ಬೆಂಗಳೂರಲ್ಲಿ ವಾಡಿಕೆಗಿಂತ ಶೇ.73 ರಷ್ಟು ಹೆಚ್ಚು ಮಳೆ..!

ಮುಂಗಾರು ಅವಧಿಯಲ್ಲಿ ಬೆಂಗಳೂರಿನಲ್ಲಿ ಶೇ.73 ರಷ್ಟು ಹೆಚ್ಚಿನ ಪ್ರಮಾಣ ಮಳೆಯಾಗಿದ್ದರೂ ಆಗಸ್ಟ್‌ ಮೊದಲ ವಾರದಲ್ಲಿ ನಗರದಲ್ಲಿ ಮಳೆ ಕೊರತೆ| ಜು.30 ರಿಂದ ಆಗಸ್ಟ್‌ 5ರ ಅವಧಿಯಲ್ಲಿ ವಾಡಿಕೆ ಪ್ರಕಾರ 28 ಮಿ.ಮೀ ಮಳೆಯಾಗಬೇಕು. ಆದರೆ, ಕೇವಲ 23 ಮಿ.ಮೀ ಮಳೆಯಾಗಿದೆ: ಕೆಎಸ್‌ಎನ್‌ಡಿಎಂಸಿ

Karnataka State Natural Disaster Management Center Says 73 Percent More Rain in Bengaluru

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಆ.09):  ಪ್ರಸಕ್ತ ಮುಂಗಾರು ಅವಧಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ವಾಡಿಕೆಗಿಂತ ಬರೋಬ್ಬರಿ ಶೇ.73ರಷ್ಟು ಅಂದರೆ 135 ಮಿ.ಮೀ ಹೆಚ್ಚಿನ ಮಳೆಯಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ ಅಂಶದ ಪ್ರಕಾರ ಜೂನ್‌ನಿಂದ ಆ.5ರ ವರೆಗಿನ ಮುಂಗಾರು ಅವಧಿಯಲ್ಲಿ ಬೆಂಗಳೂರಿನಲ್ಲಿ ವಾಡಿಕೆಗಿಂತ ಶೇ.73 ರಷ್ಟು ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ವಾಡಿಕೆಯಂತೆ ಜೂ.1 ರಿಂದ ಆ.5 ರ ವರೆಗೆ 185 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ 320 ಮಿ.ಮೀ ಮಳೆಯಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ 135 ಮಿ.ಮೀ. ಅಧಿಕ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 90 ಮಿ.ಮೀ. ಮಳೆಯಾಗಿತ್ತು. ಅಂದರೆ ವಾಡಿಕೆಗಿಂತ ಶೇ.51ರಷ್ಟುಮಳೆ ಕೊರತೆಯಾಗಿತ್ತು.

ಆಗಸ್ಟ್‌ ಮೊದಲ ವಾರದಲ್ಲಿ ಮಳೆ ಕೊರತೆ:

ಮುಂಗಾರು ಅವಧಿಯಲ್ಲಿ ಬೆಂಗಳೂರಿನಲ್ಲಿ ಶೇ.73 ರಷ್ಟು ಹೆಚ್ಚಿನ ಪ್ರಮಾಣ ಮಳೆಯಾಗಿದ್ದರೂ ಆಗಸ್ಟ್‌ ಮೊದಲ ವಾರದಲ್ಲಿ ನಗರದಲ್ಲಿ ಮಳೆ ಕೊರತೆ ಉಂಟಾಗಿದೆ. ಜು.30 ರಿಂದ ಆಗಸ್ಟ್‌ 5ರ ಅವಧಿಯಲ್ಲಿ ವಾಡಿಕೆ ಪ್ರಕಾರ 28 ಮಿ.ಮೀ ಮಳೆಯಾಗಬೇಕು. ಆದರೆ, ಕೇವಲ 23 ಮಿ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

ಕರಾವಳಿ, ಮಲೆನಾಡಲ್ಲಿ ಭರ್ಜರಿ ಮಳೆ: ಜಮೀನು, ಮನೆಗಳಿಗೆ ನುಗ್ಗಿದ ನೀರು!

ಮಳೆ ಕೊರತೆ ಸಾಧ್ಯತೆ ಇಲ್ಲ:

ಮುಂಗಾರು ಅವಧಿಯಲ್ಲಿ (ಜೂನ್‌ನಿಂದ ಸೆಪ್ಟಂಬರ್‌) ವಾಡಿಕೆ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 460 ಮಿ.ಮೀ. ಮಳೆಯಾಗಬೇಕು. ಈ ವರ್ಷ ಜೂನ್‌ನಿಂದ ಆಗಸ್ಟ್‌ 5ರವರೆಗೆ 320 ಮಿ.ಮೀ. ಮಳೆಯಾಗಿದೆ. ಸೆಪ್ಟೆಂಬರ್‌ ಮುಗಿಯುವುದರೊಳಗೆ ಇನ್ನೂ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಈ ಮುಂಗಾರಿನ ಅವಧಿಯಲ್ಲಿ ಮಳೆ ಕೊರತೆ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಆಗಸ್ಟ್‌ ಗಂಡಾಂತರ?

ಬೆಂಗಳೂರು ನಗರಕ್ಕೆ ಆಗಸ್ಟ್‌ ಗಂಡಾಂತರ ಈ ವರ್ಷವೂ ಎದುರಾಗಬಹುದಾ ಎಂಬ ಆತಂಕ ಮನೆ ಮಾಡಿದೆ. 2017ರ ಆಗಸ್ಟ್‌ 15ರ ರಾತ್ರಿ ಸಾರ್ವಕಾಲಿಕ ದಾಖಲೆಯ 182 ಮಿ.ಮೀ. ಮಳೆ ಸುರಿದಿತ್ತು. 2018ರಲ್ಲಿಯೂ ಆಗಸ್ಟ್‌ 3ನೇ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. 2019ರಲ್ಲಿ ಮಳೆ ಕೊರತೆ ಉಂಟಾಗಿದ್ದರಿಂದ ಅನಾಹುತ ಆಗಲಿಲ್ಲ. ಆದರೆ, ಈ ವರ್ಷ ಮಲೆನಾಡು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಈ ಬಾರಿ ಸಹ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

ಪ್ರಸಕ್ತ ವರ್ಷ ವಾಡಿಕೆ ಮತ್ತು ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆ ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ, ಬೆಂಗಳೂರಿನಲ್ಲಿಯೂ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿದೆ. ಸೆಪ್ಟಂಬರ್‌ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್‌ ಗವಾಸ್ಕರ್‌ ಅವರು ತಿಳಿಸಿದ್ದಾರೆ.

ತಾಲೂಕುವಾರು ಮಳೆ ಪ್ರಮಾಣ (ಜೂ.1-ಆ.5)

ತಾಲೂಕು 2019 2020(ಶೇಕಡಾ)

ಆನೇಕಲ್‌ -68 61
ಬೆಂ.ಉತ್ತರ -42 33
ಬೆಂ.ದಕ್ಷಿಣ -45 96
ಬೆಂ.ಪೂರ್ವ -59 76
ಯಲಹಂಕ - 90
ಒಟ್ಟು -51 73

ಮೋಡ ಕವಿದ ವಾತಾವರಣ

ಬೆಂಗಳೂರಿನಲ್ಲಿ ಶನಿವಾರ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಕೆಲವು ಕಡೆ ತುಂತುರು ಮಳೆಯಾದ ವರದಿಯಾಗಿದೆ. ಮುಂಗಾರು ಚುರುಕುಗೊಂಡಿರುವುದರಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಉಂಟಾಗಿತ್ತು. ನಗರದ ಕೆಲವು ಕಡೆ ತುಂತುರು ಮಳೆಯಾಗಿದ್ದು, ಬೆಂಗಳೂರಿನಲ್ಲಿ ಶನಿವಾರ ಸರಾಸರಿ 3.8 ಮಿ.ಮೀ. ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

ಇನ್ನು ಬಾಣಸವಾಡಿಯಲ್ಲಿ ಅತಿ ಹೆಚ್ಚು 22 ಮಿ.ಮೀ ಮಳೆಯಾಗಿದ್ದು, ಉಳಿದಂತೆ ಹೊರಮಾವು 18, ಮಹದೇವಪುರದಲ್ಲಿ 17.5, ನಾಗೇನಹಳ್ಳಿ 16.5, ಸಿಂಗನಹಳ್ಳಿ 16, ಹೂಡಿ 13, ಲಕ್ಷ್ಮೇಪುರ 11.5, ಶ್ರೀಕಂಠಪುರ 11, ಆರ್‌.ಆರ್‌.ನಗರ 11.5, ಕೆ.ಜಿ ಹಳ್ಳಿ 9.5, ಅಡಕಮಾರನಹಳ್ಳಿ 8.5, ಹಗದೂರು 7.5, ಸಿದ್ದಿನಹೊಸಹಳ್ಳಿ 7, ಎಚ್‌ಎಂಟಿ ವಾರ್ಡ್‌ 6.5, ಬ್ಯಾಟರಾಯನಪುರ, ಗೊಳ್ಳಹಳ್ಳಿ 6, ಜಕ್ಕೂರು, ಸೋಮಶೆಟ್ಟಿಹಳ್ಳಿ 5, ನಂದಿನಿ ಬಡಾವಣೆ 3.5, ಬೊಮ್ಮಸಂದ್ರ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶ ತಲಾ 3 ಮಿ.ಮೀ ಮಳೆ ಆಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.
 

Latest Videos
Follow Us:
Download App:
  • android
  • ios