ಹಿಜಾಬ್‌ ವಿವಾದ: ಇಂದು ಮೊದಲ ಬಾರಿಗೆ ಸುಪ್ರೀಂನಲ್ಲಿ ವಿಚಾರಣೆ

ರಾಜ್ಯಾದ್ಯಂತ ಸಂಘರ್ಷ ಸೃಷ್ಟಿಸಿದ್ದ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟಿನಲ್ಲಿ ನಡೆಯಲಿದೆ. ಸುಮಾರು ಮೂರೂವರೆ ತಿಂಗಳ ಬಳಿಕ ವಿಚವಾರಣೆ ನಡೆಯುತ್ತಿದೆ.

Hijab Controversy  Supreme Court Hearing gow

ನವದೆಹಲಿ (ಆ.29): ದೇಶ-ವಿದೇಶಗಳಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದ್ದ, ಉಡುಪಿಯಲ್ಲಿ ಆರಂಭವಾಗಿ ನಂತರ ರಾಜ್ಯಾದ್ಯಂತ ಸಂಘರ್ಷ ಸೃಷ್ಟಿಸಿದ್ದ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟಿನಲ್ಲಿ ನಡೆಯಲಿದೆ. ಸುಮಾರು ಮೂರೂವರೆ ತಿಂಗಳ ಬಳಿಕ ವಿಚಾರಣೆ ನಡೆಯುತ್ತಿದೆ. ಹಿಜಾಬ್ ವಿಚಾರವಾಗಿ ಹೈಕೋರ್ಟ್ ನಲ್ಲಿ ನೀಡಿರುವ ತೀರ್ಪಿನ ವಿರುದ್ಧ ಒಟ್ಟು 23 ಅರ್ಜಿ ಸಲ್ಲಿಕೆಯಾಗಿದೆ. ಉಡುಪಿಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಆರು ವಿದ್ಯಾರ್ಥಿನಿಯರು ಹಿಜಾಬ್‌ಗೆ ತರಗತಿಯಲ್ಲಿ ನಿರ್ಬಂಧ ವಿಧಿಸಿದ ಕಾಲೇಜಿನ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಚ್‌ ಮೊರೆ ಹೋಗಿದ್ದರು.

ಈ ಕುರಿತು ವಿಚಾರಣೆ ನಡೆಸಿದ್ದ ಹೈಕೋರ್ಚ್‌ ಶಾಲಾ, ಕಾಲೇಜಿನ ತರಗತಿಗಳಿಗೆ ಹಿಜಾಬ್‌ ಧರಿಸಿ ಹಾಜರಾಗುವುದನ್ನು ನಿಷೇಧಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿತ್ತು. ಅಲ್ಲದೆ, ಹಿಜಾಬ್‌ ಧಾರಣೆ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದೂ ವ್ಯಾಖ್ಯಾನಿಸಿತ್ತು. ಹೈಕೋರ್ಚ್‌ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿಗಳು ಸುಪ್ರೀಂ ಕೋರ್ಚ್‌ ಮೊರೆ ಹೋಗಿದ್ದರು. ಉಡುಪಿಯಲ್ಲಿ ಆರಂಭವಾದ ಹಿಜಾಬ್‌ ವಿವಾದ ರಾಜ್ಯಾದ್ಯಂತ ಹಿಜಾಬ್‌ ಮತ್ತು ಕೇಸರಿ ಶಾಲು ಸಂಘರ್ಷಕ್ಕೆ ಕಾರಣವಾಗಿತ್ತು. ನಂತರ ಇದು ಜಾತ್ರೆ, ದೇವಸ್ಥಾನಗಳ ಮಳಿಗೆಗಳಿಗೂ ವಿಸ್ತರಿಸಿ, ಧರ್ಮ ಸಂಘರ್ಷ ಸೃಷ್ಟಿಹಾಕಿತ್ತು.

ಜಸ್ಟೀಸ್ ಹೇಮಂತ್ ಗುಪ್ತಾ ಹಾಗೂ ಜಸ್ಟೀಸ್ ಸುಧಾಂಶು ದುಲಿಯಾ ಪೀಠದಲ್ಲಿ ಹಿಜಾಬ್ ಕುರಿತ ಅರ್ಜಿಯ ವಿಚಾರಣೆ ನಡೆಯಲಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಮಾಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿನಿಯರು ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂ ತುರ್ತು ವಿಚಾರಣೆಗೆ  ನಿರಾಕರಿಸಿತ್ತು. ಇದೀಗ ಮೂರು ತಿಂಗಳ ಬಳಿಕ ಸುಪ್ರೀಂಕೋರ್ಟ್ ನಲ್ಲಿ ಹಿಜಾಬ್ ಕುರಿತ ಅರ್ಜಿ ವಿಚಾರಣೆ ನಡೆಯಲಿದೆ. 

2022ರ ಫೆಬ್ರವರಿಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ  ಹಿಜಾಬ್ ಕುರಿತ ವಿವಾದ ಹುಟ್ಟಿಕೊಂಡಿತ್ತು. ಹಿಜಾಬ್  ಗೆ ಅವಕಾಶ ನೀಡಬಾರದು ಎಂದು ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು.  ಬಳಿಕ ಈ ವಿಚಾರದಲ್ಲಿ  ಹಿಂದೂ ಸಂಘಟನೆಯ ಕಾರ್ಯಕರ್ತರು  ಭಾಗಿಯಾಗಿ ಸಮವಸ್ತ್ರ ಕಡ್ಡಾಯವಾಗಿ ಜಾರಿಯಾಗುವವರೆಗೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಯೇ ತರಗತಿಗೆ ಹಾಜರಾಗುತ್ತಾರೆ ಎಂದಿದ್ದರು. ಹಿಜಾಬ್ ಪರ ವಿರೋಧ ಚರ್ಚೆ ಆರಂಭವಾದ ಬಳಿಕ ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.

Ganeshotsav 2022: ಹಿಜಾಬ್ ಬಳಿಕ ಶಾಲೆಗಳಲ್ಲಿ ಶುರುವಾಗುತ್ತಾ ಗಣೇಶನ ದಂಗಲ್?

ಹಿಜಾಬ್ ಗೆ ಅವಕಾಶ ನೀಡುವಂತೆ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು  ಮಾರ್ಚ್ 15ರಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಹೈಕೋರ್ಟ್ ವಜಾಗೊಳಿಸಿತ್ತು. ಹಿಜಾಬ್ ಇಸ್ಲಾಂ ಧರ್ಮದ ಅಡಿಯಲ್ಲಿ ಅತ್ಯಗತ್ಯವಾದ ಆಚರಣೆಯಲ್ಲ. ಜೊತೆಗೆ ಇದು ಭಾರತದ ಸಂವಿಧಾನದ 25 ನೇ ಪರಿಚ್ಛೇದದ ವ್ಯಾಪ್ತಿಗೆ ಬರುವುದಿಲ್ಲ ಎಂದು ತನ್ನ ತೀರ್ಪನ್ನು ಹೇಳಿತ್ತು.

ಹಿಜಾಬ್‌ಗೆ ಸಿಗದ ಅನುಮತಿ ಕರಾವಳಿಯಲ್ಲಿ ಟೀಸಿ ಪಡೆದ ನೂರಾರು ಮುಸ್ಲಿಂ ವಿದ್ಯಾರ್ಥಿನಿಯರು!

ಟಿ.ಸಿ. ಪಡೆದ 145 ವಿದ್ಯಾರ್ಥಿನಿಯರು: ಕಾಲೇಜುಗಳಲ್ಲಿ ಹಿಜಾಬ್‌ ವಿವಾದ ಆರಂಭವಾದ ಬಳಿಕ ಹಿಜಾಬ್‌ಗೆ ಅವಕಾಶ ಇಲ್ಲವೆಂದು ದ.ಕ., ಉಡುಪಿಯ ಶೇ.16ರಷ್ಟುಮುಸ್ಲಿಂ ವಿದ್ಯಾರ್ಥಿನಿಯರು ತಾವು ಕಲಿಯುತ್ತಿದ್ದ ಕಾಲೇಜುಗಳಿಂದ ವರ್ಗಾವಣೆ ಪ್ರಮಾಣ ಪತ್ರ(ಟಿ.ಸಿ.) ಪಡೆದುಕೊಂಡಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಸುಮಾರು 900 ಡಿಗ್ರಿ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳಲ್ಲಿ 145ರಷ್ಟುವಿದ್ಯಾರ್ಥಿಗಳು ಟಿಸಿ ಪಡೆದುಕೊಂಡಿದ್ದಾರೆ ಎಂದು ಆರ್‌ಟಿಐ ಪ್ರಶ್ನೆಗೆ ಶಿಕ್ಷಣ ಇಲಾಖೆ ಉತ್ತರ ನೀಡಿದೆ. ಇದರಲ್ಲಿ ಸರ್ಕಾರಿ ಕಾಲೇಜುಗಳಿಂದ ಶೇ.34ರಷ್ಟುವಿದ್ಯಾರ್ಥಿನಿಯರು ಟಿಸಿ ಪಡೆದುಕೊಂಡಿದ್ದರೆ, ಅನುದಾನಿತ ಕಾಲೇಜುಗಳಿಂದ ಶೇ.13ರಷ್ಟುವಿದ್ಯಾರ್ಥಿನಿಯರು ಟಿಸಿ ಪಡೆದಿದ್ದಾರೆ. ಉಡುಪಿಯ ಕಾಲೇಜಿನಲ್ಲಿ ಹಿಜಾಬ್‌ ವಿವಾದ ಆರಂಭವಾದ ಬಳಿಕ ದಕ್ಷಿಣ ಕನ್ನಡದಲ್ಲೂ ಹಲವು ಕಾಲೇಜುಗಳಲ್ಲಿ ವಿವಾದ ಉದ್ಭವಿಸಿತ್ತು. ಅದರ ಬೆನ್ನಲ್ಲೇ ವಿದ್ಯಾರ್ಥಿನಿಯರು ಟಿ.ಸಿ. ಪಡೆದುಕೊಂಡಿದ್ದಾರೆ.  ಹಿಜಾಬ್‌ಗೆ ಅವಕಾಶ ಇರುವ ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಇಂಗಿತವನ್ನು ಅನೇಕ ವಿದ್ಯಾರ್ಥಿನಿಯರು ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios