Asianet Suvarna News Asianet Suvarna News

ಕೆಎಸ್ಸಾರ್ಟಿಸಿಯಿಂದ ಸಂಚಾರಿ ಐಸಿಯು ಬಸ್‌

  •  ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಕೆಎಸ್‌ಆರ್‌ಟಿಸಿಯಿಂದ ‘ಸಾರಿಗೆ ಸುರಕ್ಷಾ’
  • ಐಸಿಯು ಸೌಲಭ್ಯವುಳ್ಳ ‘ಸಂಚಾರಿ ಐಸಿಯು ಬಸ್‌’  ಸೇವೆಗೆ ಸಜ್ಜು
  • ಬೆಂಗಳೂರು ಕೇಂದ್ರ ವಿಭಾಗದ ಕೇಂದ್ರೀಯ ಕಾರ್ಯಾಗಾರದಲ್ಲಿ ಸುಮಾರು ನಾಲ್ಕು ಲಕ್ಷ ರು. ವೆಚ್ಚದಲ್ಲಿ ಸಿದ್ಧ
KSRTC  Starts Sarige suraksha Moving ICU For Covid Patients snr
Author
Bengaluru, First Published May 18, 2021, 7:37 AM IST

ಬೆಂಗಳೂರು (ಮೇ.18):   ತುರ್ತು ಸಂದರ್ಭಗಳಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಕೆಎಸ್‌ಆರ್‌ಟಿಸಿಯು ‘ಸಾರಿಗೆ ಸುರಕ್ಷಾ’ ಹೆಸರಿನ ಆಕ್ಸಿಜನ್‌, ಐಸಿಯು ಸೌಲಭ್ಯವುಳ್ಳ ‘ಸಂಚಾರಿ ಐಸಿಯು ಬಸ್‌’ವೊಂದನ್ನು ಸೇವೆಗೆ ಸಜ್ಜುಗೊಳಿಸಿದೆ.

ನಿಗಮದ ಬೆಂಗಳೂರು ಕೇಂದ್ರ ವಿಭಾಗದ ಕೇಂದ್ರೀಯ ಕಾರ್ಯಾಗಾರದಲ್ಲಿ ಸುಮಾರು ನಾಲ್ಕು ಲಕ್ಷ ರು. ವೆಚ್ಚದಲ್ಲಿ ಈ ಐಸಿಯು ಸೌಲಭ್ಯದ ಬಸ್‌ ಸಿದ್ಧಪಡಿಸಲಾಗಿದೆ. ಕಾರ್ಯಾಗಾರದ ತಾಂತ್ರಿಕ ಸಿಬ್ಬಂದಿ ತಂಡ ಬಸ್‌ ಸಜ್ಜಗೊಳಿಸಿದೆ. ಈ ಬಸ್ಸಿನಲ್ಲಿ ಐದು ಬೆಡ್‌ ಅಳವಡಿಸಿದ್ದು, ಪ್ರತಿ ಬೆಡ್‌ಗೂ ಆಕ್ಸಿಜನ್‌ ಸೌಲಭ್ಯ ಕಲ್ಪಿಸಲಾಗಿದೆ. ಅಂತೆಯೇ ಸೋಂಕಿತರ ರಕ್ತದೊತ್ತಡ, ಆಕ್ಸಿಜನ್‌ ಮಟ್ಟ, ಇಸಿಜಿ, ತಾಪಮಾನ ಮೇಲ್ವಿಚಾರಣೆ ಮಾಡಲು ಮಾನಿಟರ್‌ಗಳನ್ನು ಅಳವಡಿಸಲಾಗಿದೆ. ದಿನದ 24 ತಾಸು ಸೋಂಕಿತರಿಗೆ ವೆಂಟಿಲೇಟರ್‌ ಹಾಗೂ ಆಕ್ಸಿಜನ್‌ ಪೂರೈಸಲು ಅನುಕೂಲವಾಗುವಂತೆ ಜನರೇಟರ್‌ ಸಹ ವ್ಯವಸ್ಥೆ ಮಾಡಲಾಗಿದೆ.

ಸಿದ್ದವಾಯ್ತು ಆಕ್ಸಿಜನ್ ಬಸ್, ಕೊರೊನಾ ಸಂಕಷ್ಟದ ನಡುವೆ ಶುಭ ಸಮಾಚಾರಗಳಿವು

ಬಸ್‌ನಲ್ಲಿ ಎರಡು ಆಕ್ಸಿಜನ್‌ ಜಂಬೋ ಸಿಲಿಂಡರ್‌ ಇರಿಸಲಾಗಿದೆ. ಐದು ಮಂದಿ ಏಕಕಾಲಕ್ಕೆ ಆಸ್ಪತ್ರೆ ಮಾದರಿಯಲ್ಲಿ ಬೆಡ್‌ನಲ್ಲಿ ಮಲಗಿ ಚಿಕಿತ್ಸೆ ಪಡೆಯಬಹುದು. ಶೀಘ್ರದಲ್ಲೇ ಈ ಸಂಚಾರ ಐಸಿಯು ಬಸ್‌ ಸೇವೆಗೆ ಚಾಲನೆ ನೀಡಲಾಗುವುದು. ನಗರದ ಯಾವುದಾದರೂ ಒಂದು ಸರ್ಕಾರಿ ಆಸ್ಪತ್ರೆ ಎದುರು ಈ ಸಂಚಾರಿ ಐಸಿಯು ಬಸ್‌ ನಿಲುಗಡೆ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಟಿ.ಎಸ್‌.ಲತಾ ಹೇಳಿದರು.

ಈ ಸಂಚಾರಿ ಐಸಿಯು ಬಸ್‌ ಸಿದ್ಧಪಡಿಸಲು ಸುಮಾರು 4 ಲಕ್ಷ ರು. ವೆಚ್ಚವಾಗಿದ್ದು, ನಿಗಮದಿಂದಲೇ ಭರಿಸಲಾಗಿದೆ. ಪ್ರಾಯೋಜಕರು ಸಿಕ್ಕರೆ ಇಂತಹ ಸಂಚಾರಿ ಐಸಿಯು ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ಅಂತೆಯೇ ಈಗಾಗಲೇ ಕೇಂದ್ರೀಯ ಕಾರ್ಯಾಗಾರದಲ್ಲಿ ಸಾರಿಗೆ ಸಂಜೀವಿನಿ ಹೆಸರಿನಲ್ಲಿ ಎರಡು ಆಕ್ಸಿಜನ್‌ ಬಸ್‌ ಸಿದ್ಧಪಡಿಸಿ, ಆನೇಕಲ್‌ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios