ಕೆಎಸ್‌ಆರ್‌ಟಿಸಿಯ ಪ್ರೀಮಿಯಂ ಸರ್ವಿಸ್ ಬಸ್‌ಗಳಲ್ಲಿ ಜಾರಿಯಲ್ಲಿದ್ದ ರೌಂಡಪ್ ಚಾರ್ಜಸ್‌ಗಳನ್ನು ಹಿಂಪಡೆಯಲಾಗುತ್ತಿದೆ. UPI ವ್ಯವಸ್ಥೆ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಪ್ರಯಾಣಿಕರಿಗೆ ಹಣ ಉಳಿತಾಯವಾಗಲಿದ್ದು, ನಿಗಮದ ನಷ್ಟವನ್ನೂ ತಪ್ಪಿಸಬಹುದಾಗಿದೆ.

ಬೆಂಗಳೂರು (ಜು.04): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಪ್ರತಿಷ್ಟಿತ ಸಾರಿಗೆಗಳಲ್ಲಿ (ಪ್ರೀಮಿಯಂ ಸರ್ವಿಸ್‌ ನೀಡುವ ಬಸ್ಸುಗಳಲ್ಲಿ ಮಾತ್ರ) ಜಾರಿಯಲ್ಲಿದ್ದ ರೌಂಡಪ್ ಚಾರ್ಜಸ್ ಅನ್ನು ಹಿಂಪಡೆಯಲು ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯದ ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಪ್ರೀಮಿಯಂ ಸರ್ವಿಸ್ ನೀಡುವಂತಹ ಬಸ್‌ಗಳಲ್ಲಿ ರೌಂಡ್-ಅಫ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಅಂದರೆ, ಉದಾಹರಣೆಗೆ ಒಬ್ಬ ವ್ಯಕ್ತಿಗೆ ಪ್ರಯಾಣ ದರ ರೂ.101 ರಿಂದ 105 ರವರೆಗೂ ಇದ್ದಲ್ಲಿ ಪ್ರಯಾಣಿಕರಿಂದ ರೂ.100 ಪಡೆಯಲಾಗುತ್ತದೆ ಅದೇ ರೀತಿ ರೂ.106 ರಿಂದ ರೂ.109 ಇದ್ದಲ್ಲಿ ಪ್ರಯಾಣಿಕರಿಂದ ರೂ.110 ಪಡೆಯಲಾಗುತ್ತಿತ್ತು. ಆದರೆ, ಇದೀಗ ನಿಗಮದ ಎಲ್ಲ ಬಸ್ಸುಗಳಲ್ಲಿ UPI ಯಶಸ್ವಿ ಅನುಷ್ಟಾನವಾಗಿರುವುದರಿಂದ ರೌಡಂಪ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮದ ತಂತ್ರಾಂಶದಲ್ಲಿ ಈ ಸಂಬಂಧ ಬದಲಾವಣೆ ಮಾಡುವ ಕ್ರಮ ಪ್ರಗತಿಯಲ್ಲಿರುತ್ತದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಂದರೆ ರಾಜ್ಯದಲ್ಲಿ ಈವರೆಗೆ ಕೇವಲ 400 ಬಸ್‌ಗಳು ಮಾತ್ರ ಪ್ರಯಾಣಿಕರಿಗೆ ಪ್ರೀಮಿಯಂ ಸೇವೆ ನೀಡುತ್ತಿವೆ. ಈ ಎಲ್ಲ ಬಸ್ಸುಗಳಲ್ಲಿಯೂ ಈಗಾಗಲೇ ಯುಪಿಐ ಸ್ಕ್ಯಾನ್ ಕೋಡ್ ಮೂಲಕ ಪ್ರಯಾಣಿಕರಿಂದ ಆನ್‌ಲೈನ್ ಮೂಲಕವಾಗಿಯೇ ಟಿಕೆಟ್ ಹಣವನ್ನು ಸ್ವೀಕರಿಸಬಹುದು. ಹೀಗಾಗಿ ಯಾವುದೇ ಚಿಲ್ಲರೆ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಚಿಲ್ಲರೆ ಸಮಸ್ಯೆ ಆಗಬಾರದು ಎಂದು ರೌಂಡಪ್ ವ್ಯವಸ್ಥೆ ಮಾಡಿದ್ದನ್ನು ಇದೀಗ ಹಿಂಪಡೆಯಲಾಗುತ್ತಿದೆ. ಈ ಮೂಲಕ ಒಂದು ಪ್ರಯಾಣಕ್ಕೆ 3 ರಿಂದ 4 ರೂ. ಹೆಚ್ಚುವರಿ ಹಣ ಪಾವತಿ ಮಾಡುತ್ತಿದ್ದವರಿಗೆ ಇನ್ನು ಚಿಲ್ಲರೆ ಹಣ ಉಳಿತಾಯ ಆಗಲಿದೆ. ಜೊತೆಗೆ, ನಿಗಮಕ್ಕೂ ಉಂಟಾಗುತ್ತಿದ್ದ ನಷ್ಟವನ್ನೂ ತಪ್ಪಿಸಲಬಹುದಾಗಿದೆ.