Asianet Suvarna News Asianet Suvarna News

ವೇತನ ಹೆಚ್ಚಿಸಿದರೂ ಮಾ. 21ಕ್ಕೆ ಕೆಎಸ್‌ಆರ್‌ಟಿಸಿ ಮುಷ್ಕರ ಫಿಕ್ಸ್‌..!

ರಾಜ್ಯ ಸರ್ಕಾರ 2023ರ ಮಾರ್ಚ್‌ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಆದೇಶಿಸಿದೆ. ಆದರೆ, ಸರ್ಕಾರ ಹಾಗೂ ಸಾರಿಗೆ ನಿಗಮಗಳ ಒಪ್ಪಂದದ ಅನ್ವಯ 2020ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಬೇಕಿತ್ತು. ಹೀಗಾಗಿ ನಮ್ಮ ಎರಡು ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆದ್ದರಿಂದ ನಿಗದಿಪಡಿಸಿದಂತೆ ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ: ಕೆಎಸ್‌ಆರ್‌ಟಿಸಿ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ. 

KSRTC Will Be held Strike on March 21st in Karnataka grg
Author
First Published Mar 18, 2023, 9:53 AM IST

ಬೆಂಗಳೂರು(ಮಾ.18): ವೇತನ ಪರಿಷ್ಕರಣೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಶೇ.15ರಷ್ಟು ವೇತನ ಹೆಚ್ಚಿಸಿ ಆದೇಶಿಸಿದೆ. ಆದರೆ, ಶೇ.25ರಷ್ಟು ವೇತನ ಹೆಚ್ಚಿಸಬೇಕು ಎಂದು ಪಟ್ಟು ಹಿಡಿದಿರುವ ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆಗಳು, ಪೂರ್ವ ನಿಗದಿಯಂತೆ ಮಾರ್ಚ್‌ 21ರಿಂದ ಬಸ್‌ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತೀರ್ಮಾನಿಸಿ ಸರ್ಕಾರಕ್ಕೆ ಸಡ್ಡು ಹೊಡೆದಿವೆ.
ರಾಜ್ಯ ಸರ್ಕಾರ 2023ರ ಮಾರ್ಚ್‌ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಆದೇಶಿಸಿದೆ. ಆದರೆ, ಸರ್ಕಾರ ಹಾಗೂ ಸಾರಿಗೆ ನಿಗಮಗಳ ಒಪ್ಪಂದದ ಅನ್ವಯ 2020ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಬೇಕಿತ್ತು. ಹೀಗಾಗಿ ನಮ್ಮ ಎರಡು ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆದ್ದರಿಂದ ನಿಗದಿಪಡಿಸಿದಂತೆ ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ‘ಕನ್ನಡಪ್ರಭ’ಕ್ಕೆ ತಿಳಿಸಿದೆ.

ಸಾರಿಗೆ ನೌಕರರ ಸಂಘಟನೆಗಳ ಮುಖಂಡರೊಂದಿಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ಅವರು ಶುಕ್ರವಾರ ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದರು. ಸಭೆಯಲ್ಲಿ ಸಂಘಟನೆಗಳ ಮುಖಂಡರು ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು. 2020ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಬೇಕು. ಈ ಹಿಂದೆ ಸಾರಿಗೆ ನೌಕರರ ಮೇಲೆ ಹಾಕಿರುವ ಕೇಸುಗಳನ್ನು ಹಿಂಪಡೆಯಬೇಕು. ಕೆಲಸದಿಂದ ವಜಾ ಮಾಡಿರುವ ನೌಕರರನ್ನು ಪುನಃ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದಿದ್ದವು.

ಸಿಎಂ ಆಫರ್‌ ತಿರಸ್ಕಾರ: ಮಾ.21ರಿಂದ ಕೆಎಸ್‌ಆರ್‌ಟಿಸಿ ಬಸ್‌ ಮುಷ್ಕರ

ಯಾವುದೇ ಕಾರಣಕ್ಕೂ ಶೇ.15ರಷ್ಟು ವೇತನ ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಸಭೆಯಲ್ಲಿ ಸ್ಪಷ್ಟವಾಗಿ ಅನ್ಬುಕುಮಾರ್‌ ಅವರ ಗಮನಕ್ಕೆ ಸಂಘಟನೆಗಳ ಮುಖಂಡರು ತಂದಿದ್ದರು. ಈ ನಡುವೆಯೂ ರಾಜ್ಯ ಸರ್ಕಾರ ಶೇ.15ರಷ್ಟು ವೇತನ ಹೆಚ್ಚಿಸಿ 2023ರ ಮಾರ್ಚ್‌ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಲು ಆದೇಶಿಸಿರುವುದಕ್ಕೆ ಕೆಎಸ್‌ಆರ್‌ಟಿಸಿ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್‌ ಸೇರಿದಂತೆ ವಿವಿಧ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ.

ಇಂದು ನೌಕರರ ಸಭೆ

ರಾಜ್ಯ ಸರ್ಕಾರದ ಆದೇಶದ ಕುರಿತು ಶನಿವಾರ ಬೆಳಗ್ಗೆ ಸವಿವರವಾಗಿ ಚರ್ಚೆ ನಡೆಸಿ ಮುಂದಿನ ನಿರ್ಧಾರದ ಬಗ್ಗೆ ತೀರ್ಮಾನಿಸಲಾಗುವುದು. ಆದರೆ, ನಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಸರ್ಕಾರ ಆದೇಶ ಹೊರಡಿಸಿಲ್ಲ. ಆದ್ದರಿಂದ ಮಾಚ್‌ರ್‍ 21ಕ್ಕೆ ನಿಗದಿಯಂತೆ ಮುಷ್ಕರ ನಡೆಸುವ ಕುರಿತು ಸಹ ಸಭೆಯಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಅಂತ ಕೆಎಸ್‌ಆರ್‌ಟಿಸಿ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡ ವಿಜಯ ಭಾಸ್ಕರ್‌ ತಿಳಿಸಿದ್ದಾರೆ. 

ಯುಗಾದಿಗೆ KSRTC ಬಸ್‌ ಡೌಟ್‌,ಮಾರ್ಚ್‌ 21ರಿಂದ ಸಾರಿಗೆ ನೌಕರರ ಮುಷ್ಕರ

ಈ ಸಂಬಂಧ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ಅವರು,ಮಾರ್ಚ್ 24 ರಂದು ಸಾರಿಗೆ ಸೇವೆ ಬಂದ್ ಆಗಲಿದೆ. ಸಮಾನ ಮನಸ್ಕರ ವೇದಿಕೆ ಬಂದ್‌ಗೆ ಕರೆ ನೀಡಿದೆ. ಸರ್ಕಾರ ಸಾರಿಗೆ ನೌಕರರ ಮೂಲ ವೇತನಕ್ಕೆ 15% ವೇತನ ಹೆಚ್ಚಳ ಮಾಡುವ ಆದೇಶ ಹೊರಡಿಸಿದೆ.. ಇದು ಸಾರಿಗೆ ನೌಕರರನ್ನ ಆರ್ಥಿಕವಾಗಿ ಮತ್ತಷ್ಟು ತುಳಿಯುವ ಕೆಲಸವಾಗುತ್ತಿದೆ. ಸರ್ಕಾರಿ ನೌಕರರು ಮುಷ್ಕರ ಮಾಡಿದ 4 ಗಂಟೆಯಲ್ಲಿ ಅವರಿಗೆ ಮಧ್ಯಂತರ 17% ವೇತನ ಹೆಚ್ಚಳ ಮಾಡ್ತೀರ, ಕೆಪಿಟಿಸಿಎಲ್ ಮುಷ್ಕರ ನೋಟೀಸ್ ನೀಡಿದ ತಕ್ಷಣವೇ 20% ವೇತನ ಹೆಚ್ಚಳ ಮಾಡ್ತಿರ, ಸಾರಿಗೆ ನೌಕರರಿಗೆ ಮುಷ್ಕರ ವೇಳೆ ಲಿಖಿತ ಭರವಸೆ ನೀಡಿದ್ದೀರಾ, ಅದು ಸುಳ್ಳ ಚಂದ್ರು ಪ್ರಶ್ನಿಸಿದ್ದಾರೆ. 

ಬೆಲೆ ಏರಿಕೆಯಲ್ಲೂ ನಾವು ಬದುಕಲು ಆಗುತ್ತಿಲ್ಲ, ನಾವು ಕೇಳಿದ್ದು 25% ಆದ್ರೆ ನಮಗೆ ಸರ್ಕಾರ ಕೊಟ್ಟಿದ್ದು 15% ಅಷ್ಟೇ ಹೆಚ್ಚಳವಾಗಿ ನೀಡಿದ್ದೀರಾ?. ಇದು ನಮ್ಮ ನೌಕರರಿಗೆ ಸಮ್ಮತಿಯಿಲ್ಲ. ನಾವು ಜಂಟಿ ಸಮಿತಿಯವರಿಗೆ ಮಾರ್ಚ್ 21 ರಂದು ಮುಷ್ಕರ ಮಾಡಲು ಬೆಂಬಲ ನೀಡಿದ್ವೀ, ಆ ಬೆಂಬಲವನ್ನ ನಾವು ವಾಪಸ್‌ ಪಡೆಯುತ್ತಿದ್ದೇವೆ. ನಾವು ಮೊದಲಿನಂತೆ ಕಾರ್ಮಿಕ ಇಲಾಖೆಗೆ ಏನು ನೋಟೀಸ್ ನೀಡಿದ್ವೀ, ಅದೇ ರೀತಿಯಲ್ಲಿ ಮಾರ್ಚ್ 24 ರಂದು ಮುಷ್ಕರ ಮಾಡುತ್ತೇವೆ ಅಂತ ಸ್ಪಷ್ಟಪಡಿಸಿದ್ದಾರೆ. 

Follow Us:
Download App:
  • android
  • ios