ಬೆಂಗಳೂರಿನ ವಾರ್ಡ್‌ಗಳಲ್ಲಿ ‘ಚಿಲುಮೆ’ ಸಂಸ್ಥೆ ನಡೆಸಿದೆ ಎನ್ನಲಾದ ವೋಟರ್‌ಗೇಟ್‌ ಹಗರಣದ ಮಾದರಿಯಲ್ಲೇ ಹುಬ್ಬಳ್ಳಿಯಲ್ಲೂ ಮತದಾರರ ಪಟ್ಟಿಯನ್ನು ಅಕ್ರಮವಾಗಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬ ಶಂಕೆ ಮೂಡಿದೆ. 

ಹುಬ್ಬಳ್ಳಿ (ಡಿ.02): ಬೆಂಗಳೂರಿನ ವಾರ್ಡ್‌ಗಳಲ್ಲಿ ‘ಚಿಲುಮೆ’ ಸಂಸ್ಥೆ ನಡೆಸಿದೆ ಎನ್ನಲಾದ ವೋಟರ್‌ಗೇಟ್‌ ಹಗರಣದ ಮಾದರಿಯಲ್ಲೇ ಹುಬ್ಬಳ್ಳಿಯಲ್ಲೂ ಮತದಾರರ ಪಟ್ಟಿಯನ್ನು ಅಕ್ರಮವಾಗಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬ ಶಂಕೆ ಮೂಡಿದೆ. ಹರ್ಯಾಣ ಮೂಲದ ‘ಎಎಸ್‌ಆರ್‌ ಕಂಪನಿ’ ಚುನಾವಣಾ ಪೂರ್ವ ಸಮೀಕ್ಷೆಯ ನೆಪದಲ್ಲಿ ಮತದಾರರ ಮಾಹಿತಿ ಕಳವು ಮಾಡುತ್ತಿರುವ ಆರೋಪ ಕೇಳಿಬಂದಿದೆ. ಎಎಸ್‌ಆರ್‌ ಕಂಪನಿಯ ಮೂವರು ಸಿಬ್ಬಂದಿ ‘ಚುನಾವಣಾ ಪೂರ್ವ ಸಮೀಕ್ಷೆ’ ನಡೆಸುವಾಗ ಕಾಂಗ್ರೆಸ್‌ ಮುಖಂಡರು ಅವರನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್‌ ನೀಡಿದ ದೂರಿನಂತೆ ಎಫ್‌ಐಆರ್‌ ಕೂಡ ದಾಖಲಾಗಿದೆ.

ಏನಿದು ವಿವಾದ?: ಹರ್ಯಾಣ ಮೂಲದ ಎಎಸ್‌ಆರ್‌ ಎಂಬ ಕಂಪನಿಯ ಪ್ರತಿನಿಧಿಗಳು ಜಿಲ್ಲೆಯಲ್ಲಿ ನ.9ರಿಂದ ಸಮೀಕ್ಷೆ ನಡೆಸುತ್ತಿದ್ದಾರೆ. ಪೊಲೀಸ್‌ ಕಮಿಷನರ್‌ ಕಚೇರಿಗೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿರುವ ಬಗ್ಗೆ ಮನವಿಯನ್ನೂ ಎಎಸ್‌ಆರ್‌ ಕಂಪನಿ ನೀಡಿ ಸ್ವೀಕೃತಿ ಪಡೆದಿದೆ. ಅದನ್ನೇ ತೋರಿಸಿ ‘ಗೋ ಸರ್ವೇ’ ಎಂಬ ಆ್ಯಪ್‌ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಜನರ ವೋಟರ್‌ ಐಡಿ, ಅವರ ಜಾತಿ, ಆದಾಯ, ಯಾವ ಪಕ್ಷ ಉತ್ತಮ ಎಂಬುದೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ.

Voters Data Theft Case: ಚಿಲುಮೆ: ನಾಲ್ವರು ಆರ್‌ಒಗಳ ಬಂಧನ

ಗುರುವಾರ ಪಶ್ಚಿಮ ಹಾಗೂ ಸೆಂಟ್ರಲ್‌ ಕ್ಷೇತ್ರದ ವ್ಯಾಪ್ತಿಯ ನವ ಆನಂದನಗರದಲ್ಲಿ ಸಮೀಕ್ಷೆ ನಡೆಸುತ್ತಿರುವಾಗ ಕಾಂಗ್ರೆಸ್‌ ಮುಖಂಡರಾದ ರಜತ್‌ ಉಳ್ಳಾಗಡ್ಡಿಮಠ, ಪಾಲಿಕೆ ಸದಸ್ಯ ಆರೀಫ್‌ ಭದ್ರಾಪುರ ಸೇರಿ ಹಲವರು ಸಮೀಕ್ಷೆ ಬಗ್ಗೆ ತಿಳಿದುಕೊಂಡು ವಿಚಾರಣೆ ನಡೆಸಿದ್ದಾರೆ. ಇವರು ವಿಚಾರಣೆ ನಡೆಸಲು ಶುರು ಮಾಡುತ್ತಿದ್ದಂತೆ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ಅನುಮಾನಗೊಂಡ ಕಾಂಗ್ರೆಸ್ಸಿಗರು ಉಳಿದ ಮೂವರನ್ನು ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂವರು ಸ್ಥಳೀಕರು: ಇದೀಗ ಕಾಂಗ್ರೆಸ್‌ ಮುಖಂಡರ ಕೈಗೆ ಸಿಕ್ಕಿ ಬಿದ್ದಿರುವವರು ಸ್ಥಳೀಯರು. ಇವರು ಕಳೆದೊಂದು ತಿಂಗಳಿಂದ ಈ ಸಂಸ್ಥೆಯಲ್ಲಿ ಕೆಲಸಕ್ಕಿದ್ದಾರೆ. ಆದರೆ ಇವರ ಬಳಿ ಕಂಪನಿಯ ಐಡಿ ಇಲ್ಲ. ಸಮೀಕ್ಷೆ ನಡೆಸಿಕೊಟ್ಟರೆ ತಿಂಗಳಿಗೆ .8ರಿಂದ .10 ಸಾವಿರ ಸಂಬಳ ನೀಡುವುದಾಗಿ ಕಂಪನಿ ತಿಳಿಸಿದೆಯಂತೆ. ಹರ್ಯಾಣ ಮೂಲದ ಕಂಪನಿಯ ಸ್ಥಳೀಯ ಸಮನ್ವಯಕಾರನಾಗಿ ಮಹೇಶ್‌ ಲಂಬಾಣಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಸಮೀಕ್ಷೆ ನಡೆಸುತ್ತಿರುವವರು ಮಹೇಶ್‌ ಮೂಲಕ ನೇಮಕವಾಗಿದ್ದಾರಂತೆ. ಇದೀಗ ಪೊಲೀಸರು ಮಹೇಶ ಎಂಬುವರನ್ನು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಮಹೇಶ್‌ ವಿಚಾರಣೆ ಬಳಿಕವೇ ಉಳಿದ ವಿಚಾರಗಳು ಬಯಲಿಗೆ ಬರಲಿವೆ.

ಕಾಂಗ್ರೆಸ್‌ ಆರೋಪ: ವೋಟರ್‌ಗೇಟ್‌ ಹಗರಣದ ಹಿಂದೆ ಬಿಜೆಪಿ ಇದೆ. ಬಿಜೆಪಿ ವಿರುದ್ಧ ಯಾರಾರ‍ಯರಿದ್ದಾರೆಯೋ ಆ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗುತ್ತಿದೆ. ವಾಮಮಾರ್ಗದ ಮೂಲಕ ಗೆಲ್ಲುವ ಹುನ್ನಾರವನ್ನು ಬಿಜೆಪಿ ನಡೆಸಿದೆ. ಇದರಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದರ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ತಿಳಿಸಿದ್ದಾರೆ

ಎಎಸ್‌ಆರ್‌ ಕಂಪನಿಗೆ ಸಮೀಕ್ಷೆ ನಡೆಸುವಂತೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆ ಕಂಪನಿ ಯಾವ ರೀತಿ ಸಮೀಕ್ಷೆ ನಡೆಸುತ್ತಿದೆ ಎಂಬುದು ಕೂಡ ನಮಗೆ ಗೊತ್ತಿಲ್ಲ. ಇದೀಗ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಏನಾಗಿದೆಯೆಂಬುದನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಲಾಗುವುದು.
- ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

ಸಿದ್ದು ಅವಧಿಯ ಚಿಲುಮೆ ವ್ಯವಹಾರವೂ ತನಿಖೆ: ಸಿಎಂ ಬೊಮ್ಮಾಯಿ

ಮತದಾರರ ಮಾಹಿತಿ ಸಂಗ್ರಹ ಅಥವಾ ಸಮೀಕ್ಷೆಗೆ ಯಾರಿಗೂ ಪೊಲೀಸ್‌ ಕಮಿಷನರೇಟ್‌ ಅನುಮತಿ ಕೊಟ್ಟಿಲ್ಲ. ಸದ್ಯ ಪ್ರಕರಣ ದಾಖಲಾಗಿದ್ದು, ಎಎಸ್‌ಆರ್‌ ಕಂಪನಿ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಕಂಪನಿಯ ಮೇಲಧಿಕಾರಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದೇವೆ. ಪ್ರಕರಣ ಕುರಿತು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು.
- ಲಾಬೂರಾಮ್‌, ಪೊಲೀಸ್‌ ಆಯುಕ್ತ