ಕಾಂಗ್ರೆಸ್‌ನವರು ಶಾಸಕರ ಖರೀದಿ‌ ಕೇಂದ್ರ ತೆರದಿದ್ದಾರೆಂಬ ಬಿಜೆಪಿ ಆರೋಪಕ್ಕೆ ಸಚಿವ ಖಂಡ್ರೆ ಪ್ರತಿಕ್ರಿಯೆ ನೀಡಿ ‘ಶಾಸಕರನ್ನ ಖರೀದಿ ಮಾಡುವ ಚಾಳಿ ಬಿಜೆಪಿಯವರಿಗಿದೆ’ ಎಂದು ಸಚಿವ ಈಶ್ವರ್ ಖಂಡ್ರೆ ಛಾಟಿ ಬೀಸಿದರು.

ಬೀದರ್ (ನ.27): ಕಾಂಗ್ರೆಸ್‌ನವರು ಶಾಸಕರ ಖರೀದಿ‌ ಕೇಂದ್ರ ತೆರದಿದ್ದಾರೆಂಬ ಬಿಜೆಪಿ ಆರೋಪಕ್ಕೆ ಸಚಿವ ಖಂಡ್ರೆ ಪ್ರತಿಕ್ರಿಯೆ ನೀಡಿ ‘ಶಾಸಕರನ್ನ ಖರೀದಿ ಮಾಡುವ ಚಾಳಿ ಬಿಜೆಪಿಯವರಿಗಿದೆ’ ಎಂದು ಸಚಿವ ಈಶ್ವರ್ ಖಂಡ್ರೆ ಛಾಟಿ ಬೀಸಿದರು. ಅವರು ಬೀದರ್‌ನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಬಳಿಕ ಮಾತನಾಡಿ, ಆಪರೇಷನ್ ಕಮಲ‌ ಯಾರು ಮಾಡಿದ್ಯಾರು? ಸಚಿವ ಬೇಕು ಎಂದರೆ ವರಿಷ್ಠರಿಗೆ ದುಡ್ಡು ಕೊಡಬೇಕು ಎಂದು ಯತ್ನಾಳ್‌ ಅವರೇ ಒಂದೊಮ್ಮೆ ಹೇಳಿದ್ದರು. ಸಚಿವ ಸ್ಥಾನಕ್ಕೆ ₹200 ಕೋಟಿ, ಸಿಎಂ ಸ್ಥಾನಕ್ಕೆ ₹2500 ಕೋಟಿ ಕೊಡಬೇಕು ಅಂತಾ ಯತ್ನಾಳ್‌ ಹೇಳಿದ್ದರು. ಆಗ ನಾವು ಸಿಬಿಐ, ಇಡಿ ತನಿಖೆ ಮಾಡಿ ಅಂದಿದ್ದೆವಾ, ಆದ್ರೆ ಬಿಜೆಪಿಯವರು ತನಿಖೆ ‌ಮಾಡಿದ್ದರಾ ಎಂದರು

ಬಿಜೆಪಿಯವರೇ ಶಾಸಕರನ್ನು ಖರೀದಿ ಮಾಡಿದ್ದು, ಅವರೇ ಕಳುವು ಮಾಡಿ, ಅವರೇ ಆರೋಪ ಮಾಡಿ, ಅವರೇ ತನಿಖೆ ಮಾಡಿ ತೀರ್ಪು ಕೊಡೋದು ಬಿಜೆಪಿ ಚಾಳಿಯಾಗಿದೆ ಎಂದು ಖಂಡ್ರೆ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ನಾಯಕರು, ಅವರನ್ನು ಪ್ರತಿ ಸಲ ಭೇಟಿ ಆಗ್ತೇನೆ. ಡಿ.ಕೆ. ಶಿವಕುಮಾರ ಹಾಗೂ ನಾವು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ್ತಾ ಇದ್ದೇವೆ. ಶಾಸಕರು ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಕುರಿತು ಮಾತನಾಡ್ತಾ ಇದ್ದಾರೆ, ಹೀಗಾಗಿ ದೆಹಲಿಗೆ ಹೋಗಿದ್ದಾರೆ. ಎಲ್ಲರಿಗೂ ಸಚಿವ ರಾಗಬೇಕು ಎಂಬ ಆಕಾಂಕ್ಷೆ ಇರುತ್ತೆ. ನಾವು ಅರ್ಹರಿದ್ದೇವೆ ಎಂದು ಹೇಳಲು ದೆಹಲಿಗೆ ತೆರಳಿದ್ದರು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಬಸವಕಲ್ಯಾಣದಲ್ಲಿ ನ.29, 30ಕ್ಕೆ ಅನುಭವ ಮಂಟಪ ಉತ್ಸವ

ಇಲ್ಲಿನ ನೂತನ ಅನುಭವ ಮಂಟಪ ಪರಿಸರದಲ್ಲಿ 46ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವವು ನ.29 ಮತ್ತು 30 ಎರಡು ದಿನ ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ನವೆಂಬರ್ 29ರಂದು ಬೆಳಿಗ್ಗೆ 11ಗಂಟೆಗೆ ಆಂಧ್ರಪ್ರದೇಶದ ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್ ಉತ್ಸವ ಉದ್ಘಾಟಿಸಲಿದ್ದಾರೆ. ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು. ಹಾರಕೂಡಿನ ಡಾ.ಚನ್ನವೀರ ಶಿವಾಚಾರ್ಯರು, ಹುಲಸೂರ ಶ್ರೀಗಳು, ಅಕ್ಕ ಡಾ.ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸುವರು.

ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಗ್ರಂಥ ಲೋಕಾರ್ಪಣೆಗೈಯ್ಯುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಸಂಸದ ಸಾಗರ ಖಂಡ್ರೆ ಭಾವಚಿತ್ರದ ಪೂಜೆ ನೆರವೇರಿಸುವರು. ಪೌರಾಡಳಿತ ಸಚಿವ ರಹೀಂಖಾನ್, ಮಾಜಿ ಸಚಿವ ಸಂಜಯ, ನಾರಾಯಣಖೇಡ ಶಾಸಕ ಪಿ.ಸಂಜೀವರೆಡ್ಡಿ, ಶಾಸಕ ಶರಣು ಸಲಗರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಚಿತ್ರಕಲಾವಿದರಾದ ಸಿಬಿ ಸೋಮಶೆಟ್ಟಿ, ಡಾ. ಕೆ ರವೀಂದ್ರನಾಥ, ಬಸವರಾಜ ಬೆಂಗೇರಿ ಹಾಗೂ ಡಾ. ಎಸ್ಜಿ ಸುಶೀಲಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಅಲ್ಲದೇ ವಿವಿಧ ಪುಸ್ತಕಗಳ ಬಿಡುಗಡೆ ನಡೆಯಲಿದೆ ಎಂದರು.

ಮಧ್ಯಾಹ್ನ 3 ಗಂಟೆಗೆ ಜಾಗತಿಕ ನೆಲೆಯಲ್ಲಿ ಬಸವತತ್ವದ ಪ್ರಸ್ತುತತೆ ಕುರಿತು ಗೋಷ್ಠಿ ನಡೆಯಲಿದೆ. ನವೆಂಬರ್ 30ರಂದು ಬೆಳಿಗ್ಗೆ 10 ಗಂಟೆಗೆ ಲಿಂಗಾಯತ ಹೋರಾಟ ಮತ್ತು ರಾಷ್ಟ್ರೀಯತೆ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭೆ ನಡೆಯಲಿದ್ದು, ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆಯುವುದು. ಅಂದು ಮಧ್ಯಾಹ್ನ 1 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಅಧ್ಯಕ್ಷತೆ ವಹಿಸುವರು, ಜಹೀರಾಬಾದ್ ಸಂಸದ ಸುರೇಶ ಶೆಟಗಾರ, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಎಂ.ಜಿ.ಮುಳೆ ಹಾಗೂ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ವಿವಿಧ ಮುಖಂಡರು ಪಾಲ್ಗೊಳ್ಳಲಿದ್ದಾರೆ ಸಚಿವ ಖಂಡ್ರೆ ತಿಳಿಸಿದರು.