Asianet Suvarna News Asianet Suvarna News

ಪೊಲೀಸರ ವೇತನಕ್ಕೆ ಅನುದಾನದ ಕೊರತೆ, ಗ್ಯಾರಂಟಿ ಯೋಜನೆಗೆ ರಾಜ್ಯದ ಖಜಾನೆ ಖಾಲಿ?

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ವೇತನ ಬಿಡುಗಡೆಗೆ ಅನುದಾನ ಕೊರತೆ ಕಾಡುತ್ತಿದೆಯೇ? ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಪೊಲೀಸರ ವೇತನ ನೀಡಲು ಆರ್ಥಿಕ ಆಭಾವ ಎದುರಾಗಿದೆಯೇ?

Lack of funding for police salaries at yadgir rav
Author
First Published Aug 4, 2023, 4:52 AM IST | Last Updated Aug 4, 2023, 4:52 AM IST

ಆನಂದ್‌ ಎಂ.ಸೌದಿ

ಯಾದಗಿರಿ (ಆ.4) :  ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ವೇತನ ಬಿಡುಗಡೆಗೆ ಅನುದಾನ ಕೊರತೆ ಕಾಡುತ್ತಿದೆಯೇ? ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಪೊಲೀಸರ ವೇತನ ನೀಡಲು ಆರ್ಥಿಕ ಆಭಾವ ಎದುರಾಗಿದೆಯೇ?

ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ(Dr CB Vedamurthy) ಅವರು ಆ.2ರಂದು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಳುಹಿಸಿದ್ದ ಇ-ಮೇಲ್‌ ಸಂದೇಶಗಳು ಇದೀಗ ಇಂಥ ಚÜರ್ಚೆಗಳಿಗೆ ಗ್ರಾಸವಾಗಿದೆ.

ಏನಾಗಿದೆ?: ಅನುದಾನ ಕೊರತೆ ಹಾಗೂ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್‌ಎಂಎಸ್‌-ಹ್ಯೂಮನ್‌ ರಿಸೋರ್ಸ್‌ ಮ್ಯಾನೇಜ್ಮೆಂಟ್‌ ಸಿಸ್ಟಂ)ಯ ತಾಂತ್ರಿಕ ದೋಷದ ಕಾರಣಗಳಿಂದಾಗಿ ಜಿಲ್ಲೆಯ ಎಲ್ಲ ಪೊಲೀಸ್‌ ಅಧಿಕಾರಿ/ಸಿಬ್ಬಂದಿ ಮುಂದಿನ ಜುಲೈ ತಿಂಗಳ ವೇತನವನ್ನು ನಿಗದಿತ ಸಮಯದಲ್ಲಿ ಸಂದಾಯ ಮಾಡಲು ಆಗುತ್ತಿಲ್ಲವೆಂದು ಆ.2 ರ ಮಧ್ಯಾಹ್ನ ಎಲ್ಲ ಪೊಲೀಸ್‌ ಠಾಣೆಗಳ ಮೂಲಕ ಅಂತರ ಕಚೇರಿ ಮಾಹಿತಿ ನೀಡಲಾಗಿತ್ತು.

News Hour: ಗ್ಯಾರಂಟಿ ಜಾರಿಯಿಂದಾಗಿ ಖಾಲಿಯಾಯ್ತಾ ಸರ್ಕಾರದ ಖಜಾನೆ?

ಮಾಮೂಲಿಯಾಗಿ ತಿಂಗಳ ಮೊದಲ ದಿನ ಅಥವಾ ಹಿಂದಿನ ತಿಂಗಳ ಕೊನೇ ದಿನವೇ ವೇತನ ಪಾವತಿ ಆಗುತ್ತಿತ್ತು. ಆದರೆ ಎಸ್ಪಿ ಅವರು ಕಳುಹಿಸಿದ್ದ ಇ-ಮೇಲ್‌ ಸಂದೇಶದಲ್ಲಿ ಎಚ್‌.ಆರ್‌.ಎಂ.ಎಸ್‌ ತಾಂತ್ರಿಕ ದೋಷದ ಬಗ್ಗೆ ಪ್ರಸ್ತಾಪವಿತ್ತಾದರೂ ‘ಅನುದಾನದ ಕೊರತೆ’ ವಿಚಾರ ಸಿಬ್ಬಂದಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಇದು ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರದಲ್ಲಿ ಬೊಕ್ಕಸದ ಮೇಲಾಗಿರುವ ವ್ಯತಿರಿಕ್ತ ಪರಿಣಾಮವೇ ಎಂಬ ಪ್ರಶ್ನೆಗಳು ಖಾಕಿಪಡೆಯಲ್ಲೇ ಕೇಳಿಬಂದವು. ಈ ಹಿಂದೆ ತಾಂತ್ರಿಕ ದೋಷದಿಂದಾಗಿ ಕೆಲ ಬಾರಿ ವಿಳಂಬವಾಗಿತ್ತಾದರೂ, ಈಗ ‘ಅನುದಾನ ಕೊರತೆ’ ಎಂಬುದಾಗಿ ನೀಡಿದ್ದ ಹೊಸ ಕಾರಣ ಸರ್ಕಾರದ ಆರ್ಥಿಕ ಸ್ಥಿತಿಗತಿ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿತ್ತು.

‘ಅನುದಾನ ಕೊರತೆ’ ಶಬ್ದ ವಿವಾದ ಸೃಷ್ಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು, ವೇತನ ವಿತರಣೆಗೆ ಅನುದಾನ ಕೊರತೆ ಅಲ್ಲ, ತಾಂತ್ರಿಕ ದೋಷ ಕಾರಣವಾಗಿದ್ದು ಮೊದಲಿನ ಪ್ರಕಟಣೆ ಹಿಂಪಡೆಯಲಾಗಿದೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರಲ್ಲದೆ, ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ನಂಥ ಸಾಮಾಜಿಕ ಜಾಲತಾಣಗಳಲ್ಲೂ ಪರಿಷ್ಕೃತ ಸಂದೇಶ ಹರಿಬಿಟ್ಟರು. ‘ತಾಂತ್ರಿಕ ದೋಷದಿಂದಾಗಿ ವೇತನ ವಿಳಂಬವಾಗಿದೆ. 2 ದಿನಗಳಲ್ಲಿ ವೇತನ ನೀಡಲಾಗುತ್ತದೆ’ ಎಂದು ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ನಂತರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಯಾದಗಿರಿಯಲ್ಲಿ ಅನ್ನಭಾಗ್ಯ ಸಾಗಾಟದ ಲಾರಿಗಳಿಗಿಲ್ಲ ಭದ್ರತೆ..!

Latest Videos
Follow Us:
Download App:
  • android
  • ios