ರಾಜ್ಯದಲ್ಲಿದೆ ಏಷ್ಯಾದ ಅತಿದೊಡ್ಡ ಮಾವು ಮಾರುಕಟ್ಟೆ, ಆದರೆ ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲ!
ಶ್ರೀನಿವಾಸಪುರ ಮಾವಿನ ತವರೂರು ಎಂದು ವಿಶ್ವ ಪ್ರಸಿದ್ದಿ ಪಡೆಯುವ ಮೂಲಕ ಇಲ್ಲಿನ ಮಾವಿಗೆ ಅಷ್ಟೇ ಬೇಡಿಕೆ ಉಳಿಸಿಕೊಂಡಿದೆ. ಆದರೆ ಇಲ್ಲಿ ಮೂಲಭೂತ ಸೌಕರ್ಯವೇ ಇಲ್ಲ
ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಮೇ.27): ಅದು ವಿಶ್ವ ಪ್ರಸಿದ್ದ ಮಾವಿನ ನಗರಿ ಎಂದು ಹೆಸರುವಾಸಿ ಪಡೆದಿರುವ ಸ್ಥಳ. ಅಲ್ಲಿ ಬೆಳೆಯುವ ವಿವಿಧ ತಳಿಯ ಮಾವು ಕೇವಲ ಭಾರತ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಿಗೂ ರಫ್ತು ಆಗುತ್ತೆ. ಅಷ್ಟಿದ್ರು ಸಹ ಆ ವಿಶ್ವ ಪ್ರಸಿದ್ಧ ಮಾರುಕಟ್ಟೆಯ ಪರಿಸ್ಥಿತಿ ಮಾತ್ರ ಹೇಳ ತೀರದಾಗಿದೆ. ಕೋಲಾರ ಜಿಲ್ಲೆಯ ವಿಶ್ಚ ಪ್ರಸಿದ್ದ ಮಾವಿನ ಹಣ್ಣಿನ ನಗರ ಶ್ರೀನಿವಾಸಪುರದಲ್ಲಿ ಮಾವು ಸುಗ್ಗಿ ಆರಂಭವಾಗಿದ್ದು,ಇಲ್ಲಿನ ಮಾವು ಬೆಳೆಗಾರರು ಎಲ್ಲಾ ತಳಿಯ ಮಾವುಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ದೇಶದ ಮೂಲೆ ಮೂಲೆಗಳಿಗೆ ಮಾವು ರಫ್ತು ಮಾಡಲಾಗ್ತಿದ್ದು, ವಿದೇಶಗಳಿಗೂ ಪೋಸ್ಟಲ್ ಮೂಲಕ ಮಾರಾಟ ಮಾಡಲಾಗ್ತಿದೆ.
ಹೀಗಾಗಿ ಶ್ರೀನಿವಾಸಪುರ ತಾಲೂಕು ಮಾವಿನ ತವರೂರು ಎಂದು ವಿಶ್ವ ಪ್ರಸಿದ್ದಿ ಪಡೆಯುವ ಮೂಲಕ ಇಲ್ಲಿನ ಮಾವಿಗೆ ಅಷ್ಟೇ ಬೇಡಿಕೆ ಉಳಿಸಿಕೊಂಡಿದ್ದೆ. ಆದ್ರೆ ಇಲ್ಲಿನ ಬೆಳಗಾರರಿಗೆ ಮಾತ್ರ ಮಾರುಕಟ್ಟೆಗೆ ತಂದು ಮಾವು ಹಾಕಿ ಮನೆಗೆ ವಾಪಸ್ಸು ಹೋಗುವಷ್ಟರಲ್ಲಿ ಸಾಕಪ್ಪ ಸಾಕು ಅನ್ನುವಂತೆ ಮಾಡುತ್ತಿದೆ.
ಮಾವು ಮಾರುಕಟ್ಟೆಯಲ್ಲಿನ ಮೂಲಭೂತ ಸಮಸ್ಯೆಗಳು ಕಾರ್ಮಿಕರನ್ನ ಹೈರಾಣಾಗಿಸಿದೆ, ಮಾರುಕಟ್ಟೆಗೆ ಮಾವು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದು, ಮಾವು ಮಂಡಿಗಳಲ್ಲಿ ಕೆಲಸ ಮಾಡಲೆಂದು ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಆಂದ್ರದಿಂದ ಆಗಮಿಸಿದ್ದಾರೆ, ಹೆಸರಿಗೆ ಮಾತ್ರ ಏಷ್ಯಾದಲ್ಲೆ ಅತಿದೊಡ್ಡ ಮಾವು ಮಾರುಕಟ್ಟೆ ಎಂಬ ಹೆಸರು ಪಡೆದಿರೊ ಶ್ರೀನಿವಾಸಪುರ ಮಾವು ಮಾರುಕಟ್ಟೆಯಲ್ಲಿ,ಬಳಸುವ ನೀರಿಗಾಗಿ ಕಾರ್ಮಿಕರು ಪಡಬಾರದ ಕಷ್ಟ ಪಡ್ತಿದ್ದಾರೆ.
ಕೃಷಿ ತಜ್ಞರಿಗೇ ಸವಾಲೊಡ್ಡಿದ ಅಪರೂಪದ ಮಾವಿನ ಹಣ್ಣು: ತೋಟದ ಎಲ್ಲ ಮಾವು ಹೀಗಿದೆಯಂತೆ!
ಇನ್ನು ಕುಡಿಯುವ ನೀರಿಗೂ ಸಹ ಮಾರುಕಟ್ಟೆ ಆವರಣದ ಹೊರಗಿನ, ಓವರ್ ಹೆಡ್ ಟ್ಯಾಂಕರ್ ನ ಕೆಳಗಿರೊ ಸಂಪ್ ಮೇಲೆ ಹತ್ತಿ, 40 ಅಡಿ ಆಳವಿರೊ ಸಂಪ್ ನಲ್ಲಿ ಇಳಿದು, ಬಿಂದಿಗೆಯಲ್ಲಿ ನೀರು ತೆಗೆದುಕೊಂಡು, ಕಾರ್ಮಿಕರು ಮಾರುಕಟ್ಟೆಯಲ್ಲಿ ಬಳಸುತ್ತಿದ್ದಾರೆ. ವಿಪರ್ಯಾಸ ಎಂದರೆ ಎ.ಪಿ.ಎಂ.ಸಿ ಎದುರಿಗೆ ನೀರಿನ ಟ್ಯಾಂಕರ್ ಇದ್ದರು, ಮಾರುಕಟ್ಟೆ ಒಳಗಿನ ಓವರ್ ಹೆಡ್ ಟ್ಯಾಂಕರ್ ನಿಂದ ಸರಬರಾಜು ಆಗದೆ, ಕಾರ್ಮಿಕರು ಪರದಾಡುವಂತಾಗಿದೆ. ಇಷ್ಟೆಲ್ಲಾ ಮೂಲಬೂತ ಸಮಸ್ಯೆಗಳಿದ್ದರೂ ಸಹ ಇಲ್ಲಿನ ಎಪಿಎಂಸಿ ಅಧಿಕಾರಿಗಳು ಕಣ್ಣಿದ್ದು ಕುರುಡುರಾಗಿದ್ದಾರೆ ಎಂದು ಟೀಕೆಗಳು ಕೇಳಿಬರ್ತಿದೆ. ಇನ್ನು ಸ್ಥಳೀಯ ರೈತರ ಪಾಡು ಅಂತೂ ಹೇಳ ತೀರದು, ಕಷ್ಟಪಟ್ಟು ಮಾವು ಬೆಳೆದು, ತಂದು ಮಾರುಕಟ್ಟೆಗೆ ಹಾಕೋಷ್ಟರಲ್ಲಿ ಮಂಡಿ ಮಾಲೀಕರ ಕಮಿಷನ್ ಬರೆಯ ಜೊತೆಗೆ ಮೂಲಭೂತ ಸೌಕರ್ಯಗಳು ಸಹ ಸಿಗದೆ ಪಡಬಾರದ ಕಷ್ಟ ಪಡ್ತಿದ್ದಾರೆ.
ಕೊಪ್ಪಳದ ಮಿಯಾಜಾಕಿ ಮಾವಿನ ಹಣ್ಣಿಗೆ 2.50 ಲಕ್ಷ ರೂ: ವಿಶ್ವದ ದುಬಾರಿ ಮಾವು
ಒಟ್ಟಾರೆ ಹೇಳಿಕೊಳ್ಳೋದಕ್ಕೆ ಏಷಿಯಾದಲ್ಲೇ ಶ್ರೀನಿವಾಸಪುರ ಮಾವಿನ ಮರುಕಟ್ಟೆ ಪ್ರಸಿದ್ದಿ ಪಡೆದಿದೆ. ಆದ್ರೆ ಇಲ್ಲಿನ ಮಾವು ಬೆಳೆಗಾರರು ಹಾಗೂ ಕಾರ್ಮಿಕರ ಸಮಸ್ಯೆ ಮಾತ್ರ ಹೇಳ ತೀರದಾಗಿದೆ.ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಏಷಿಯಾದ ದೊಡ್ಡ ಮಾವು ಮಾರುಕಟ್ಟೆಯ ಸಮಸ್ಯೆ ಬಗೆಹರಿಸಲಿ ಅನ್ನೋದು ನಮ್ಮ ಮನವಿ.