ಗೃಹಲಕ್ಷ್ಮಿ ಯೋಜನೆ ಕುರಿತು ಟೀಕಿಸಿದ್ದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರನ್ನು 'ಬಲೂನ್'ಗೆ ಹೋಲಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈವರೆಗೆ 26 ಕಂತುಗಳಲ್ಲಿ ಹಣ ಜಮೆ ಮಾಡಿದ್ದು, ಬಾಕಿ ಹಣವನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. 

ಕೊಪ್ಪಳ (ಫೆ.01) : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಗೃಹಲಕ್ಷ್ಮಿ' ಯೋಜನೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಕೊಪ್ಪಳದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ವಿರೋಧ ಪಕ್ಷದಲ್ಲಿರುವ ಮಹೇಶ್ ಟೆಂಗಿನಕಾಯಿ ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅವರು ಒಂಥರಾ ಬಲೂನ್ ಇದ್ದ ಹಾಗೆ, ಯಾವಾಗ ಒಡೆದು ಹೋಗುತ್ತಾರೋ ಗೊತ್ತಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಹೆಬ್ಬಾಳಕರ್, ಹುಬ್ಬಳ್ಳಿ-ಧಾರವಾಡ ಕೇಂದ್ರ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಆರೋಪಗಳಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದರು. 'ನಾನು ಸುಮ್ಮನಿದ್ದೇನೆ ಎಂದು ಟೆಂಗಿನಕಾಯಿ ಅವರು ಅತಿಯಾಗಿ ಮಾತನಾಡುತ್ತಿದ್ದಾರೆ. ರಾಜ್ಯಕ್ಕೆ ತಾವೊಬ್ಬರೇ ವಿದ್ಯಾವಂತರು ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಲೆಕ್ಕಪತ್ರ ಹೇಳಲು ಅವರೇನು ಆರ್ಥಿಕ ತಜ್ಞರಲ್ಲ. ಅವರಿಗೆ ಯಾವ ಭಾಷೆಯಲ್ಲಿ ಹೇಳಿದರೆ ಅರ್ಥವಾಗುತ್ತದೆಯೋ, ಅದೇ ಭಾಷೆಯಲ್ಲಿ ನಾನು ಉತ್ತರ ಕೊಡುತ್ತೇನೆ. ಮೊದಲು ಅವರು ತಮ್ಮ ಮನೆಯನ್ನು ಸುಧಾರಿಸಿಕೊಳ್ಳಲಿ, ನಂತರ ಸರ್ಕಾರದ ಬಗ್ಗೆ ಮಾತನಾಡಲಿ," ಎಂದು ತಿರುಗೇಟು ನೀಡಿದರು.

52 ಸಾವಿರ ರೂ. ಜಮೆ ಮಾಡಿದ್ದೇವೆ:

ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯ ಬಗ್ಗೆ ಸಮರ್ಥನೆ ನೀಡಿದ ಸಚಿವರು, 'ನಾವು ಈವರೆಗೆ ಗೃಹಲಕ್ಷ್ಮಿ ಯೋಜನೆಯ 24 ಕಂತುಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದೇವೆ. ಇದೀಗ ಮತ್ತೆ ಎರಡು ಕಂತುಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಒಟ್ಟಾರೆಯಾಗಿ 26 ಕಂತುಗಳಲ್ಲಿ ತಲಾ 2 ಸಾವಿರದಂತೆ ಒಟ್ಟು 52 ಸಾವಿರ ರೂಪಾಯಿ ಹಣವನ್ನು ಫಲಾನುಭವಿಗಳಿಗೆ ನೀಡಿದ್ದೇವೆ. ನಮ್ಮ ಸರ್ಕಾರದ ಭರವಸೆಗಳನ್ನು ನಾವು ಪ್ರಾಮಾಣಿಕವಾಗಿ ಈಡೇರಿಸಿದ್ದೇವೆ. ಆದರೆ, ನಾವು ಬಡವರಿಗೆ ದುಡ್ಡು ತಲುಪಿಸುತ್ತಿರುವುದು ಬಿಜೆಪಿಯವರಿಗೆ ಹೊಟ್ಟೆಕಿಚ್ಚು ತರಿಸಿದೆ. ಹಿಂದಿನ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಕಂಟಕವಿತ್ತು' ಎಂದು ಕಿಡಿಕಾರಿದರು.

ಬಾಕಿ ಬಗ್ಗೆ ಕೇಳಿದ್ದಕ್ಕೆ ತಡಬಡಾಯಿಸಿದ ಸಚಿವೆ:

ಇದೇ ವೇಳೆ ಪತ್ರಕರ್ತರು, 'ಇನ್ನೂ ಎಷ್ಟು ತಿಂಗಳ ಹಣ ಬಾಕಿ ಇದೆ?' ಎಂದು ಪ್ರಶ್ನಿಸಿದಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕ್ಷಣಕಾಲ ಗಲಿಬಿಲಿಗೊಂಡ ಪ್ರಸಂಗವೂ ನಡೆಯಿತು. ಪ್ರಶ್ನೆಗೆ ತಕ್ಷಣ ಉತ್ತರಿಸಲಾಗದೆ, 'ಬ್ರದರ್, ಒಂದು ನಿಮಿಷ...' ಎಂದು ಹೇಳುತ್ತಾ ಕಕ್ಕಾಬಿಕ್ಕಿಯಾದರು. ನಂತರ ಸಾವರಿಸಿಕೊಂಡು ಮಾತನಾಡಿದ ಅವರು, 'ಒಟ್ಟು ಐದು ತಿಂಗಳ ಹಣ ಬಾಕಿ ಇತ್ತು. ಅದರಲ್ಲಿ ನಿನ್ನೆ ಎರಡು ತಿಂಗಳ ಹಣವನ್ನು ಬಿಡುಗಡೆ ಮಾಡಿ ಕ್ಲಿಯರೆನ್ಸ್ (Clearance) ಕೊಟ್ಟಿದ್ದೇನೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಡತಗಳು ಹಣಕಾಸು ಇಲಾಖೆಯ ಮುಂದಿವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡುತ್ತಾರೆ. ಸದ್ಯ ನನ್ನ ಕಡೆಯಿಂದ ಎರಡು ತಿಂಗಳ ಹಣ ಹಾಕಿನೇ ನಾನು ಇಲ್ಲಿಗೆ ಬಂದಿರೋದು' ಎಂದು ಸ್ಪಷ್ಟನೆ ನೀಡಿದರು.

ಒಟ್ಟಾರೆಯಾಗಿ, ಗೃಹಲಕ್ಷ್ಮಿ ಯೋಜನೆಯ ಜಮೆಯ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರ ಮುಂದುವರಿದಿದ್ದು, ಸಚಿವೆ ಹೆಬ್ಬಾಳಕರ್ ಅವರ 'ಬಲೂನ್' ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.