ಬೆಂಗಳೂರು[ಜ.02]: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಂತರ ನಿಗಮ ವರ್ಗಾವಣೆ ಸ್ಥಗಿತಗೊಳಿಸಿರುವುದರಿಂದ ವರ್ಗಾವಣೆ ಬಯಸಿದ್ದ ಸುಮಾರು 10 ಸಾವಿರಕ್ಕೂ ಅಧಿಕ ನೌಕರರು ನಿರಾಶರಾಗಿದ್ದಾರೆ.

ನಾಲ್ಕು ವರ್ಷದ ಹಿಂದೆ ಜಾರಿ ತಂದಿದ್ದ ಅಂತರ್‌ ನಿಗಮ ವರ್ಗಾವಣೆಯನ್ನು ಹಂತ ಹಂತವಾಗಿ ವಿಸ್ತರಿಸಲು ಉದ್ದೇಶಿಸಲಾಗಿತ್ತು. ಆದರೆ ಅದು ಪೂರ್ಣಗೊಳ್ಳುವ ಮುನ್ನವೇ ಸ್ಥಗಿತಗೊಳಿಸಲಾಗಿದೆ. ಇದರಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಕರ್ನಾಟಕ ಭಾಗದ ಸಾವಿರಾರು ನೌಕರರು ತಮ್ಮ ಜಿಲ್ಲೆಗಳ ನಿಗಮಗಳಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ವರ್ಗಾವಣೆ ಪಡೆಯಬೇಕೆಂಬ ಕನಸು ಭಗ್ನವಾಗಿದೆ.

ಕೆಎಸ್ಸಾರ್ಟಿಸಿ ಬಸ್‌ ಬಾಡಿಗೆಗೆ ಲಭ್ಯ

ನಾಲ್ಕೂ ನಿಗಮಗಳಿಂದ ಒಟ್ಟು 18 ಸಾವಿರ ನೌಕರರು ಅಂತರ ನಿಗಮ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ನಾಲ್ಕು ಸಾವಿರ ನೌಕರರು ವರ್ಗಾವಣೆ ಪಡೆಯಲು ಅರ್ಹರಾಗಿಲ್ಲ ಎಂದು ಅರ್ಜಿ ತಿರಸ್ಕರಿಸಲಾಗಿತ್ತು. ಉಳಿದ 14 ಸಾವಿರ ನೌಕರರ ಪೈಕಿ 3,589 ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಉಳಿದ 10 ಸಾವಿರಕ್ಕೂ ಹೆಚ್ಚಿನ ನೌಕರರನ್ನು ಕೋರಿಕೆ ಮೇರೆಗೆ ವರ್ಗಾವಣೆ ಮಾಡಬೇಕಿದೆ.

ಆದರೆ ಅಂತರ ನಿಗಮ ವರ್ಗಾವಣೆ ಬಾಕಿ ಇರುವಾಗಲೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಖಾಲಿಯಿರುವ ಚಾಲಕ ಮತ್ತು ನಿರ್ವಾಹಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ನಿಗಮ ವ್ಯಾಪ್ತಿಯಲ್ಲಿನ ಒಂಬತ್ತು ವಿಭಾಗಗಳಲ್ಲಿ ಖಾಲಿಯಿರುವ 2,555 ಚಾಲಕ ಮತ್ತು 259 ಚಾಲಕ ಕಂ ನಿರ್ವಾಹಕ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಒಟ್ಟು 2,814 ಹುದ್ದೆಗಳಿಗೆ ಹೊಸ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡರೆ, ಅಂತರ ನಿಗಮ ವರ್ಗಾವಣೆಗೆ ಕಾಯುತ್ತಿರುವವರಿಗೆ ಹಾಗೂ ಆ ನಿಗಮ ವ್ಯಾಪ್ತಿಯಲ್ಲಿ ಕೆಲಸ ಮಾಡಲಿಚ್ಛಿಸುತ್ತಿರುವ ಐದು ಸಾವಿರಕ್ಕೂ ಹೆಚ್ಚಿನ ಮಂದಿಗೆ ಅನ್ಯಾಯವಾಗುತ್ತದೆ ಎಂದು ನೌಕರರು ಅಲವತ್ತುಕೊಂಡಿದ್ದಾರೆ.