ಬೆಂಗಳೂರು(ಜೂ.10): ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಗುರುವಾರದಿಂದ ಮುಂಗಾರಿನ ಅಬ್ಬರ ಹಂತ ಹಂತವಾಗಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುರುವಾರದಿಂದ ಮಳೆ ಅಬ್ಬರ ಹೆಚ್ಚಾಗಲಿರುವ ಕಾರಣ ಉಡುಪಿ, ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಜೂ.12ರವರೆಗೆ ‘ಯೆಲ್ಲೋ ಅಲರ್ಟ್‌’, ಜೂ.13ರಂದು ‘ಆರೆಂಜ್‌ ಅಲರ್ಟ್‌’ ನಂತರ ಜೂ.14ಕ್ಕೆ ‘ರೆಡ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ. ಜತೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಸದ್ಯ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಅಷ್ಟಾಗಿ ಮಳೆ ನಿರೀಕ್ಷೆ ಇಲ್ಲದಿದ್ದರೂ ಕೆಲವು ಕಡೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆ ಆಗಬಹುದು. ನಂತರ ಇದೇ ಭಾಗದಲ್ಲಿ ಮಳೆ ಹೆಚ್ಚಾಗುವ ಕಾರಣಕ್ಕೆ ಜೂ.13 ಮತ್ತು 14ರಂದು ಬೆಳಗಾವಿ, ಬೀದರ್‌, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿ, ಚಿತ್ರದುರ್ಗ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್‌’ ಕೊಡಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಡಿಕೇರಿ: ಅಪಾಯದಲ್ಲಿರುವ 600ಕ್ಕೂ ಅಧಿಕ ಮನೆಗಳಿಗೆ ನೋಟಿಸ್‌

ಜೂ. 15ರಂದು ಗುಡುಗು ಸಹಿತ ಅತ್ಯಂತ ಭಾರಿ ಮಳೆಯಾಗುವ ಕಾರಣ ಕರಾವಳಿಯಲ್ಲಿ ‘ರೆಡ್‌ ಅಲರ್ಟ್‌’ ಘೋಷಿಸಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾದ ಮೇಲ್ಮೈಸುಳಿಗಾಳಿಯ ತೀವ್ರತೆಯೇ ಇದಕ್ಕೆ ಕಾರಣ ಎಂದು ಇಲಾಖೆ ಹೇಳಿದೆ.

ಎಲ್ಲಿ ಎಷ್ಟು ಮಳೆ?: 

ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24ಗಂಟೆಯಲ್ಲಿ ಆಗುಂಬೆಯಲ್ಲಿ 4ಸೆಂ.ಮೀ, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ, ಉತ್ತರ ಕನ್ನಡ ಜಿಲ್ಲೆಯ ಮಂಕಿ ಹಾಗೂ ಕದ್ರಾದಲ್ಲಿ ತಲಾ 3ಸೆಂ.ಮೀ. ಮಳೆ ದಾಖಲಾಗಿದೆ.