ಕೆಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಘೋಷಿಸಿದ ಹವಾಮಾನ ಇಲಾಖೆ 

ಬೆಂಗಳೂರು(ನ.01): ಪ್ರಸಕ್ತ ವಾರದ ಕೆಲವು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದ್ದು, ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಳೆ ಹೆಚ್ಚಿರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್‌’ ಘೋಷಿಸಿದೆ. 

ಕಳೆದ ಕೆಲವು ದಿನಗಳಿಂದ ಬಿಡುವು ಕೊಟ್ಟಿರುವ ಮಳೆ ನವೆಂಬರ್‌ನಲ್ಲಿ ಮತ್ತೆ ಸುರಿಯುವ ಸಾಧ್ಯತೆ ಇದೆ. ಈಶಾನ್ಯ ಮುಂಗಾರು ಪ್ರಾರಂಭವಾದ ನಂತರ ಮಳೆ ಹೆಚ್ಚಾಗಲಿದೆ. ಸದ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ನವೆಂಬರ್‌ 2 ರಂದು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ. 

ಮೆಟ್ರೋದ ‘ಮಿಯಾವಾಕಿ ಅರಣ್ಯ’ ಕನಸು ಭಗ್ನಗೊಳಿಸಿದ ಮಳೆರಾಯ..!

ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಹಾಗೂ ಚಾಮರಾಜನಗರ ಭಾಗಗಳಲ್ಲಿ ಮಳೆಯಾಗಲಿದ್ದು, ಈ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಸೋಮವಾರ ತಾಪಮಾನ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌, ಮಂಗಳೂರಿನಲ್ಲಿ ತಾಪಮಾನ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.