ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ಘೋಷಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. 2011ರಲ್ಲೂ ಇದೇ ರೀತಿಯ ಘಟನೆ ನಡೆದಿತ್ತು.

ಮೈಸೂರು (ಡಿ.31): ನಗರದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಡಿಸೆಂಬರ್ 31ರ ಮಂಗಳವಾರ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಈ ಹಿನ್ನೆಲೆ, ಎಲ್ಲ ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ಘೋಷಣೆ ಮಾಡಲಾಗಿದ್ದು, ಟ್ರೈನೀಗಳಿಗೆ ಒಂದು ದಿನದ ಮಟ್ಟಿಗೆ ರಜೆ ನೀಡಲಾಗಿದೆ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಣಿಯನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇನ್ಫೋಸಿಸ್ ಕಂಪನಿಯಿಂದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದ್ದು, ಕ್ಯಾಂಪಸ್‌ ಒಳಗೆ ಯಾರೂ ಪ್ರವೇಶ ಮಾಡದಂತೆ ನೋಡಿಕೊಳ್ಳಲು ಭದ್ರತಾ ತಂಡಕ್ಕೆ ನಿರ್ದೇಶಿಸಲಾಗಿದೆ. ಆತ್ಮೀಯ ಇನ್ಫೋಸಿಸ್ ಉದ್ಯೋಗಿಗಳೇ ಇಂದು ಮೈಸೂರು ಡಿಸಿ ಕ್ಯಾಂಪಸ್‌ನಲ್ಲಿ ಕಾಡು ಪ್ರಾಣಿಯೊಂದು ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಕಾರ್ಯಪಡೆಯ ಸಹಯೋಗದೊಂದಿಗೆ ಕ್ಯಾಂಪಸ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ,' ಎಂದು ಟೆಕ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಆಂತರಿಕ ಸಂವಹನದ ಮೂಲಕ ತಿಳಿಸಿದೆ.

ಇನ್ನು ಎಲ್ಲ ಉದ್ಯೋಗಿಗಳು ಒಂದು ದಿನದ ಮಟ್ಟಿಗೆ (ಡಿ.31ರಂದು) ಮನೆಯಿಂದಲೇ ಕೆಲಸ ಮಾಡಲು ನಿಮ್ಮನ್ನು ವಿನಂತಿಸಲಾಗಿದೆ. ಕ್ಯಾಂಪಸ್‌ನೊಳಗೆ ಯಾರನ್ನೂ ಬಿಡದಂತೆ ಭದ್ರತಾ ತಂಡಕ್ಕೆ ಸೂಚನೆ ನೀಡಲಾಗಿದೆ. ಇನ್ನು ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ಗೆ ಚಿರತೆಯೊಂದು ಬಂದಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದು, ಪ್ರಾಣಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮಾಡಲಾಗುತ್ತಿದ್ದರೂ ಈವರೆಗೆ ಸಿಕ್ಕಿಲ್ಲ.

ಇದನ್ನೂ ಓದಿ: Bengaluru: ಇನ್ಫೋಸಿಸ್‌ ಉದ್ಯೋಗಿಗಳಿಗೆ ಎಲೆಕ್ಟ್ರಾನಿಕ್‌ ಸಿಟಿ ಕ್ಯಾಂಪಸ್‌ನಲ್ಲಿಯೇ ಮೆಟ್ರೋ ಪ್ಲಾಜಾ, ಸ್ಟೇಷನ್‌ಗೆ ನೇರ ಪ್ರವೇಶ!

ಮಂಗಳವಾರ ಮುಂಜಾನೆ 2 ಗಂಟೆ ಸುಮಾರಿಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಕಾಣಿಸಿಕೊಂಡಿದೆ. ನಮ್ಮ ತಂಡವು ಸುಮಾರು 4 ಗಂಟೆಗೆ ಸ್ಥಳಕ್ಕೆ ತಲುಪಿತು. ಚಿರತೆ ಪತ್ತೆಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಐಬಿ ಪ್ರಭುಗೌಡ ತಿಳಿಸಿದ್ದಾರೆ . ಇನ್ನು ಇನ್ಫೋಸಿಸ್ ಕಂಪನಿಯ ಆವರಣಕ್ಕೆ ಚಿರತೆ ಇದೇ ಮೊದಲ ಬಾರಿಗೆ ಪ್ರವೇಶಿಸಿಲ್ಲ. 2011ರಲ್ಲಿ ಒಂದು ಚಿರತೆ ಕ್ಯಾಂಪಸ್‌ಗೆ ನುಗ್ಗಿತ್ತು. ಹೆಬ್ಬಾಳ ಕೈಗಾರಿಕಾ ಪ್ರದೇಶದ ಸಮೀಪದಲ್ಲಿರುವ ಇನ್ಫೋಸಿಸ್ ಮೈಸೂರು ಕ್ಯಾಂಪಸ್ ಮೀಸಲು ಅರಣ್ಯಕ್ಕೆ ಸಮೀಪದಲ್ಲಿದೆ. ಚಿರತೆಗಳ ವಾಸಸ್ಥಾನವಾಗಿರುವ ಈ ಪ್ರದೇಶದಲ್ಲಿ ಆಗಾಗ್ಗೆ ಪ್ರಾಣಿಗಳು ಸ್ಥಳಾಂತರಗೊಳ್ಳುತ್ತವೆ. ಚಿರತೆ ಮೀಸಲು ಅರಣ್ಯದಲ್ಲಿ ತನ್ನ ನೈಸರ್ಗಿಕ ವಾಸಸ್ಥಾನದಿಂದ ಆಹಾರ ಅರಸಿ ಬಂದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆಯು ಎಲ್ಲ ಉದ್ಯೋಗಿಗಳಿಗೆ ಒಂದು ದಿನದ ವರ್ಕ್‌ ಫ್ರಮ್ ಹೋಮ್ ಅವಕಾಶ ನೀಡಿದ್ದು, ಇಂದೂ ಸಿಗದೇ ಹೋದಲ್ಲಿ ನಾಳೆಯೂ ಇದನ್ನು ವಿಸ್ತರಣೆ ಮಾಡುವ ಸಾಧ್ಯತೆಯಿದೆ. ಇನ್ನು ತರಬೇತಿ ವೇಳಾಪಟ್ಟಿಯನ್ನು ಒಂದು ದಿನ ಮುಂದೂಡಿಕೆ ಮಾಡಲಾಗುತ್ತಿದೆ. ಇನ್ನು ಕ್ಯಾಂಪಸ್ ಆವರಣದ ಹಾಸ್ಟೆಲ್‌ನಲ್ಲಿ ಇರುವ ತರಬೇತಿ ಪಡೆದುಕೊಳ್ಳುವ ಅಭ್ಯರ್ಥಿಗಳು ದಯವಿಟ್ಟು ನಿಮ್ಮ ಕೊಠಡಿಗಳಲ್ಲಿ ಇರಿ ಮತ್ತು ಸ್ವಯಂ-ಅಧ್ಯಯನಕ್ಕಾಗಿ ಈ ದಿನವನ್ನು ಬಳಸಿಕೊಳ್ಳಿ ಎಂದು ಇನ್ಫೋಸಿಸ್ ಸಂಸ್ಥೆಯು ತರಬೇತಿದಾರರಿಗೆ ಆಂತರಿಕ ಸಂವಹದನ ಮೂಲ ತಿಳಿಸಿದೆ.

ಇದನ್ನೂ ಓದಿ: ಮೈಸೂರು ಝೂನಲ್ಲಿ ನಟಿ ಅಮೂಲ್ಯ ಮಕ್ಕಳು ಮಾಡಿದ ಕೆಲಸಕ್ಕೆ ಭಾರಿ ಮೆಚ್ಚುಗೆ!