ದಾಖಲೆ ತಿರುಚಿ ತೆರಿಗೆ ವಂಚಿಸಿದ ಆರೋಪದ ಮೇಲೆ ಲ್ಯಾಂಬೋರ್ಗಿನಿ ಕಾರು ಮಾಲೀಕನ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಕಾರು ಮಾಲೀಕನ ಮನೆಯಿಂದ ವಾಹನ ಜಪ್ತಿ ಮಾಡಿದ ಮೋಟಾರು ವಾಹನ ಇನ್ಸ್‌ಪೆಕ್ಟರ್‌ ಅಧಿಕಾರವನ್ನು ಪ್ರಶ್ನಿಸಿದ ನ್ಯಾಯಪೀಠ ತನಿಖೆಗೆ ಸೂಚನೆ ನೀಡಿದೆ.

ಬೆಂಗಳೂರು (ಫೆ.14): ದಾಖಲೆ ತಿರುಚಿ ನೋಂದಣಿ ಮಾಡುವ ಮೂಲಕ ಸರ್ಕಾರಕ್ಕೆ ತೆರಿಗೆ ವಂಚಿಸಿದ ಆರೋಪದ ಮೇಲೆ ಲ್ಯಾಂಬೋರ್ಗಿನಿ ಕಾರು ಮಾಲೀಕನ ಮೇಲೆ ದಾಖಲಾಗಿರುವ ಪ್ರಕರಣದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Add Asianetnews Kannada as a Preferred SourcegooglePreferred

ಪ್ರಕರಣ ಸಂಬಂಧ ಫೋರ್ಜರಿ ಮತ್ತು ವಂಚನೆ ಆರೋಪ ಮೇಲೆ ತಮ್ಮ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಹಾಯ್‌ ಕಾರ್‌ ಕೇರ್‌ ಮುಖ್ಯಸ್ಥರೂ ಆದ ಲ್ಯಾಂಬೋರ್ಗಿನಿ ಕಾರಿನ ಮಾಲೀಕ ಜೆ. ರಾಮಕೃಷ್ಣಯ್ಯ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: Vande Mataram Row: ವಂದೇಮಾತರಂ ಗೀತೆ ಕಡ್ಡಾಯಕ್ಕೆ ಮುಸ್ಲಿಂ ಮುಖಂಡರಿಂದ ವಿರೋಧ

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಪ್ರಕರಣ ಕುರಿತು ಹಿರಿಯ ಮೋಟಾರು ವಾಹನ ಇನ್ಸ್‌ಪೆಕ್ಟರ್‌ ಎನ್‌.ರಂಜಿತ್‌ ಅವರು ಕೊಡಿಗೆಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ನಂತರ ಅವರೇ ರಾಮಕೃಷ್ಣಯ್ಯ ಅವರ ಮನೆಗೆ ಹೋಗಿ ಕಾರು ಜಪ್ತಿ ಮಾಡಿ ಟೋಯಿಂಗ್‌ ಮಾಡಿಕೊಂಡು ಹೋಗಿದ್ದಾರೆ. ಮೋಟಾರು ವಾಹನ ಇನ್ಸ್‌ಪೆಕ್ಟರ್‌ಗೆ ಮನೆಗೆ ಹೋಗಿ ಕಾರು ಜಪ್ತಿ ಮಾಡುವ ಅಧಿಕಾರ ಎಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಅರ್ಜಿದಾರರ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿತು.

ಅಲ್ಲದೆ, ಕಾರು ತಮ್ಮ ವಶಕ್ಕೆ ನೀಡುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿದಾರರು ಅರ್ಜಿ ಸಲ್ಲಿಸಬಹುದು. ಅಂತಹ ಅರ್ಜಿ ಸಲ್ಲಿಕೆಯಾದರೆ, ಅದನ್ನು ಕಾನೂನು ಪ್ರಕಾರ ಇತ್ಯರ್ಥಪಡಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಹಿಗ್ಗಾಮುಗ್ಗಾ ತರಾಟೆ:

ಇದೇ ವೇಳೆ ಫೆ.7ರಂದು ಅರ್ಜಿದಾರರ ಮನೆಗೆ ಹೋಗಿ ಕಾರು ಜಪ್ತಿ ಮಾಡಿ ತೆಗೆದುಕೊಂಡು ಹೋಗಲು ಹಿರಿಯ ಮೋಟಾರು ಇನ್ಸ್‌ಪೆಕ್ಟರ್‌ಗೆ ಅಧಿಕಾರ ಎಲ್ಲಿದೆ? ಕಾರು ತೆಗೆದುಕೊಂಡು ಹೋಗುವ ಅಧಿಕಾರ ಇನ್ಸ್‌ಪೆಕ್ಟರ್‌ ಅವರಿಗೆ ಇಲ್ಲವಾದರೆ, ನಿಜವಾಗಿಯೂ ಅವರು ಕಠಿಣ ಕ್ರಮ ಎದುರಿಸುತ್ತಾರೆ. ಅವರನ್ನು ಸೇವೆಯಿಂದ ಅಮಾನತುಪಡಿಸಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗುವುದು ಎಂದು ನ್ಯಾಯಪೀಠ ಇದೇ ವೇಳೆ ಎಚ್ಚರಿಕೆ ನೀಡಿದೆ.

ಆರ್‌ಟಿಒ ಅಧಿಕಾರಿಗಳಿಂದ ಅಕ್ರಮ

ವಿಚಾರಣೆ ವೇಳೆ ಪ್ರಕರಣದ ಕುರಿತು ಸಾರಿಗೆ ಇಲಾಖೆ ಜಂಟಿ ಆಯುಕ್ತರು ನಡೆಸಿದ ವಿಚಾರಣೆಯಿಂದ ತೆರಿಗೆ ವಂಚಿಸಲು ಕಾರು ಮಾಲೀಕರು ದಾಖಲೆ ತಿರುಚಿದ್ದಾರೆ. ಅವುಗಳನ್ನು ಆರ್‌ಟಿಒಗೆ ಸಲ್ಲಿಸಿ ಕಾರು ನೋಂದಣಿ ಮಾಡಿಸಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಕಾರು 2022ರಲ್ಲಿಯೇ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿತ್ತು. ಆದರೆ, ಆ ಹಳೆಯ ಮಾಹಿತಿಯನ್ನು ಆರ್‌ಟಿಒ ಅಧಿಕಾರಿಗಳೇ ತೆಗೆದುಹಾಕಿ, ಹೊಸ ಮಾಹಿತಿ ತುಂಬಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: Valentine’s Day 2026: ಇಂದು 'ಪ್ರೇಮಿಗಳ ದಿನ' ಗುಲಾಬಿ ರೈತರಿಗೆ ಸುದಿನ

ಅದಕ್ಕೆ ಆಘಾತ ವ್ಯಕ್ತಪಡಿಸಿದ ನ್ಯಾಯಮುರ್ತಿಗಳು, ಈ ಪ್ರಕರಣದಲ್ಲಿ ಆರ್‌ಟಿಒ ಅಧಿಕಾರಿಗಳನ್ನು ಯಾಕೆ ಆರೋಪಿಗಳನ್ನಾಗಿ ಮಾಡಿಲ್ಲ. ಅವರ ವಿರುದ್ಧ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ? ಈಗಲಾದರೂ ಆನ್‌ಲೈನ್‌ ಹಾಗೂ ಕಂಪ್ಯೂಟರ್‌ ಮೂಲಕ ಕೆಲಸಗಳು ನಡೆಯುವುದರಿಂದ ಕೊಂಚಮಟ್ಟಿಗೆ ಅಕ್ರಮಗಳು ಕಡಿಮೆಯಾಗಿವೆ. ಈ ಹಿಂದೆ ಅವ್ಯವಹಾರಗಳು ಹೆಚ್ಚಾಗಿತ್ತು. ಪ್ರಕರಣದಲ್ಲಿ ತಪ್ಪಿತಸ್ಥ ಆರ್‌ಟಿಒ ಅಧಿಕಾರಿಗಳನ್ನು ಸೇರಿಸಿ, ಅವರ ವಿರುದ್ಧವೂ ತನಿಖೆ ಅಥವಾ ವಿಚಾರಣೆಗೆ ಆದೇಶಿಸಲಾಗುವುದು ಎಂದು ತಿಳಿಸಿದರು.

YouTube video player