ರೈತರನ್ನು ವಿಶ್ವಾಸಕ್ಕೆ ಪಡೆದು ಪೆರಿಫೆರಲ್ ರಸ್ತೆಗೆ ಭೂ ಪರಿಹಾರ ನಿರ್ಧಾರ: ಡಿಕೆಶಿ
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಿಂದ ನಗರದ ಹೊರಭಾಗದಲ್ಲಿ ಪೆರಿಫೆರಲ್ ರಿಂಗ್ ರಸ್ತೆ(ಪಿಪಿಆರ್) ನಿರ್ಮಾಣ ರಾಜ್ಯ ಸರ್ಕಾರದ ಆದ್ಯತೆಯ ಯೋಜನೆಯಾಗಿದೆ.
ವಿಧಾನ ಪರಿಷತ್ (ಜು.07): ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಿಂದ ನಗರದ ಹೊರಭಾಗದಲ್ಲಿ ಪೆರಿಫೆರಲ್ ರಿಂಗ್ ರಸ್ತೆ(ಪಿಪಿಆರ್) ನಿರ್ಮಾಣ ರಾಜ್ಯ ಸರ್ಕಾರದ ಆದ್ಯತೆಯ ಯೋಜನೆಯಾಗಿದೆ. ಈ ಯೋಜನೆ ಸಂಬಂಧ ಸ್ವಾಧೀನಕ್ಕೆ ಪಡೆಯುವ ರೈತರ ಭೂಮಿಗೆ ಶೀಘ್ರದಲ್ಲೇ ಸೂಕ್ತ ಪರಿಹಾರ ದರ ನಿರ್ಧರಿಸಿ ಬಳಿಕ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಆಹ್ವಾನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಶಿವಕುಮಾರ್, ನಗರ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನಗರದ ಹೊರಭಾಗದಲ್ಲಿ 8 ಪಥದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಸಂಬಂಧ ಯೋಜನೆ ರೂಪಿಸಲಾಗಿದೆ. 74 ಕಿ.ಮೀ. ಉದ್ದದ ಈ ರಸ್ತೆ ನಿರ್ಮಾಣಕ್ಕೆ 2,567 ಎಕರೆ 22 ಗುಂಟೆ ವಿಸ್ತೀರ್ಣದ ಭೂಮಿಯ ಅಗತ್ಯವಿದೆ. ಭೂಸ್ವಾಧೀನ ಸಂಬಂಧ ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ ರೈತರನ್ನು ವಿಶ್ವಾಸಕ್ಕೆ ಪಡೆದು ಪರಿಹಾರ ನಿರ್ಧರಿಸಿ ಆದ್ಯತೆ ಮೇರೆಗೆ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.
Karnataka Budget 2023 Live Updates | ಕರ್ನಾಟಕ ಬಜೆಟ್
ಈ ಹಿಂದೆ ಜೈಕಾ ಸಂಸ್ಥೆ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ವೆಚ್ಚ ಭರಿಸಲು ಸಮ್ಮತಿಸಿದ ಹಿನ್ನೆಲೆಯಲ್ಲಿ ಭೂಸ್ವಾಧೀನ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಿತ್ತು. ಈ ನಡುವೆ ಸುಪ್ರೀಂ ಕೋರ್ಚ್ ಡಾ. ಕೆ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ‘ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ ಮತ್ತು ರಿಸೆಟ್ಲ್‌ಮೆಂಟ್ ಕಾಯ್ದೆ 2013’ ಬಿಡಿಎ ಭೂಸ್ವಾಧೀನ ಪಡಿಸಿಕೊಳ್ಳುವ ಜಮೀನುಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ ಸಚಿವ ಸಂಪುಟ ನಿರ್ಧರಿಸುವ ದರಲ್ಲಿ ರೈತರಿಗೆ ಪರಿಹಾರ ನೀಡಿ ಭೂಸ್ವಾಧೀನ ಪಡೆದುಕೊಳ್ಳಲು 2022ರಲ್ಲಿ ಅನುಮೋದನೆ ನೀಡಲಾಗಿತ್ತು.
1 ಟ್ರಿಲಿಯನ್ ಡಿಜಿಟಲ್ ಆರ್ಥಿಕತೆ ಭಾರತ ದೇಶದ ಗುರಿ: ಸಚಿವ ರಾಜೀವ್ ಚಂದ್ರಶೇಖರ್
ಅದರಂತೆ ಬಿಡಿಎ ಎರಡು ಬಾರಿ ಜಾಗತಿಕ ಟೆಂಡರ್ ಆಹ್ವಾನಿಸಿದ್ದು, ಯಾವುದೇ ಬಿಡ್ಡುದಾರರು ಟೆಂಡರ್‌ನಲ್ಲಿ ಭಾಗವಹಿಸಿಲ್ಲ ಎಂದು ಹೇಳಿದರು. ಸಚಿವ ಸಂಪುಟವು ಯಾವ ದರಲ್ಲಿ ಭೂ ಪರಿಹಾರ ನೀಡಬೇಕು ಎಂದು ತೀರ್ಮಾನಿಸಿಲ್ಲ. ಬಿಡಿಎ ಕಾಯ್ದೆ 1976ರಡಿ ಭೂ ಪರಿಹಾರ ಪಡೆಯಲು ರೈತರು ಒಪ್ಪುತ್ತಿಲ್ಲ. ಹೀಗಾಗಿ ಯಾವ ರೀತಿ ಭೂ ಪರಿಹಾರ ನೀಡಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಭೂ ಪರಿಹಾರ ನಿರ್ಧರಿಸುವ ವಿಷಯವು ಸರ್ಕಾರದ ಪರಿಶೀಲನೆಯಲ್ಲಿದೆ. ರೈತರನ್ನು ವಿಶ್ವಾಸಕ್ಕೆ ಪಡೆದು ಭೂ ಪರಿಹಾರ ದರ ನಿರ್ಧಾರದ ಬಳಿಕ ಯೋಜನೆ ಅನುಷ್ಠಾನಕ್ಕೆ ಮತ್ತೆ ಟೆಂಡರ್ ಕರೆಯುವುದಾಗಿ ಶಿವಕುಮಾರ್ ತಿಳಿಸಿದರು.