ರಾಜಕೀಯಕ್ಕಾಗಿ ಬಿಜೆಪಿಯಿಂದ ಬರ ಅಧ್ಯಯನ: ಸಿಎಂ ಸಿದ್ದರಾಮಯ್ಯ
ಬಿಜೆಪಿ ನಾಯಕರ ಬರ ಅಧ್ಯಯನ ಪ್ರವಾಸ ಕುರಿತ ಪ್ರಶ್ನೆಗೆ, ಈಗಾಗಲೇ ರಾಜ್ಯಕ್ಕೆ ಕೇಂದ್ರ ಸರ್ಕಾರದ ತಂಡ ಬಂದು ರಾಜ್ಯದಲ್ಲಿ ಬರ ಅಧ್ಯಯನ ನಡೆಸಿ ಹೋಗಿದೆ. ಆ ತಂಡ ಇನ್ನೂ ವರದಿ ಕೊಟ್ಟಿಲ್ಲ. ಈಗ ಮತ್ತೆ ತಾವೇ ಬೇರೆ ಬರ ಅಧ್ಯಯನಕ್ಕೆ ಮುಂದಾಗಿರುವ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಬರ ಅಧ್ಯಯನ ತಂಡದ ವರದಿ ಕೊಡಿಸಿ ರಾಜ್ಯಕ್ಕೆ ಸೂಕ್ತ ಪರಿಹಾರದ ಹಣ ಬಿಡುಗಡೆ ಮಾಡಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು(ನ.08): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಬರ ಅಧ್ಯಯನಕ್ಕೆ ಹೋಗುತ್ತಿದ್ದಾರೆ. ಅಧ್ಯಯನ ಮಾಡಿಕೊಳ್ಳಲಿ ನಮ್ಮ ಅಭ್ಯಂತರವೇನೂ ಇಲ್ಲ. ಅವರಿಗೆ ರಾಜ್ಯದ ಜನರು, ರೈತರ ಬಗ್ಗೆ ಕಾಳಜಿ ಇದ್ದರೆ ತಮ್ಮದೇ ಪಕ್ಷದ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ರಾಜ್ಯಕ್ಕೆ ಸೂಕ್ತ ಬರ ಪರಿಹಾರದ ಹಣ ಕೊಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಬರ ಅಧ್ಯಯನ ಪ್ರವಾಸ ಕುರಿತ ಪ್ರಶ್ನೆಗೆ, ಈಗಾಗಲೇ ರಾಜ್ಯಕ್ಕೆ ಕೇಂದ್ರ ಸರ್ಕಾರದ ತಂಡ ಬಂದು ರಾಜ್ಯದಲ್ಲಿ ಬರ ಅಧ್ಯಯನ ನಡೆಸಿ ಹೋಗಿದೆ. ಆ ತಂಡ ಇನ್ನೂ ವರದಿ ಕೊಟ್ಟಿಲ್ಲ. ಈಗ ಮತ್ತೆ ತಾವೇ ಬೇರೆ ಬರ ಅಧ್ಯಯನಕ್ಕೆ ಮುಂದಾಗಿರುವ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಬರ ಅಧ್ಯಯನ ತಂಡದ ವರದಿ ಕೊಡಿಸಿ ರಾಜ್ಯಕ್ಕೆ ಸೂಕ್ತ ಪರಿಹಾರದ ಹಣ ಬಿಡುಗಡೆ ಮಾಡಿಸಲಿ ಎಂದರು.
ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ: ಈಶ್ವರಪ್ಪ
ರಾಜ್ಯದ ಬರ ಪರಿಸ್ಥಿತಿಯಿಂದ 33,700 ಕೋಟಿ ರು.ನಷ್ಟು ನಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರಕ್ಕೆ 17,900 ಕೋಟಿ ರು.ಗಳ ಬರ ಪರಿಹಾರ ಕೋರಲಾಗಿದೆ. ಆದರೆ, ಕೇಂದ್ರದಿಂದ ಇನ್ನೂ ಒಂದು ರುಪಾಯಿ ಪರಿಹಾರ ಬಂದಿಲ್ಲ. ಬರ ಪರಿಹಾರಕ್ಕೆ ಒತ್ತಾಯಿಸಲು ನಮ್ಮ ಮಂತ್ರಿಗಳಿಗೆ ಕೇಂದ್ರದ ಸಂಬಂಧ ಪಟ್ಟ ಸಚಿವರ ಭೇಟಿಗೆ ಹೋದರೆ ಸಮಯವನ್ನೇ ನೀಡಿಲ್ಲ. ಇವರಿಗೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇದೆ. ನಿಜವಾಗಲೂ ರಾಜ್ಯದ ಜನರು, ರೈತರ ಬಗ್ಗೆ ಕಾಳಜಿ ಇದ್ದರೆ ರಾಜ್ಯ ಬಿಜೆಪಿ ನಾಯಕರು ಕೇಂದ್ರದೊಂದಿಗೆ ಮಾತನಾಡಿ ಪರಿಹಾರ ಕೊಡಿಸಲಿ. ರಾಜ್ಯ 25 ಬಿಜೆಪಿ ಸಂಸದರು ಪ್ರಧಾನಿ ಮೋದಿ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಪರಿಹಾರ ಕೊಡಿಸುವ ಕೆಲಸವನ್ನು ಮೊದಲು ಮಾಡಲಿ ಎಂದರು.
ರಾಜ್ಯದಲ್ಲಿ ಬರ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ಆರೋಪಕ್ಕೆ ಇದೇ ವೇಳೆ ತಿರುಗೇಟು ನೀಡಿದ ಮುಖ್ಯಮಂತ್ರಿ ಅವರು, ರಾಜ್ಯಕ್ಕೆ ಬಂದು ಬರ ಅಧ್ಯಯನ ನಡೆಸಿದ ತಂಡ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಕುಮಾರಸ್ವಾಮಿ ಅವರು ಬೈಯುವುದಾದರೆ ಕೇಂದ್ರ ಸರ್ಕಾರವನ್ನು ಬೈಯಲಿ ಎಂದರು.