ಸಿದ್ದರಾಮಯ್ಯ 6 ವರ್ಷ ಅಧಿಕಾರ ಅನುಭವಿಸಿದ್ದಾರೆ. ಈಗ ಡಿ.ಕೆ. ಶಿವಕುಮಾರ್‌ ಅವರ ಸರದಿ. ಹೀಗಾಗಿ ಬಿಟ್ಟುಕೊಡಲಿ ಎಂದು ಹೇಳಿದ್ದೇನೆ. ನನ್ನ ಹೇಳಿಕೆಯಿಂದ ಇಷ್ಟೆಲ್ಲಾ ಆಗುತ್ತದೆ ಎಂದು ತಿಳಿದಿರಲಿಲ್ಲ. ಇನ್ನು ಮುಂದೆ ಸಿದ್ದರಾಮಯ್ಯ ಅವರನ್ನು ಕೇಳುವುದಿಲ್ಲ. ಆದರೆ ದೇವರಲ್ಲಿ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸುತ್ತೇನೆ ಎಂದ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಅಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ 

ಬೆಂಗಳೂರು(ಜೂ.30): ‘ಕೆ.ಎನ್‌. ರಾಜಣ್ಣ ಸಿದ್ಧವಾಗಿದ್ದರೆ ಬಂದು ಕಾವಿ ತೊಡಲಿ. ಅವರಿಗೆ ಮಠ ಬಿಟ್ಟುಕೊಡುವ ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಆದರೆ ಒಂದು ದಿನಕ್ಕೆ ಕಾವಿ ತೊಟ್ಟು ಹೋಗುವುದಲ್ಲ. ರಾಜಣ್ಣ ಹೇಳಿದಂತೆ ನಡೆದುಕೊಳ್ಳಲಿ’ ಎಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಅಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದಾರೆ. ಕೆ.ಎನ್‌. ರಾಜಣ್ಣ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿರುವ ಸ್ವಾಮೀಜಿ ಅವರು, ‘ಆ ರಾಜಣ್ಣ ಹಿಂದೆ ಬಾಯಿಗೆ ಬಂದಂತೆ ದೇವೇಗೌಡರ ಬಗ್ಗೆ ಏನೇನೋ ಮಾತನಾಡಿದ್ದ ಎಂದರು.

‘ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಲಿ ಎಂಬುದು ನನ್ನ ಅಭಿಪ್ರಾಯ. ನನಗೆ ಯಾರೋ ಹೇಳಿಕೊಟ್ಟು ಇದನ್ನು ನಾನು ಹೇಳಿಲ್ಲ. ಈ ವಿಚಾರದಲ್ಲಿ ದೇವರಂತಹ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರು ತರುವುದು ಸಮಂಜಸವಲ್ಲ. ಕಾಂಗ್ರೆಸ್‌ ಪಕ್ಷಕ್ಕೆ 135 ಸ್ಥಾನ ಬರಬೇಕಾದರೆ ಅದರ ಹಿಂದೆ ಡಿ.ಕೆ. ಶಿವಕುಮಾರ್‌ ಅವರ ಶ್ರಮ ಇದೆ. ಹೀಗಾಗಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೇಳಿದ್ದೇನೆ’ ಎಂದು ಸಮರ್ಥಸಿಕೊಂಡರು.

ಚಂದ್ರಶೇಖರ್‌ ಸ್ವಾಮೀಜಿ ಸಲಹೆ ಪರಿಶೀಲನೆ ಮಾಡ್ತೀನಿ, ಪ್ರಧಾನಿ ಆಗ್ತೀನಿ ಅಂತ ದೇವೇಗೌಡರಿಗೆ ಗೊತ್ತಿರಲಿಲ್ಲ: ಸಚಿವ ರಾಜಣ್ಣ

‘ಸಿದ್ದರಾಮಯ್ಯ 6 ವರ್ಷ ಅಧಿಕಾರ ಅನುಭವಿಸಿದ್ದಾರೆ. ಈಗ ಡಿ.ಕೆ. ಶಿವಕುಮಾರ್‌ ಅವರ ಸರದಿ. ಹೀಗಾಗಿ ಬಿಟ್ಟುಕೊಡಲಿ ಎಂದು ಹೇಳಿದ್ದೇನೆ. ನನ್ನ ಹೇಳಿಕೆಯಿಂದ ಇಷ್ಟೆಲ್ಲಾ ಆಗುತ್ತದೆ ಎಂದು ತಿಳಿದಿರಲಿಲ್ಲ. ಇನ್ನು ಮುಂದೆ ಸಿದ್ದರಾಮಯ್ಯ ಅವರನ್ನು ಕೇಳುವುದಿಲ್ಲ. ಆದರೆ ದೇವರಲ್ಲಿ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದರು.

‘ಈಗಲೂ ನನ್ನ ಮಾತಿಗೆ ಬದ್ಧನಾಗಿದ್ದೇನೆ. ಚುನಾವಣೆಗೆ ಡಿ.ಕೆ. ಶಿವಕುಮಾರ್‌ ಹಣ ಖರ್ಚು ಮಾಡಿದ್ದಾರೆ. ಅವರು ಒಮ್ಮೆ ಮುಖ್ಯಮಂತ್ರಿ ಆಗಲಿ. ಬಳಿಕ ಯಾರಾದರೂ ಆ ಸ್ಥಾನಕ್ಕೆ ಬರಲಿ’ ಎಂದರು.