ಸುಪ್ರೀಂ ಮುಂದೆ ವಾದ ಮಂಡಿಸಿದ ಹಿಜಾಬ್ ಪರ ವಕೀಲರು, ಕೇಸರಿ ಶಾಲು ನಂಬಿಕೆಯ ಆಕ್ರಮಣಕಾರಿ ಪ್ರದರ್ಶನ: ವಕೀಲ
ನವದೆಹಲಿ(ಸೆ.09): ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಮೂರನೇ ದಿನದ ವಾದ-ಪ್ರತಿವಾದ ನಡೆಯಿತು. ಈ ವೇಳೆ, ಹಿಜಾಬ್ ಧರ್ಮ ಸೂಕ್ಷ್ಮ ಪ್ರಕರಣ. ಇಂಥ ಧರ್ಮ ಸೂಕ್ಷ್ಮ ಪ್ರಕರಣಗಳು ಸಂವಿಧಾನ ಪೀಠದಲ್ಲಿ ವಿಚಾರಣೆಯಾಗಬೇಕಿದೆ ಎಂದು ಹಿಜಾಬ್ ಪರ ವಕೀಲರು ಸುಪ್ರೀಂಕೋರ್ಟ್‌ಲ್ಲಿ ವಾದಿಸಿದರು. ಹಿಜಾಬ್ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿ ಆದೇಶ ಹೊರಡಿಸಿತು.
ಹಿಜಾಬ್ ವಿಚಾರವಾಗಿ ನ್ಯಾ.ಹೇಮಂತ್ ಗುಪ್ತಾ ನೇತೃತ್ವದ ದ್ವಿಸದಸ್ಯ ನ್ಯಾಯಪೀಠದ ಮುಂದೆ ಮೊದಲಿಗೆ ತಮ್ಮ ವಾದ ಮುಂದಿಟ್ಟಹಿಜಾಬ್ ಪರ ಹಿರಿಯ ವಕೀಲ ದೇವದತ್ ಕಾಮತ್, ಕೇಸರಿ ಶಾಲು ಧರಿಸುವುದು ನಂಬಿಕೆಯ ಆಕ್ರಮಣಕಾರಿ ಪ್ರದರ್ಶನ. ನಾಮ, ರುದ್ರಾಕ್ಷಿ ಇತ್ಯಾದಿ ನಂಬಿಕೆಯ ಮುಗ್ಧ ಅಭಿವ್ಯಕ್ತಿಗಳಿಗೆ ಸಂವಿಧಾನದಲ್ಲಿ 25ನೇ ವಿಧಿ ಅಡಿ ರಕ್ಷಣೆ ಇದೆ. ಆದರೆ ಕೇಸರಿ ಶಾಲಿಗೆ ರಕ್ಷಣೆ ಇಲ್ಲ ಎಂದರು.
ಹಿಜಾಬ್ ವಿವಾದ: ಇಂದು ಮೊದಲ ಬಾರಿಗೆ ಸುಪ್ರೀಂನಲ್ಲಿ ವಿಚಾರಣೆ
ಸಂವಿಧಾನದ ಪ್ರಕಾರ ನಾನು ನನ್ನ ಹಕ್ಕು ಚಲಾಯಿಸುವಂಥ ವಾತಾವರಣ ಸೃಷ್ಟಿಸುವುದು ಸರ್ಕಾರದ ಕರ್ತವ್ಯ. ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಒತ್ತಾಯಿಸಿದ ಬಳಿಕ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದನ್ನು ನಿಷೇಧಿಸಿದೆ. ಹೀಗೆ ಒತ್ತಡಗಳಿಗೆ ಒಳಗಾಗಿ ಸರ್ಕಾರ ಇಂಥ ಆದೇಶಗಳನ್ನು ಹೊರಡಿಸುವುದು ಎಷ್ಟುಸರಿ ಎನ್ನುವ ಪ್ರಶ್ನೆಯನ್ನು ಪೀಠದ ಮುಂದಿಟ್ಟರು.
ಕೊನೆಗೆ ಇಂಥ ಧರ್ಮಸೂಕ್ಷ್ಮ ಪ್ರಕರಣಗಳು ಸಂವಿಧಾನ ಪೀಠದಲ್ಲಿ ವಿಚಾರಣೆಯಾಗಬೇಕಿದೆ ಅಂಥ ಕಾಮತ್ ವಾದ ಮುಗಿಸಿದರೆ, ಹಿಜಾಬ್ ಪರ ಮತ್ತೊಬ್ಬ ವಕೀಲ ನಿಜಾಮುದ್ದೀನ್ ಪಾಷಾ ಕೂಡ ಸಂವಿಧಾನ ಪೀಠದಲ್ಲಿ ವಿಚಾರಣೆಯಾಗಬೇಕು ಅಂತಲೇ ವಾದ ಆರಂಭಿಸಿದರು. ಶಿರೂರು ಮಠ, ದರ್ಗಾ ಸಮಿತಿಯ ಪ್ರಕರಣದಲ್ಲಿ 5 ಮತ್ತು 7 ಮಂದಿಯ ನ್ಯಾಯಪೀಠದಲ್ಲಿ ವಿಭಿನ್ನ ಅಭಿಪ್ರಾಯಗಳು ಹೊರಬಿದ್ದ ಹಿನ್ನೆಲೆಯಲ್ಲಿ ಇದೀಗ 9 ಮಂದಿಯ ಪೀಠದ ಮುಂದೆ ವಿಚಾರಣೆ ಇದೆ. ಹಾಗಾಗಿ ಇಂಥ ಪ್ರಕರಣಗಳು ಸಂವಿಧಾನ ಪೀಠದಲ್ಲಿ ವಿಚಾರಣೆ ನಡೆಯಬೇಕು ಎಂದರು. ಅಂಥ ಸನ್ನಿವೇಶ ನಿರ್ಮಾಣವಾದರೆ ನೋಡೋಣ ಎಂದು ಇದೇ ವೇಳೆ ನ್ಯಾಯಪೀಠ ಹೇಳಿತು.
ಪ್ರಶ್ನೆಗಳ ಸುರಿಮಳೆಗೈದ ನ್ಯಾಯಪೀಠ
ವಿಚಾರಣೆ ವೇಳೆ ಹಿಜಾಬ್ ಧರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯರ ಪ್ರವೇಶ ನಿರಾಕರಿಸಿರುವ ಬಗ್ಗೆ ಕಾಲೇಜುಗಳಿಂದ ಲಿಖಿತ ಆದೇಶ ಇದೆಯಾ ಎಂದು ಪೀಠ ಪ್ರಶ್ನಿಸಿದಾಗ, ಇಲ್ಲ ಎಂದು ಕಾಮತ್ ಉತ್ತರಿಸಿದರು. ಜತೆಗೆ, ಏಕತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾರಣ ಮುಂದಿಟ್ಟುಕೊಂಡು ಸಮವಸ್ತ್ರ ಧರಿಸಿ ಎಂದು ಕರ್ನಾಟಕ ಸರ್ಕಾರ ಹೇಳಿದೆ ಎಂದರು. ಇದಕ್ಕೆ ನಿಮ್ಮ ಅಭ್ಯಂತರ ಅಥವಾ ಸಮಸ್ಯೆ ಏನು? ಎಂದು ನ್ಯಾ.ಸುಧಾಂಶು ಧುಲಿಯಾ ಪ್ರಶ್ನಿಸಿದರು. ಇದೇ ಪ್ರಶ್ನೆಯನ್ನು ಮುಂದುವರಿಸಿದ ನ್ಯಾ.ಹೇಮಂತ್ ಗುಪ್ತಾ, ಹಿಜಾಬ್ ನಿಷೇಧ ಸಂವಿಧಾನದ 25ನೇ ವಿಧಿಯ ಉಲ್ಲಂಘನೆ ಅಲ್ಲ ಎಂದು ಸರ್ಕಾರವೇ ಹೇಳಿದೆ, ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದರು.
ಶಾಸಕರೇ ಇಲ್ಲಿ ಅಧ್ಯಕ್ಷರು: ಸಮವಸ್ತ್ರವನ್ನು ನಿರ್ಧರಿಸುವ ಅಧಿಕಾರವನ್ನು ಸರ್ಕಾರ ಸ್ಥಳೀಯ ಶಾಲಾ ಆಡಳಿತ ಮಂಡಳಿಗೆ ನೀಡಿದೆ. ಆದರೆ ಆಡಳಿತ ಮಂಡಳಿಯಲ್ಲಿ ಶಾಸಕರೇ ಇದ್ದಾರೆ. ಅವರೇ ಅಧ್ಯಕ್ಷರು ಎಂದು ಕಾಮತ್ ಹೇಳಿದರು. ಆಗ ಆಡಳಿತ ಮಂಡಳಿಯಲ್ಲಿ ಶಾಸಕರು ಅಥವಾ ಜನಪ್ರತಿನಿಧಿಗಳು ಇರುವುದು ನಿಮಗೆ ಇಷ್ಟವಿಲ್ಲವೇ ಎಂದು ನ್ಯಾ.ಹೇಮಂತ ಗುಪ್ತಾ ಪ್ರಶ್ನಿಸಿದರು.
ಹಿಜಾಬ್‌ಗೆ ಸಿಗದ ಅನುಮತಿ ಕರಾವಳಿಯಲ್ಲಿ ಟೀಸಿ ಪಡೆದ ನೂರಾರು ಮುಸ್ಲಿಂ ವಿದ್ಯಾರ್ಥಿನಿಯರು!
ಶಾಸಕರಿಗೆ ರಾಜ್ಯ ಸರ್ಕಾರದ ಅಧೀನ ಅಧಿಕಾರ ಇಲ್ಲ ಎಂದು ಈ ಹಿಂದೆಯೇ ನ್ಯಾಯಪೀಠ ಹೇಳಿದೆ. ಈ ಶಾಸಕರದ್ದು ಯಾವುದು ನೈತಿಕತೆ ಎನ್ನುವುದು ನಿರ್ಧರಿಸಬಹುದಾಗಿದೆ. ಇಂಥ ಕಾನೂನುಬಾಹಿರ ನಿರ್ಧಾರಗಳ ಅಗತ್ಯತೆಯನ್ನು ನ್ಯಾಯಪೀಠ ಮನಗಾಣಬೇಕು ಎಂದು ಕಾಮತ್ ವಾದಿಸಿದರು.
ಸಿಖ್ಖರ ಪೇಟವೂ ಪ್ರಸ್ತಾಪ
ಸಿಖ್ಖರ ಪೇಟದ ವಿಚಾರವೂ ವಿಚಾರಣೆ ವೇಳೆ ಪ್ರಸ್ತಾಪವಾಯಿತು. ವಕೀಲ ಪಾಷಾ ಪೇಟದ ವಿಚಾರವನ್ನು ನ್ಯಾಯಪೀಠದ ಮುಂದಿಟ್ಟು ಗಮನಸೆಳೆದರು. ಆಗ ನ್ಯಾ.ಹೇಮಂತ್ ಗುಪ್ತಾ, ಸಿಖ್ಖರ ಪೇಟ ಸಿಖ್ ಧರ್ಮದ ಕಡ್ಡಾಯ ಐದು ಅಂಶಗಳ ಭಾಗ. ಇದನ್ನು ಈಗಾಗಲೇ ಸುಪ್ರೀಂಕೋರ್ಟ್ ಕೂಡ ಹೇಳಿದೆ. ಸಂವಿಧಾನ ಪೀಠವೂ ಸಿಖ್ಖರು ಪೇಟ ಮತ್ತು ಕಿರ್ಪಾನ್ ಧರಿಸುವುದು ಆ ಧರ್ಮದ ಅಗತ್ಯ ಭಾಗ. ಹಾಗಾಗಿ ಸಿಖ್ಖರ ಪೇಟಕ್ಕೆ ಹೋಲಿಸುವುದು ಸರಿ ಅಲ್ಲ ಎಂದರು. ಆಗ ವಾದ ಮುಂದುವರೆಸಿದ ಪಾಷ, ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಕೂಡ ಇದೇ ಆಗಿದೆ ಎಂದರು. ಆಗ ನ್ಯಾ.ಗುಪ್ತಾ ದಯವಿಟ್ಟು ಸಿಖ್ಖರಿಗೆ ಹೋಲಿಕೆ ಮಾಡಬೇಡಿ, ಸಿಖ್ ಧರ್ಮ ಭಾರತೀಯ ಸಂಸ್ಕೃತಿಯೊಂದಿಗೆ ಬೇರೂರಿದೆ ಎಂದರು. ಆಗ ವಕೀಲ ಪಾಷ, ಇಸ್ಲಾಂ ಧರ್ಮವೂ 1400 ವರ್ಷಗಳಿಂದ ಇದೆ. ಹಿಜಾಬ್ ಕೂಡ ಪ್ರಸ್ತುತವಾಗಿದೆ ಎಂದರು. ಬಳಿಕ ಸೆ.12ಕ್ಕೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿತು.
