್ಯಾಹ್ನ ವರೆಗೆ ಮೋಡ, ಅಲ್ಲಲ್ಲಿ ತುಂತುರು ಹನಿ ಕಂಡುಬಂದರೆ, ಮಧ್ಯಾಹ್ನ ನಂತರ ಎಲ್ಲೆಡೆ ಮಳೆಯ ವಾತಾವರಣ. ಸಂಜೆಯಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿದೆ.

ಪುತ್ತೂರಲ್ಲಿ ಗರಿಷ್ಠ ಮಳೆ: ದ.ಕ.ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗಿನ ವರೆಗೆ ಪುತ್ತೂರಲ್ಲಿ ಗರಿಷ್ಠ 56 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ದಿನದ ಸರಾಸರಿ ಮಳೆ 41.7 ಮಿ.ಮೀ. ದಾಖಲಾಗಿದೆ.

ಬೆಳ್ತಂಗಡಿ 46 ಮಿ.ಮೀ, ಬಂಟ್ವಾಳ 41.6 ಮಿ.ಮೀ, ಮಂಗಳೂರು 16 ಮಿ.ಮೀ, ಸುಳ್ಯ 51.3 ಮಿ.ಮೀ, ಮೂಡುಬಿದಿರೆ 16.2 ಮಿ.ಮೀ, ಕಡಬ 45.2 ಮಿ.ಮೀ, ಮೂಲ್ಕಿ 4.4 ಮಿ.ಮೀ, ಉಳ್ಳಾಲ 35.6 ಮಿ.ಮೀ. ಮಳೆ ದಾಖಲಾಗಿದೆ.

Latest Videos
Follow Us:
Download App:
  • android
  • ios