ನಾವು ಸಂವಿಧಾನದ ಬಲದಲ್ಲಿದ್ದೀವಾ, ನೆರಳಲ್ಲಿದ್ದೀವಾ ಎಂಬ ಅರಿವು ಅಗತ್ಯ: ಹಂಸಲೇಖ
ನಾವು ಸಂವಿಧಾನದ ನೆರಳಲ್ಲಿದ್ದೀವಾ ಅಥವಾ ಸಂವಿಧಾನದ ಬಲದಲ್ಲಿದ್ದೀವಾ ಎಂಬುದನ್ನು ಅರಿಯಬೇಕು ಎಂದು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಡಾ. ಹಂಸಲೇಖ ತಿಳಿಸಿದರು.
ಮೈಸೂರು (ಜು.23): ನಾವು ಸಂವಿಧಾನದ ನೆರಳಲ್ಲಿದ್ದೀವಾ ಅಥವಾ ಸಂವಿಧಾನದ ಬಲದಲ್ಲಿದ್ದೀವಾ ಎಂಬುದನ್ನು ಅರಿಯಬೇಕು ಎಂದು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಡಾ. ಹಂಸಲೇಖ ತಿಳಿಸಿದರು. ಅಮೂಲ್ಯ ಪುಸ್ತಕ ಹೊರ ತಂದಿರುವ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ‘ಸಂವಿಧಾನದ ನೆರಳಲ್ಲಿ’ (ಸಾಮಾಜಿಕ ಮತ್ತು ರಾಜಕೀಯ ಕುರಿತ ಬರಹಗಳು) ಪುಸ್ತಕವನ್ನು ಅವರು ಶನಿವಾರ ಕಲಾಮಂದಿರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಂವಿಧಾನ ಎಂಬುದು ದೊಡ್ಡ ವೃಕ್ಷ, ಅದರಡಿ ಮಲಗಿ ನಿದ್ದೆ ಮಾಡಬಾರದು. ಆ ನೆರಳಲ್ಲಿ ಮಲಗಿ ಕಣ್ಣುಬಿಟ್ಟು ಕನಸು ಕಾಣಬೇಕು. ಬಿಟ್ಟಕಣ್ಣಿನ ಕನಸನ್ನು ಸಾಕಾರಗೊಳಿಸಬೇಕು. ಹೆಚ್ಚಿನ ಶ್ರಮವಹಿಸಿ ಜಗತ್ತಿನೊಂದಿಗೆ ಜೀವಂತವಾಗಿ ವ್ಯವಹರಿಸಬೇಕು ಎಂದು ಅವರು ಹೇಳಿದರು. ಪ್ರಗತಿಪರ ಚಿಂತಕರು ಸಂವಿಧಾನದ ಪರ ಇದ್ದಾರೆ. ಅವರ ಅನುಭವ ಅತ್ಯಂತ ಮೌಲ್ಯವಾದ್ದು. ಅವುಗಳು ಬರಹ ರೂಪದಲ್ಲಿ ಬರಬೇಕು. ಆ ಸಂಪತ್ತನ್ನು ಯುವ ಪೀಳಿಗೆಗೆ ತಲುಪಿಸುವುದು ಎಲ್ಲಾ ಲೇಖಕರ ಕರ್ತವ್ಯ. ನಾವು ಇನ್ನು ಮುಂದೆ ಪ್ರಗತಿಪರರನ್ನು ದೂರವಿಡುವುದು, ಅನುಮಾನಿಸುವುದು ಬೇಡ.
ಮೋದಿ ರಾಜ್ಯಕ್ಕೆ ಬಂದ್ರೆ ನಮ್ಮ ಅಭ್ಯರ್ಥಿಗಳು 3-4 ಲಕ್ಷ ಅಂತರದಿಂದ ಗೆಲ್ಲುತ್ತಾರೆ: ಶಾಸಕ ಹಿಟ್ನಾಳ್ ವ್ಯಂಗ್ಯ
ಗಣತಾದಿಪರಿವಾರ, ಭೀಮಾಧಿಪರಿವಾರ, ಕಾನೋನಾದಿಪರಿವಾರ ಒಂದಕ್ಕೊಂದು ಸಾಂಸ್ಕೃತಿಕವಾಗಿ ಹೆಣಿಗೆಯಾಬೇಕು ಎಂದು ಅವರು ತಿಳಿಸಿದರು. ಒಬ್ಬ ರಾಜಕಾರಣಿ ಅಧಿಕಾರದಲ್ಲಿದ್ದಾಗ, ಕೆಳಗಿಳಿದಾಗ ಹಾಗೂ ಮತ್ತೇ ಅಧಿಕಾರಕ್ಕೇರಿದಾಗ ತಮಗಾದ ಅನುಭವಗಳನ್ನು ಬರೆದಿಡುವುದು ಬಹುಮುಖ್ಯವಾದ ವಿಚಾರ. ಈ ರೀತಿಯಲ್ಲಿ ಕೆಂಗಲ್ ಹನುಮಂತಯ್ಯ ಮತ್ತು ಡಿ. ದೇವರಾಜ ಅರಸು ಅವರು ತಮ್ಮ ಜೀವಿತ ಕಾಲದ ಅನುಭವಗಳನ್ನು ಹಾಗೂ ಮೌಲ್ಯಗಳನ್ನು ಬರೆಯದೇ ನಾವು ಏನನ್ನೊ ಕಳೆದುಕೊಂಡಿದ್ದೇವೆ. ಡಾ.ಎಚ್.ಸಿ. ಮಹದೇವಪ್ಪ ಅವರು ತಾವು ಕಂಡದ್ದನ್ನು ಬರೆದಿರುವುದು ಸಂತೋಷದ ವಿಚಾರ ಎಂದರು.
ಈ ಪುಸ್ತಕದ ಇಡೀ ಓದು ಹಾಡು ಮಾತಿನ ಅಡಿಗೆ ಹಾಗೂ ನೇರ ಮಾತಿನ ಬಡಿಗೆಯೇ ಹೌದು. ಇದರಲ್ಲಿ ಎಲ್ಲೂ ತೊಡಕುಗಳಿಲ್ಲ, ಉಪಮೇಯ, ಉಪಮಾನಗಳಿಲ್ಲ. ಅವರು ಕಂಡದ್ದು, ಅನುಭವಿಸಿದ್ದನ್ನು ದಾಖಲಿಸಿದ್ದಾರೆ. ಒಬ್ಬ ರಾಜಕಾರಣಿ ನೇರಮಾತಿನ ಬಡಿಗೆ ಕೈಗೆತ್ತಿಗೊಂಡು ಸಮಾಜಕ್ಕೆ ಹೇಳುವುದು ಬಹಳ ಪ್ರಮುಖವಾಗಿದೆ. ಅವರ ಬಡಿಗೆಯಂಥ ಮಾತುಗಳ ಮೂಲಕ ಈ ದೇಶದಲ್ಲಿ ಚರ್ಚೆಯಾಗುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಪುಸ್ತಕ ಕುರಿತು ವಿಮರ್ಶಕ ಡಾ.ಕೆ.ವೈ. ನಾರಾಯಣಸ್ವಾಮಿ ಮಾತನಾಡಿ, ಸಚಿವರು ತಾವು ಕಂಡಂತ ರಾಜಕೀಯ ಹಾಗೂ ಸಾಮಾಜಿಕ ಸಂಗತಿಗಳನ್ನು ತುಂಬಾ ಪರಿಣಾಮಕಾರಿಯಾಗಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅನೇಕ ರಾಜಕಾರಣಿಗಳು ತಮ್ಮ ನಡೆನುಡಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಮಾತಾನಾಡಿ, ರಾಜಕಾರಣಿಗೆ ಬದ್ಧತೆ ಹಾಗೂ ಪ್ರಭುದ್ಧತೆ ಮುಖ್ಯ. ಆ ಸಾಲಿನಲ್ಲಿನ ಅಪರೂಪದ ರಾಜಕಾರಣಿ ಡಾ.ಎಚ್.ಸಿ. ಮಹದೇವಪ್ಪ ಅವರು ಕೃತಿಯಲ್ಲಿ ವ್ಯಕ್ತಿಗತವಾಗಿ ಯಾವುದೇ ನಿಂದನಾತ್ಮಕ ಪದ ಬಳಸದೆ, ತತ್ವಕ್ಕೆ ಕೊಡಬೇಕಾದ ಸೂಕ್ತ ಬೆಲೆ ಕೊಟ್ಟಿದ್ದಾರೆ. ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಕೆ. ಶಿವಕುಮಾರ್, ಜಗದೀಶ್ ಕೊಪ್ಪ, ಬಿ. ಚಂದ್ರೇಗೌಡ, ಸಂಗೀತ ವಿವಿ ಕುಲಪತಿ ಡಾ. ನಾಗೇಶ್ ವಿ. ಬೆಟ್ಟಕೋಟೆ, ದಸಂಸ ಮುಖಂಡ ಗುರುಪ್ರಸಾದ್ ಕೆರೆಗೋಡು, ಕಾಂಗ್ರೆಸ್ ಮುಖಂಡರಾದ ಸುನಿಲ್ ಬೋಸ್, ಅನಿಲ್ ಬೋಸ್, ನಟರಾಜ ಹುಳಿಯಾರ್, ಪಿ. ಚಂದ್ರಿಕಾ, ಸಾನ್ವೆಹಳ್ಳಿ ಸತೀಶ್, ಎಚ್.ಟಿ. ಪೋತೆ, ಕೆ. ವೆಂಕಟರಾಜು, ಪ್ರೊ. ಕಾಳೇಗೌಡ ನಾಗವಾರ, ಎಂ.ಜಿ. ರಾಮಮೂರ್ತಿ, ಶಿವಕುಮಾರ್ ಮಾವಲಿ, ಎಂ. ಲಕ್ಷ್ಮಣ, ವಿ.ಎಲ್. ನರಸಿಂಹಮೂರ್ತಿ, ಸ್ವಾಮಿ ಆನಂದ್, ಕಿರಣ್ ಗಾಜನೂರು, ಮಹೇಶ್ ಸೋಸಲೆ, ಎಚ್.ಕೆ. ರಮೇಶ್ ಮೊದಲಾದವರು ಇದ್ದರು.
ಸುತ್ತೂರು, ಚುಂಚನಗಿರಿ ಎರಡು ಕಣ್ಣುಗಳಿದ್ದಂತೆ: ಸಚಿವ ಚಲುವರಾಯಸ್ವಾಮಿ
ನನ್ನ ಭಾವನೆ, ನಿಲುವು ಮತ್ತು ಅಭಿಪ್ರಾಯಗಳನ್ನು ಅಕ್ಷರ ರೂಪಕ್ಕಿಳಿಸಿದ ಪುಸ್ತಕ ಇದಾಗಿದೆ. ಸಾಹಿತಿಗಳು, ಪ್ರಗತಿಪರ ಚಿಂತಕರು, ರಾಜಕೀಯ ಮುಖಂಡರು, ಯುವ ಸಮುದಾಯ, ಮಹಿಳೆಯರು ಹಾಗೂ ಸಾರ್ವಜನಿಕರು ಈ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ಈ ಪುಸ್ತಕವನ್ನು ಎಲ್ಲರೂ ಓದಿ ವಿಮರ್ಶಿಸಬೇಕು.
- ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು