ದೇಶದ ಅತ್ಯಂತ ಮುಂದುವರೆದ ರಾಜ್ಯಗಳ ಪೈಕಿ ಒಂದು ಎನಿಸಿದ ಹಾಗೂ ಅತಿ ದೊಡ್ಡ ಕರಾವಳಿ ಪ್ರದೇಶವನ್ನು ಹೊಂದಿರುವ ಕರ್ನಾಟಕದಲ್ಲಿ ಚಂಡಮಾರುತ, ಬಿರುಗಾಳಿ, ಮಳೆಯ ಬಗ್ಗೆ ನಿಖರ ಮುನ್ಸೂಚನೆ ನೀಡುವ ಸಾಮರ್ಥ್ಯ ಹೊಂದಿರುವ ‘ಡಾಪ್ಲರ್‌ ರಾಡಾರ್‌’ ಅಳವಡಿಕೆಯೇ ಆಗಿಲ್ಲ.

ರಾಕೇಶ್‌ ಎಂ.ಎನ್‌.

ಬೆಂಗಳೂರು (ಏ.21): ದೇಶದ ಅತ್ಯಂತ ಮುಂದುವರೆದ ರಾಜ್ಯಗಳ ಪೈಕಿ ಒಂದು ಎನಿಸಿದ ಹಾಗೂ ಅತಿ ದೊಡ್ಡ ಕರಾವಳಿ ಪ್ರದೇಶವನ್ನು ಹೊಂದಿರುವ ಕರ್ನಾಟಕದಲ್ಲಿ (Karnataka) ಚಂಡಮಾರುತ, ಬಿರುಗಾಳಿ, ಮಳೆಯ ಬಗ್ಗೆ ನಿಖರ ಮುನ್ಸೂಚನೆ ನೀಡುವ ಸಾಮರ್ಥ್ಯ ಹೊಂದಿರುವ ‘ಡಾಪ್ಲರ್‌ ರಾಡಾರ್‌’ (Doppler Radar) ಅಳವಡಿಕೆಯೇ ಆಗಿಲ್ಲ. ವಿಪರ್ಯಾಸವೆಂದರೆ ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕ ಮಾತ್ರ ‘ಡಾಪ್ಲರ್‌ ರಾಡಾರ್‌’ ಇಲ್ಲದ ಏಕೈಕ ರಾಜ್ಯ. ಉಳಿದ ಎಲ್ಲ ರಾಜ್ಯಗಳಲ್ಲೂ ಡಾಪ್ಲರ್‌ ರಾಡಾರ್‌ ಇದೆ. ಇಷ್ಟಾದರೂ ರಾಜ್ಯ ಸರ್ಕಾರ, ರಾಡಾರ್‌ ಮಂಜೂರು ಮಾಡುವಂತೆ ಕೇಂದ್ರದ ಮೇಲೆ ಸಾಕಷ್ಟುಒತ್ತಡ ತರುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ.

ಮೋಡದ ಸಾಂದ್ರತೆ, ದಟ್ಟತೆ, ಗಾಳಿಯ ವೇಗ, ಗಾಳಿಯ ದಿಕ್ಕು ಮುಂತಾದವುಗಳನ್ನು ಸುಮಾರು 200-300 ಕಿಮೀ ದೂರದಲ್ಲೇ ಪತ್ತೆ ಹಚ್ಚಿ ಚಂಡಮಾರುತ, ಬಿರುಗಾಳಿ, ಗುಡುಗು, ಮಿಂಚು, ಮಳೆಯ ಬಗ್ಗೆ ನಿಖರ ಮಾಹಿತಿ ನೀಡುವ ಸಾಮರ್ಥ್ಯವನ್ನು ‘ಡಾಪ್ಲರ್‌ ರಾಡಾರ್‌’ ಹೊಂದಿದೆ. ರಾಜ್ಯದಲ್ಲಿ ‘ಡಾಪ್ಲರ್‌ ರಾಡಾರ್‌’ ಇಲ್ಲದಿರುವುದರಿಂದ ಗಾಳಿ ಮತ್ತು ಮಳೆಯ ತೀವ್ರತೆಯ ಅಂದಾಜು ಸಿಗುತ್ತಿಲ್ಲ. ಉದಾಹರಣೆಗೆ ಬೆಂಗಳೂರಿನ ಯಲಹಂಕದಲ್ಲಿ ಕಳೆದ ವರ್ಷದ ನ.22 ರಂದು 15 ಸೆಂ.ಮೀ. ಭಾರಿ ಮಳೆಯಾಗಿತ್ತು. 

Madrasa Row: ಮತ್ತೊಮ್ಮೆ ಮದರಸಗಳ ಬಗ್ಗೆ ಮಾತನಾಡಿದ ರೇಣುಕಾಚಾರ್ಯ

ಆದರೆ ಭಾರಿ ಮಳೆಯ ಮುನ್ಸೂಚನೆಯನ್ನು ನೀಡುವಲ್ಲಿ ಬೆಂಗಳೂರಿನ ಹವಾಮಾನ ಇಲಾಖೆ ವಿಫಲವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಭಾರತೀಯ ಹವಾಮಾನ ಕೇಂದ್ರದ ಪ್ರಭಾರಿ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ಅವರು, ರಾಜ್ಯದಲ್ಲಿ ಸದ್ಯ ಎಲ್ಲಿಯೂ ಡಾಪ್ಲರ್‌ಗಳನ್ನು ಅಳವಡಿಸಿಲ್ಲ. ಇದರಿಂದ ಎರಡ್ಮೂರು ಗಂಟೆಗಳ ಮುಂಚೆಯೇ ನಿಖರ ಹವಾಮಾನ ವರದಿ ನೀಡಲು ತೊಂದರೆ ಆಗುತ್ತಿದೆ ಎಂದು ಹೇಳುತ್ತಾರೆ.

ಮುಂದಿನ ವರ್ಷ ಅಳವಡಿಕೆ?: ಕೇಂದ್ರ ಸರ್ಕಾರದ ಜೊತೆ ಅನೇಕ ಪತ್ರ ವ್ಯವಹಾರ ನಡೆದ ಬಳಿಕ ಇದೀಗ ರಾಜ್ಯದಲ್ಲಿಯೂ ಡಾಪ್ಲರ್‌ ಅಳವಡಿಕೆ ಪ್ರಕ್ರಿಯೆ ಚಾಲನೆಗೆ ಸಿಕ್ಕಿದೆ. ಬೆಂಗಳೂರಿನಲ್ಲಿ ಸಿ ಬ್ಯಾಂಡ್‌ ಡಾಪ್ಲರ್‌ ಅಳವಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಾಪ್ಲರ್‌ ರಾಡಾರ್‌ ಅಳವಡಿಕೆ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಒಂದೂವರೆ ವರ್ಷದಲ್ಲಿ ರಾಡಾರ್‌ ಅಳವಡಿಕೆ ಆಗಲಿದೆ. ರಾಡಾರ್‌ನ ತಾಂತ್ರಿಕ ಮಾಹಿತಿ ಇನ್ನೂ ಲಭ್ಯವಿಲ್ಲ ಎಂದು ಗೀತಾ ಅಗ್ನಿಹೋತ್ರಿ ತಿಳಿಸಿದ್ದಾರೆ.

ನಿಖರ ಮಾಹಿತಿ: ಡಾಪ್ಲರ್‌ ರಾಡಾರ್‌ಗಳು ಮೋಡದ ಎತ್ತರ, ತೀವ್ರತೆ, ಪ್ರತಿಫಲತ್ವ, ಚಲನೆಯ ವೇಗ ಮತ್ತು ದಿಕ್ಕು, ಮೋಡದ ಕಣಗಳ ಚಲನೆ, ಗಾಳಿಯ ವೇಗ ಮತ್ತು ದಿಕ್ಕುಗಳನ್ನು ಪರಿಗಣಿಸಿ ನಿಖರ ಮಾಹಿತಿ ನೀಡುತ್ತವೆ. ಕಡಿಮೆ ಕೋನದಲ್ಲಿ ಮಾಹಿತಿ ಸಂಗ್ರಹಿಸಲು ಸಾಧ್ಯ. ದಿನದ 24 ಗಂಟೆಯೂ ಹವಾಮಾನದ ಮೇಲೆ ನಿಗಾ ಇಡಲು ಸಾಧ್ಯ ಎಂದು ಹವಾಮಾನ ಇಲಾಖೆಯ ಅಧಿಕಾರಿ ಸದಾನಂದ ಅಡಿಗ ತಿಳಿಸುತ್ತಾರೆ.

ಹಂಪಿ ಬಳಿ ತಲೆ ಎತ್ತಲಿದೆ ವಿಶ್ವ ದರ್ಜೆಯ ತ್ರೀಸ್ಟಾರ್ ಹೋಟೆಲ್!

ಡಾಪ್ಲರ್‌ ಪ್ರಯೋಜನಗಳು
* ನಿಖರ ಹವಾಮಾನ ಮುನ್ಸೂಚನೆ ಲಭ್ಯ.
* ಗುಡುಗು, ಮಿಂಚು,ಚಂಡಮಾರುತದ ಸ್ಪಷ್ಟಮುನ್ಸೂಚನೆ.
* ಬೀಜ ಒಣಗಿಸುವವರಿಗೆ, ಕುರಿ ಮೇಯಿಸುವವರಿಗೆ ಅತಿ ಉಪಯುಕ್ತ.