ಬರ ಪರಿಹಾರಕ್ಕೆ ಕೇಂದ್ರಕ್ಕೆ ಕುಮಾರಸ್ವಾಮಿ ಒತ್ತಾಯಿಸಲಿ: ಸಿಎಂ ಸಿದ್ದರಾಮಯ್ಯ
ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲು ರಾಜ್ಯದ ಮೂವರು ಸಚಿವರನ್ನು ಕಳುಹಿಸಿದರೂ ಯಾವ ಕೇಂದ್ರ ಮಂತ್ರಿಯೂ ಸಮಯ ಕೊಡಲಿಲ್ಲ. ಅವರು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬಂದಿದ್ದಾರೆ. ನಾವು ಏನು ಮಾಡಬೇಕು ಹೇಳಿ? ಈ ನಿರ್ಲಕ್ಷ್ಯವನ್ನು ಏನೆಂದು ವ್ಯಾಖ್ಯಾನ ಮಾಡಬೇಕು, ವಿರೋಧ ಪಕ್ಷದವರು ಜಗಳ ಮಾಡಬೇಡಿ ಅಂತಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾಸನ(ನ.08): ಬರ ಪರಿಹಾರ ನೀಡಿಲ್ಲವೆಂದು ಟೀಕಿಸುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಲ್ಲಿದ್ದಾರೆ. ಕೂಡಲೇ ಹಣ ಬಿಡುಗಡೆ ಮಾಡುವಂತೆ ಅವರೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಬಹುದಲ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.
ಈ ವರ್ಷ ಭೀಕರವಾದ ಬರಗಲಾವಿದೆ. ೨೧೬ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ ಆರೇಳು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡುತ್ತೇವೆ. ಇಡೀ ರಾಜ್ಯದಲ್ಲಿ ಸಂಪೂರ್ಣ ಬರಗಾಲವಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರ ತಂಡ ಕಳುಹಿಸಿತ್ತು. ನಾಲ್ಕು ತಂಡಗಳು ರಾಜ್ಯ ಪ್ರವಾಸ ಮಾಡಿ ಅಧಿಕಾರಿಗಳು, ಜನರಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಈಗಾಗಲೇ ತಂಡ ಭೇಟಿ ಕೊಟ್ಟು ಇಪ್ಪತ್ತು ದಿನ ಆಗುತ್ತಾ ಬಂದಿದೆ. ವರದಿ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರವಾದರೂ ಪರಿಹಾರ ಬಿಡುಗಡೆ ಮಾಡಲಿ ಎಂದು ನಾವು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ರಾಜಕೀಯಕ್ಕಾಗಿ ಬಿಜೆಪಿಯಿಂದ ಬರ ಅಧ್ಯಯನ: ಸಿಎಂ ಸಿದ್ದರಾಮಯ್ಯ
‘ರಾಜ್ಯಕ್ಕೆ ೧೭,೯೦೧ ಕೋಟಿ ರು. ಹಣ ಬಿಡುಗಡೆ ಮಾಡಲು ಕೋರಿದ್ದೇವೆ. ರಾಜ್ಯದಲ್ಲಿ ೩೩,೭೨೭ ಕೋಟಿ ರು. ನಷ್ಟವಾಗಿದೆ. ಆಗಿರುವ ಎಲ್ಲಾ ನಷ್ಟಕ್ಕೂ ಕೇಂದ್ರ ಸರ್ಕಾರ ಹಣ ಕೊಡಲಾಗುವುದಿಲ್ಲ ಎನ್ನುವುದು ನಮಗೂ ಗೊತ್ತಿದೆ. ಕೇಂದ್ರ ಸರ್ಕಾರಕ್ಕೆ ನಾಲ್ಕು ಲಕ್ಷ ಕೋಟಿ ರು. ತೆರಿಗೆ ರೂಪದಲ್ಲಿ ಕೊಡುತ್ತೇವೆ. ನಮಗೆ ಅವರು ಕೊಡುವುದು ಕೇವಲ ೫೭ ಸಾವಿರ ಕೋಟಿ ರು. ನಾವು ನಮ್ಮ ಹಣ ಕೇಳುತ್ತಿದ್ದೇವೆ. ಇದು ಎಲ್ಲಾ ಕಾಲದಲ್ಲಿಯೂ ನಡೆಯುತ್ತಾ ಬಂದಿದೆ. ಆದರೆ ಕೇಂದ್ರ ಸರ್ಕಾರದವರು ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲು ರಾಜ್ಯದ ಮೂವರು ಸಚಿವರನ್ನು ಕಳುಹಿಸಿದರೂ ಯಾವ ಕೇಂದ್ರ ಮಂತ್ರಿಯೂ ಸಮಯ ಕೊಡಲಿಲ್ಲ. ಅವರು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬಂದಿದ್ದಾರೆ. ನಾವು ಏನು ಮಾಡಬೇಕು ಹೇಳಿ? ಈ ನಿರ್ಲಕ್ಷ್ಯವನ್ನು ಏನೆಂದು ವ್ಯಾಖ್ಯಾನ ಮಾಡಬೇಕು, ವಿರೋಧ ಪಕ್ಷದವರು ಜಗಳ ಮಾಡಬೇಡಿ ಅಂತಾರೆ. ಎನ್‌ಡಿಎ ಜೊತೆ ಕುಮಾರಸ್ವಾಮಿ ಸೇರಿಸಿಕೊಂಡಿದ್ದಾರಲ್ಲಾ. ಅವರೇ ಹೇಳಿ ಹಣ ಬಿಡುಗಡೆ ಮಾಡಿ ಅಂತ ಕೇಳಲಿ’ ಎಂದರು.
ಕೇಂದ್ರ ಸ್ಪಂದಿಸುತ್ತಿಲ್ಲ
ನಾವು ವರ್ಷಕ್ಕೆ ನಾಲ್ಕು ಲಕ್ಷ ಕೋಟಿ ರು. ತೆರಿಗೆ ಹಣವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ. ಅದರಲ್ಲಿ ೧೭೯೦೧ ಕೋಟಿ ರು. ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದೇವೆ. ಆದರೆ ಕೇಂದ್ರದಿಂದ ಯಾವುದಕ್ಕೂ ಸ್ಪಂದನೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಒಳ್ಳೆಯದಾಗಲಿ
ರಾಜ್ಯದ ಜನರಿಗೆ ಒಳ್ಳೆಯದಾಗಲಿ, ರಾಜ್ಯದಲ್ಲಿ ತೀವ್ರ ಬರಗಾಲವಿದೆ, ಮುಂಗಾರು ಕೈಕೊಟ್ಟಿದೆ, ಹಿಂಗಾರು ಮಳೆಯಾದರೂ ಆಗಲಿ, ರೈತರಿಗೆ ಅನುಕೂಲ ಆಗಲಿ ಎಂದು ನಾನು ಮತ್ತು ಎಲ್ಲಾ ಸ್ನೇಹಿತರು ದೇವಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.
ವಿಜಯೇಂದ್ರ ಸರಿಯಾಗಿ ಹೋಂವರ್ಕ್ ಮಾಡಿಕೊಂಡು ಮಾತಾಡಲಿ: ಪ್ರಿಯಾಂಕ್ ಖರ್ಗೆ ತಿರುಗೇಟು
ಮಂತ್ರಿ ಸ್ಥಾನದ ಲಿಸ್ಟಲ್ಲಿ ಶಿವಲಿಂಗೇಗೌಡನ ಹೆಸರಿದೆ
ಇದೇ ಪ್ರಥಮ ಬಾರಿಗೆ ಹಾಸನಾಂಬಾ ದರ್ಶನಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿವಲಿಂಗೇಗೌಡರ ಬೆಂಬಲಿಗರು ಮಂತ್ರಿ ಸ್ಥಾನ ಕೊಡುವಂತೆ ಕೂಗಿದ ಘೋಷಣೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಲಿಂಗೇಗೌಡರ ಹೆಸರು ಸಹ ಮಂತ್ರಿ ಸ್ಥಾನದ ಪಟ್ಟಿಯಲ್ಲಿದೆ. ಅವರೂ ಸಹ ಮುಂದೆ ಮಂತ್ರಿಯಾಗುತ್ತಾರೆ ಎಂದು ಭರವಸೆ ನೀಡಿದರು.
ಪೂರ್ಣ ಕುಂಬ ಸ್ವಾಗತ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲಾಡಳಿತದ ವತಿಯಿಂದ ಪೂರ್ಣಕುಂಬ ಸ್ವಾಗತದೊಂದಿಗೆ ದೇವಿಯ ಗರ್ಭ ಗುಡಿಗೆ ಕರೆದೊಯ್ಯಲಾಯಿತು. ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸಾಥ್ ನೀಡಿದರು. ಮೊದಲ ಬಾರಿಗೆ ಹಾಸನಾಂಬಾ ದರ್ಶನಕ್ಕೆ ಆಗಮಿಸಿದ ಸಿದ್ದರಾಮುಯ್ಯ ಅವರನ್ನು ಉಸ್ತುವಾರಿ ಸಚಿವ ರಾಜಣ್ಣ ಮತ್ತು ಶಿವಲಿಂಗೇಗೌಡ ಶಾಂತಿಗ್ರಾಮ ಟೋಲ್ ಬಳಿ ಬರಮಾಡಿಕೊಂಡರು.