ಮಡಿಕೇರಿ(ಆ.10): ಮಳೆಯಾರ್ಭಟಕ್ಕೆ ತೀವ್ರ ಪಾಕೃತಿಕ ವಿಕೋಪ ಸಂಭವಿಸಿರುವ ಕೊಡಗಿನ ಬ್ರಹ್ಮಗಿರಿ ಬೆಟ್ಟದಲ್ಲಿ ಭೂಕುಸಿತದಿಂದ ಕಣ್ಮರೆಯಾಗಿರುವವರ ನಾಲ್ವರ ದೇಹಗಳ ಪತ್ತೆಗೆ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಪೊಲೀಸರ ತಂಡಗಳು ಭಾನುವಾರದಂದೂ ಚುರುಕಿನ ಕಾರ್ಯಾಚರಣೆ ನಡೆಸಿದ್ದು, ಸೋಮವಾರದಂದು ಜಿಲ್ಲೆಗೆ ಸೇನಾತಂಡವೂ ಆಗಮಿಸಿ ಕಾರ್ಯಾಚರಣೆ ಪ್ರಾರಂಭಿಸಲಿದೆ.

ಬುಧವಾರ ರಾತ್ರಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಭೂಕುಸಿತ ಉಂಟಾಗಿ ನಾಪತ್ತೆಯಾದ ಐವರಲ್ಲಿ ಶನಿವಾರ ಒಬ್ಬರ ಮೃತದೇಹ ಪತ್ತೆಯಾಗಿತ್ತು. ಉಳಿದ ನಾಲ್ವರಾದ ನಾರಾಯಣಾಚಾರ್‌, ಅವರ ಪತ್ನಿ ಶಾಂತಮ್ಮ, ಸಹಾಯಕ ಅರ್ಚಕ ರವಿಕಿರಣ್‌, ಶ್ರೀನಿವಾಸ್‌ಗಾಗಿ ಭಾನುವಾರ ಬೆಳಗ್ಗೆ 9 ಗಂಟೆಯಿಂದ ರಕ್ಷಣಾ ತಂಡ ಶೋಧ ಕಾರ್ಯಾಚರಣೆ ನಡೆಸಿತು. ಆದರೆ ನಾಲ್ವರಲ್ಲಿ ಒಬ್ಬರ ದೇಹವೂ ಪತ್ತೆಯಾಗಲಿಲ್ಲ. ಹೀಗಾಗಿ ಕಾರ್ಯಾಚರಣೆ ತೀವ್ರಗೊಳಿಸುವ ನಿಟ್ಟಿನಲ್ಲಿ ತಲಕಾವೇರಿ ಭೂಕುಸಿತ ಘಟನಾ ಸ್ಥಳದಲ್ಲಿ ಸೋಮವಾರ ಸೇನಾ ತಂಡವೂ ಕಾರ್ಯಾಚರಣೆ ನಡೆಸಲಿದೆ.

ಬೆಂಗಳೂರಲ್ಲಿ ವಾಡಿಕೆಗಿಂತ ಶೇ.73 ರಷ್ಟು ಹೆಚ್ಚು ಮಳೆ..!

ಈಗಾಗಲೇ ಸೇನೆಯ 4 ಮಂದಿ ಜಿಲ್ಲೆಗೆ ಆಗಮಿಸಲಿದ್ದಾರೆ. ಸೋಮವಾರದಂದು ಸೇನಾ ತಂಡದ ಇನ್ನೂ 70 ಮಂದಿ ಆಗಮಿಸಲಿದ್ದು ಬೆಟ್ಟಕುಸಿದ ಜಾಗದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಲಿದ್ದಾರೆ. ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿ ಹೊರತುಪಡಿಸಿ ಜಿಲ್ಲಾದ್ಯಂತ ಭಾನುವಾರ ಮಳೆ ತೀವ್ರ ಇಳಿಮುಖವಾಗಿದ್ದು, ಕಾವೇರಿ ನದಿಪಾತ್ರದಲ್ಲಿ ಪ್ರವಾಹವೂ ತಹಬದಿಗೆ ಬರುತ್ತಿದೆ. ಹೀಗಾಗಿ ಸೋಮವಾರ ಶೋಧಕಾರ್ಯಾಚರಣೆಗೂ ಅನುಕೂಲವಾಗಬಹುದು ಎಂಬ ನಿರೀಕ್ಷೆಯಿದೆ.

ಮನೆ ಇದ್ದ ಸ್ಥಳದಲ್ಲೇ ಹುಡುಕಾಟ: ಭಾನುವಾರದಂದು ರಕ್ಷಣಾ ಸಿಬ್ಬಂದಿ ಮನೆ ಕೊಚ್ಚಿ ಹೋಗಿರುವ ಸ್ಥಳದಲ್ಲೇ ದಿನವಿಡೀ ಹುಡುಕಾಟ ನಡೆಸಿದರು. ಮನೆ ಸಂಪೂರ್ಣ ಕಾಣೆಯಾಗಿರುವುದರಿಂದ ಹುಡುಕಾಟಕ್ಕೆ ತೊಡಕಾಯಿತು. ಮಳೆ, ಮಂಜಿನ ವಾತಾವರಣ ಹುಡುಕಾಟಕ್ಕೆ ಆಗಾಗ್ಗೆ ಅಡ್ಡಿಯಾಗುತ್ತಿತ್ತು.ನಾರಾಯಣಾಚಾರ್‌ ಅವರ ಬೆಡ್‌ ರೂಂ ಕೋಣೆಯ ಸಮೀಪದಲ್ಲಿ ಅಪಾರ ಪ್ರಮಾಣದಲ್ಲಿ ಮಣ್ಣು ಇದ್ದು, ಅಲ್ಲಿಯೇ ತಂಡ ಗುದ್ದಲಿ, ಪಿಕಾಸಿ ಹಿಡಿದು ಪತ್ತೆ ಕಾರ್ಯದಲ್ಲಿ ತೊಡಗಿತ್ತು. ಸ್ಥಳದಲ್ಲಿ ಒಂದು ಜೆಸಿಬಿ ಯಂತ್ರ ರಸ್ತೆ ಸರಿಪಡಿಸುತ್ತಿತ್ತು. ಸಂಜೆ ನಾರಾಯಣ ಆಚಾರ್‌ ಇದ್ದ ಕುರುಹು ಪತ್ತೆಯಾಯಿತು. ಬಟ್ಟೆ, ಮಲಗಿದ್ದ ಜಾಗದಲ್ಲಿ ಬೆಡ್‌ ಶೀಟ್‌, ಕಾಟ್‌ಗಳು ಪತ್ತೆಯಾದವು. ಮನೆ ಬಿದ್ದ ಜಾಗದಲ್ಲಿ, ಪುಸ್ತಕ, ಗ್ಯಾಸ್‌ ಲೈಟ್‌, ಶಾಲು, ಚೊಂಬು, ಬ್ಯಾಗ್‌, ಪೂಜಾ ಸಾಮಗ್ರಿ, ಬ್ಯಾಡ್ಜ್‌ ಇದ್ದ ಕುರುಹು ಪತ್ತೆಯಾಗಿತ್ತು.

ಇಡುಕ್ಕಿ ಗುಡ್ಡ ಕುಸಿತ: ಮೃತರ ಸಂಖ್ಯೆ 26ಕ್ಕೇರಿಕೆ!

ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ಸೋಮಣ್ಣ, ಕಂದಾಯ ಸಚಿವರಾದ ಆರ್‌.ಅಶೋಕ ಹಾಗೂ ಜನಪ್ರತಿನಿಧಿ​ಗಳು ಭೇಟಿ ನೀಡಿದರು. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸ್ಥಳ ವೀಕ್ಷಣೆ ಮಾಡಿದ್ದರು.