ತಡರಾತ್ರಿ ಅಡುಗೆ ಮಾಡದ್ದಕ್ಕೆ ಪತ್ನಿ ಕೊಂದವನಿಗೆ ಜೀವಾವಧಿ..!
ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಬೆಂಗಳೂರು(ಡಿ.29): ಮಧ್ಯರಾತ್ರಿ ಎರಡು ಗಂಟೆಯಲ್ಲಿ ಅಡುಗೆ ಮಾಡಲು ನಿರಾಕರಿಸಿದ್ದ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಂದಿದ್ದನ್ನು ದಿಢೀರ್ ಪ್ರಚೋದನೆಗೆ ಒಳಗಾಗಿ ನಡೆಸಿದ ಹತ್ಯೆಯೆಂದು (ಉದ್ದೇಶಪೂರ್ವಕವಲ್ಲದ ಕೊಲೆ) ತೀರ್ಮಾನಿಸಿ ಪತಿಗೆ ಕೇವಲ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಮಧ್ಯರಾತ್ರಿ 2 ಗಂಟೆಗೆ ಅಡುಗೆ ಮಾಡದ ಮಾತ್ರಕ್ಕೆ ದಿಢೀರ್ ಆಗಿ ಪ್ರಚೋದನೆಗೊಂಡು ಹೆಂಡತಿಯ ಮೇಲೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬುದು ನಂಬಲಾರ್ಹವಲ್ಲ. ಗಂಭೀರ ಹಾಗೂ ದಿಢೀರ್ ಪ್ರಚೋದನೆಯಿಂದ ಆರೋಪಿ ಕೃತ್ಯ ಎಸಗಿದ್ದಾನೆ ಎಂಬುದನ್ನು ಸಾಕ್ಷ್ಯಾಧಾರಗಳಿಲ್ಲದೆ ತೀರ್ಮಾನಿಸಲಾಗದು. ಸಾಮಾನ್ಯವಾಗಿ ಅಪರಾಧ ಕೃತ್ಯದ ಉದ್ದೇಶ ಆರೋಪಿಯ ಮನಸ್ಸಿನಲ್ಲಿ ಅಡಗಿರುತ್ತದೆ. ಪ್ರತಿ ಪ್ರಕರಣದ ಅಂಶಗಳು ಮತ್ತು ಸಂದರ್ಭಗಳಿಂದ ಅಪರಾಧದ ಉದ್ದೇಶ ಹುಡುಕಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಇಂಥದ್ದೇ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕು ನೌಕರರಿಗಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು !
ಅಪರಾಧ ಪ್ರಕರಣದಲ್ಲಿ ಆರೋಪಿಯ ಉದ್ದೇಶ ಮುಖ್ಯವಲ್ಲ. ಆರೋಪಿಗೆ ಆತನ ಕೃತ್ಯದ ಮತ್ತು ಅದರ ಪರಿಣಾಮಗಳ ಬಗ್ಗೆ ಜ್ಞಾನ ಇದ್ದರೆ ಸಾಕು. ಆ ಸಂದರ್ಭದಲ್ಲಿ ಉದ್ದೇಶವಿಲ್ಲದಿದ್ದರೂ ಆರೋಪಿ ಕೊಲೆಗೆ ಹೊಣೆಗಾರನಾಗಬಹುದು. ಈ ಪ್ರಕರಣದಲ್ಲಿ ಮೃತ ದೇಹದ ಮೇಲೆ 21 ಗಾಯಗಳಿದ್ದವು. ಪತ್ನಿಯ ದೇಹದ ಮೇಲೆ ಆರೋಪಿ ಭೀಕರವಾಗಿ ಹಲ್ಲೆ ನಡೆಸಿ, ನಂತರ ಉಸಿರುಗಟ್ಟಿಸಿದ್ದಾನೆ. ಈ ಕೃತ್ಯದಿಂದ ಪತ್ನಿ ಸಾವನ್ನಪ್ಪಬಹುದು ಎಂಬ ಜ್ಞಾನ ಆರೋಪಿಗಿತ್ತು. ಉಸಿರುಗಟ್ಟಿಸಿದರೆ ಸಾವು ಸಂಭವಿಸುತ್ತದೆ ಎಂಬುದನ್ನು ಯಾವುದೇ ವೈದ್ಯಕೀಯ ಹಾಗೂ ಕಾನೂನಿನ ಜ್ಞಾನವಿಲ್ಲದ ಸಾಮಾನ್ಯ ಮನುಷ್ಯ ಕೂಡ ಹೇಳಬಲ್ಲನು ಎಂದು ಹೈಕೋರ್ಟ್ ನಿರ್ಧರಿಸಿದೆ.
ಅಪರಾಧ ಪ್ರಕರಣದಲ್ಲಿ ಆರೋಪಿಯ ನಡವಳಿಕೆಯೂ ಮುಖ್ಯ. ಕೋಪ ಕಡಿಮೆಯಾದ ನಂತರ ಹಲ್ಲೆಗೊಳಗಾದ ಪತ್ನಿಗೆ ಜೀವ ಇದೆಯೇ? ಚಿಕಿತ್ಸೆ ಕೊಡಿಸಬಹುದೇ? ಎಂಬುದಾಗಿ ಯೋಚಿಸಿ ಆ ನಿಟ್ಟಿನಲ್ಲಿ ನಡೆದುಕೊಳ್ಳಬಹುದಾಗಿತ್ತು. ಆದರೆ, ಈ ಪ್ರಕರಣದಲ್ಲಿ ಪತ್ನಿ ಮೃತದೇಹದ ಜೊತೆಗೆ ರಾತ್ರಿ ಇಡೀ ಇದ್ದು ಪತಿ ಮುಂಜಾನೆ ಪರಾರಿಯಾಗಿದ್ದಾನೆ. 20-25 ವರ್ಷಗಳಿಂದ ಸಹಜೀವನದಲ್ಲಿದ್ದ ಮಹಿಳೆ (ಪತ್ನಿ) ಸಾವಿಗೆ ಆತನಲ್ಲಿ ಪಶ್ಚಾತಾಪವೇ ಇಲ್ಲ. ಈ ನಡವಳಿಕೆ ಪತ್ನಿಯನ್ನು ಕೊಲೆ ಮಾಡುವ ಉದ್ದೇಶ ಪತಿಯಲ್ಲಿತ್ತು ಎಂಬುದನ್ನು ತೋರಿಸುತ್ತದೆ ಎಂದ ಹೈಕೋರ್ಟ್, ಪತಿಗೆ ಕೊಲೆ (ಉದ್ದೇಶಪೂರ್ವಕವಾಗಿ ಮಾಡಿರುವುದು) ಅಪರಾಧಕ್ಕೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಕ್ರೆಬೈಲು ಆನೆ ಶಿಬಿರದ ಬಳಿ ಬೋಟಿಂಗ್: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಪ್ರಕರಣದ ವಿವರ:
ಕೊಡಗಿನ ಕಮಲ ಮತ್ತು ರವಿ ಸುಳ್ಯ ತಾಲೂಕಿನಲ್ಲಿ ಅಳಕಡ್ಡಿಗೆ 2013 ಡಿ.12ರಂದು ತೆರಳಿ ಮಹಿಳೆಯೊಬ್ಬರ ಬಳಿ ಕೂಲಿ ಕೆಲಸಕ್ಕೆ ಸೇರಿದ್ದರು. ಮಾಲೀಕರು ತಂಗಲು ಶೆಡ್‌ವೊಂದನ್ನು ನೀಡಿದ್ದರು. ಡಿ.29ರಂದು ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿದ್ದ ದಂಪತಿ ಸಂಜೆ ಕಣಿಯೂರುಗೆ ತೆರಳಿ ದಿನಸಿ ಖರೀದಿಸಿ ಬಂದಿದ್ದರು. ಆದರೆ, ಅಡುಗೆ ಮಾಡದೆ ನಿದ್ರೆಗೆ ಜಾರಿದ್ದರು. ಡಿ.30ರಂದು ಮಧ್ಯರಾತ್ರಿ 2 ಗಂಟೆಗೆ ಎಚ್ಚರಗೊಂಡಿದ್ದ ರವಿ, ಹಸಿವಾಗುತ್ತಿರುವ ಕಾರಣ ಅಡುಗೆ ಮಾಡುವಂತೆ ಕಮಲಗೆ ಹೇಳಿದ್ದ. ಅದಕ್ಕೆ ನಿರಾಕರಿಸಿದ್ದರಿಂದ ಕೋಪಗೊಂಡ ಆತ, ಕಮಲಳ ತಲೆಯನ್ನು ಗೋಡೆಗೆ ಬಲವಾಗಿ ಹೊಡೆದು, ಕೋಲಿನಿಂದ ಮುಖಕ್ಕೆ ಹೊಡೆದು ನಂತರ ಕತ್ತುಹಿಸುಕಿ ಉಸಿರುಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ. ಪ್ರಕರಣದ ತನಿಖೆ ನಡೆಸಿದ್ದ ಸುಳ್ಯ ವೃತ್ತ ಪೊಲೀಸ್ ನಿರೀಕ್ಷಕರು, ರವಿ ವಿರುದ್ಧ ಕೊಲೆ ಪ್ರಕರಣದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ದಕ್ಷಿಣ ಕನ್ನಡದ ಪುತ್ತೂರಿನಲ್ಲಿರುವ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಡುಗೆ ಮಾಡದ್ದಕ್ಕೆ ಬೇಸರಗೊಂಡು ರವಿ ಥಳಿಸಿದ ಕಾರಣ ಕಮಲ ಸಾವನ್ನಪ್ಪಿದ್ದರು. ಇದು ದಿಢೀರ್ ಪ್ರಚೋದನೆಯಿಂದ ಸಂಭವಿಸಿದ ನರಹತ್ಯೆಯಾಗಿದ್ದು, ಉದ್ದೇಶಪೂರ್ವಕ ಕೊಲೆಯಲ್ಲ ಎಂದು ತೀರ್ಮಾನಿಸಿ, ರವಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ತನಿಖಾಧಿಕಾರಿಯಾದ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪೊಲೀಸರ ಪರ ಸರ್ಕಾರಿ ಅಭಿಯೋಜಕ ಪಿ.ತೇಜೇಶ್ ವಾದ ಮಂಡಿಸಿದ್ದರು.