ಭೂಮಿ ಖರೀದಿಸಿ ಭೂ ಪರಿವರ್ತನೆ ಮಾಡಿಸಿಕೊಳ್ಳಲು ಚಿಂತಿಸುವ ಅಗತ್ಯವಿಲ್ಲ  ಲಕ್ಷಾಂತರ ರುಪಾಯಿ ಖರ್ಚು ಮಾಡಿ ತಿಂಗಳುಗಟ್ಟಲೆ ಅಲೆಯುತ್ತಿದ್ದವರಿಗೆ ಸಂತಸದ ಸುದ್ದಿ

ಬೆಂಗಳೂರು (ಡಿ.09):  ಭೂಮಿ ಖರೀದಿಸಿ ಭೂ ಪರಿವರ್ತನೆ (Land Conversion) ಮಾಡಿಸಿಕೊಳ್ಳಲು ಲಕ್ಷಾಂತರ ರುಪಾಯಿ ಖರ್ಚು ಮಾಡಿ ತಿಂಗಳು ಗಟ್ಟಲೆ ಅಲೆಯುತ್ತಿದ್ದವರಿಗೆ ಸಂತಸದ ಸುದ್ದಿ. ಇನ್ನು ಮುಂದೆ ಚಿಂತೆ ಮಾಡಬೇಕಿಲ್ಲ, ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡಲು ರಾಜ್ಯ ಸರ್ಕಾರ(Govt Of Karnataka) ನಿರ್ಧರಿಸಿದೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ (R Ashok) ಈ ವಿಷಯ ಸ್ಪಷ್ಟಪಡಿಸಿದ್ದು, ಭೂ ಪರಿವರ್ತನೆಗಾಗಿ ಸುಮಾರು ಆರು ತಿಂಗಳು ಕಾಯಬೇಕಿತ್ತು. ಆದರೆ ಇನ್ನು ಮುಂದೆ ಹೀಗಾಗುವುದಿಲ್ಲ.ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡಲಾಗುವುದು ಎಂದರು. 

ಪ್ರಸ್ತುತ ಭೂಮಿ (land) ಪರಿವರ್ತನೆಗೆ ಹಲವು ಪ್ರಾಧಿಕಾರಗಳ ಒಪ್ಪಿಗೆ ಅಗತ್ಯವಿದ್ದು, ಸಂಕೀರ್ಣ ನಿಯಮಾವಳಿ ಇವೆ. ಇವುಗಳನ್ನು ಸರಳೀಕರಿಸಿ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡುವಂತಹ ವ್ಯವಸ್ಥೆ ರೂಪಿಸಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದರು. 

ಭೂಮಿ (Land) ಖರೀದಿಸಿದವರು ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ ಎಕರೆಯೊಂದಕ್ಕೆ 5 ಲಕ್ಷ ರುಪಾಯಿವರೆಗೂ ಅಧಿಕಾರಿಗಳ ಮಟ್ಟದಲ್ಲಿ ಖರ್ಚು ಮಾಡಬೇಕಿತ್ತು. ಈ ಬಾಬ್ತಿನಲ್ಲಿಯೇ ವರ್ಷಕ್ಕೆ ಮುನ್ನೂರು-ನಾನೂರು ಕೋಟಿ ರು. ಒಳ ವ್ಯವಹಾರ ನಡೆಯುತ್ತಿತ್ತು. ಇದೇ ಕಾರಣಕ್ಕಾಗಿ ನಿಯಮ 79 (ಎ) ಮತ್ತು 79(ಬಿ) ಯನ್ನು ಸರ್ಕಾರ (Govt) ಈಗಾಗಲೇ ರದ್ದುಗೊಳಿಸಿದೆ ಎಂದು ವಿವರಿಸಿದರು.

 ಭೂ ಪರಿವರ್ತನೆ ವಿಳಂಬವಾಗಿ ಅನಗತ್ಯ ಅಲೆದಾಟ ನಡೆಸಬೇಕಾಗಿತ್ತು. ತಿಂಗಳು ಗಟ್ಟಲೇ ವಿಳಂಬ ಆಗುತ್ತಿದ್ದರಿಂದ ತಕ್ಷಣ ಯೋಜನೆ (Project) ಪ್ರಾರಂಭಿಸಲು ಆಗದೆ ಹೂಡಿದ ಹಣದ ಮೇಲೆ ಬಡ್ಡಿ ಕಟ್ಟಬೇಕಾಗುತ್ತಿತ್ತು. ಇನ್ನೂ ಹಲವು ಸಮಸ್ಯೆ ಉದ್ಭವ ಆಗುತ್ತಿದ್ದವು. ಇವೆಲ್ಲವನ್ನೂ ಪರಿಗಣಿಸಿ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. 

ಪರಿವರ್ತನೆಗೆ ಒಳಪಡುವ ಭೂಮಿ ಒತ್ತುವರಿ ಆಗಿರಬಾರದು, ಪರಿಶಿಷ್ಟರಿಗೆ ಸೇರಿರಬಾರದು ಎಂಬುದು ಸೇರಿದಂತೆ ಹಲವು ಷರತ್ತುಗಳಿದ್ದು, ಇವುಗಳನ್ನು ಪೂರೈಸಿ ದರೆ ಒಂದೇ ದಿನದಲ್ಲಿ ಅರ್ಜಿ ಪುರಸ್ಕರಿಸಲಾಗುವುದು. ಜನರಿಗೆ ಅನುಕೂಲ ಮಾಡಿಕೊಡುವುದೇ ಇಲಾಖೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಏಕೆ ವಿಳಂಬವಾಗುತ್ತಿತ್ತು:  ಈ ಮೊದಲು ಕಂದಾಯ ಇಲಾಖೆಯು ಅರ್ಜಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಯೋಜನಾ ಪ್ರಾಧಿಕಾರಕ್ಕೆ ರವಾನಿಸುತ್ತಿತ್ತು. ಅಲ್ಲಿಂದ ಭೂಸ್ವಾಧೀನ ಅಧಿಕಾರಿಗಳು, ತಹಶೀಲ್ದಾರ್ (Tahasildar), ರೆವಿನ್ಯೂ ಇನ್‌ಸ್ಪೆಕ್ಟರ್ ಮೂಲಕ ಕೊನೆಯದಾಗಿ ಗ್ರಾಮ ಲೆಕ್ಕಾಧಿಕಾರಿಗೆ (Village Accountant) ಅರ್ಜಿ ತಲುಪುತ್ತಿದ್ದರಿಂದ ವಿವಿಧ ಹಂತದಲ್ಲಿ ವಿಳಂಬ ಆಗುತ್ತಿತ್ತು. ಸರ್ಕಾರದ ಹೊಸ ನಿರ್ಧಾರ ರಿಯಲ್ ಎಸ್ಟೇಟ್, ಕೈಗಾರಿಕಾ ವಲಯದ ಅಭಿವೃದ್ಧಿಗೆ ಪೂರಕವಾಗಲಿದೆ. ಕೃಷಿ ಭೂಮಿಯನ್ನು (Agricuture Land) ಗೃಹ ಬಳಕೆ ಅಥವಾ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಲು ಇನ್ನು ತಿಂಗಳುಗಟ್ಟಲೆ ಕಾಯಬೇಕಿಲ್ಲ.

ರೈತರ ಆಕ್ಷೇಪ ಎದುರಾಗಿತ್ತು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಕೃಷಿ ನೀತಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ರಾಜ್ಯದ ಅನ್ನದಾತರು ಒಂದೆಡೆ ರಾಜಧಾನಿಯ ಕದ ತಟ್ಟಿಪ್ರತಿಭಟನೆಗೆ ಇಳಿದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಮತ್ತೊಂದೆಡೆ ಸದ್ದಿಲ್ಲದೇ ಕೃಷಿ ಭೂಮಿ ಕೃಷಿಯೇತರ ಬಳಕೆಗೆ ಭೂ ಪರಿವರ್ತನೆ ವಿಧಾನವನ್ನು ಸರ್ಕಾರ ಸರಳೀಕರಣಗೊಳಿಸಿ ಆದೇಶ ಹೊರಡಿಸಿದೆ.

ಹೌದು, ರಾಜ್ಯ ಸರ್ಕಾರದ ಕಂದಾಯ ಇಲಾಖೆಯ (ಭೂ ಮಂಜೂರಾತಿ-1) ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದ ಅನ್ವಯ ಹಿನ್ನೆಲೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆಗೆ ಯಾರೇ ಅರ್ಜಿ ಸಲ್ಲಿಸಿದರೆ ಕೇವಲ 30 ದಿನಗಳಲ್ಲಿ ಅರ್ಜಿ ವಿಲೇವಾರಿ ಆಗಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಆದೇಶ ಹೊರ ಬೀಳಲಿದ್ದು ಕಂದಾಯ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿರುವುದು ಸಾಕಷ್ಟುಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.

ದಾವಣಗೆರೆ: ಟೈರ್‌ಗೆ ಬೆಂಕಿ ಹಚ್ಚಿ ರೈತರ ಆಕ್ರೋಶ, ಹೆಚ್ಚಾಗುತ್ತಿದೆ ಪ್ರತಿಭಟನೆ ಕಾವು ...

ಈ ಹಿಂದೆ ಭೂ ಪರಿವರ್ತನೆಗೆ ಯಾರೇ ಅರ್ಜಿ ಸಲ್ಲಿಸಿದರೂ ವಿಲೇವಾರಿಗೆ ವರ್ಷಾನುಗಟ್ಟಲೇ ಡಿಸಿ ಕಚೇರಿಯಲ್ಲಿ ಕಡತ ಧೂಳು ಹಿಡಿಯುತ್ತದೆ. ಜೊತೆಗೆ ಸಂಬಂಧಪಟ್ಟಪ್ರಾಧಿಕಾರಿಗಳು ಎನ್‌ಒಸಿ ಇಲ್ಲದೇ ಭೂ ಪರಿವರ್ತನೆ ಕಷ್ಟಸಾಧ್ಯವಾಗುತ್ತಿತ್ತು. ಆದರೆ ಸರ್ಕಾರ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 95(2)ರಡಿ ಕಲ್ಪಿಸಲಾದ ಅವಕಾಶದಂತೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬದಲಾಯಿಸಲು ಇರುವ ಭೂ ಪರಿವರ್ತನಾ ವಿಧಾನವನ್ನು ಹಲವು ಷರತ್ತುಗಳಿಗೊಳಪಟ್ಟು ಸರಳೀಕರಿಸಿದೆ. ಇದರಿಂದ ಭೂ ಪರಿವರ್ತನೆ ಕೋರಿಕೆಗಳನ್ನು ಭೂ ಪರಿವರ್ತನಾ ತಂತ್ರಾಂಶದ ಮೂಲಕ ನಿರ್ವಹಿಸಿ ಜಿಲ್ಲಾಧಿಕಾರಿಗಳ ಡಿಜಿಟಲ್‌ ಸಹಿ ಕಾರ್ಡಿನ ಮೂಲಕ ಹೊರಡಿಸಲಾಗುತ್ತದೆ. ಅರ್ಜಿ ಜೊತೆಗೆ ಕನಿಷ್ಠ ದಾಖಲೆ ಒದಗಿಸಿದರೆ ಸಾಕು ಭೂ ಪರಿವರ್ತನೆ ಸಲೀಸಾಗಿ ತ್ವರಿತಗತಿಯಲ್ಲಿ ಆಗುತ್ತದೆ.