*  ಮುಂದಿನ ತಿಂಗಳಲ್ಲಿರುವ ಸಾಲು ರಜೆಗಳು*  ಪ್ರಯಾಣಿಕರ ದಟ್ಟಣೆಯಾಗುವ ಸಾಧ್ಯತೆ*  ಸಾರ್ವಜನಿಕರ ಪ್ರಯಾಣಕ್ಕೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಸೂಚನೆ 

ಬೆಂಗಳೂರು(ಸೆ.19): ಅಕ್ಟೋಬರ್‌ನಲ್ಲಿ ದಸರಾ ಸೇರಿದಂತೆ ಸಾಲು ರಜೆಗಳು ಇರುವುದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಆ ಅವಧಿಯಲ್ಲಿ ಹೆಚ್ಚುವರಿ ಬಸ್‌ ಕಾರ್ಯಾಚರಣೆಗೆ ಈಗಿನಿಂದಲೇ ಸಿದ್ಧತೆ ನಡೆಸುವಂತೆ ಕೆಎಸ್‌ಆರ್‌ಟಿಸಿ ಮುಖ್ಯ ತಾಂತ್ರಿಕ ಅಭಿಯಂತರರು ನಿಗಮದ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದ್ದಾರೆ.

ಮುಂದಿನ ತಿಂಗಳಲ್ಲಿ ದಸರಾ, ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ, ಮಹಾನವಮಿ, ಆಯುಧಪೂಜೆ, ಈದ್‌ ಮಿಲಾದ್‌, ವಾಲ್ಮೀಕಿ ಜಯಂತಿ ಇರುವುದರಿಂದ ಸಾಲು ರಜೆಗಳು ಎದುರಾಗಲಿವೆ. ಹೀಗಾಗಿ ಪ್ರಯಾಣಿಕರ ದಟ್ಟಣೆಯಾಗುವ ಸಾಧ್ಯತೆಯಿರುವುದರಿಂದ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಬೇಕಾಗಬಹುದು. ಹೀಗಾಗಿ ಬಸ್‌ಗಳ ಲಭ್ಯತೆಗೆ ಅನುಗುಣವಾಗಿ ಕಾರ್ಯಾಚರಣೆಗೆ ಬಸ್‌ಗಳನ್ನು ಸಜ್ಜುಗೊಳಿಸಬೇಕು. ವಿಭಾಗ ಮಟ್ಟದಲ್ಲಿ ಒಂದು ತಾಂತ್ರಿಕ ತಂಡ ರಚಿಸಿ, ಎಲ್ಲ ಬಸ್‌ಗಳ ಕವಚ, ಆಸನಗಳು, ಬ್ಯಾಟರಿ, ಹೆಡ್‌ಲೈಟ್‌, ಇಂಡಿಕೇಟರ್‌, ವೈಪರ್‌ ಮೋಟಾರ್‌ ಸೇರಿದಂತೆ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಬಸ್‌ಗಳನ್ನು ಕಾರ್ಯಾಚರಣೆಗೆ ಸಿದ್ಧವಾಗಿ ಇರಿಸಿಕೊಳ್ಳಬೇಕು ಎಂದು ತಿಳಿಸಿದೆ.

ಸಾರಿಗೆ ನೌಕರರಿಗೆ ಸಂತಸದ ಸುದ್ದಿ ನೀಡಿದ ಸಚಿವ ಶ್ರೀರಾಮುಲು

ವಿಭಾಗೀಯ ಕಾರ್ಯಾಗಾರಗಳಲ್ಲಿ ಹೆಚ್ಚಿನ ಸಂಖ್ಯೆಯ ಬಸ್ಸುಗಳಿದ್ದಲ್ಲಿ ಕೇಂದ್ರ ಕಚೇರಿಯ ಅನುಮೋದನೆ ಪಡೆದು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ದುರಸ್ತಿ ಮಾಡಿಸಬೇಕು. ಘಟಕ ಮತ್ತು ವಿಭಾಗೀಯ ಕಾರ್ಯಾಗಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ತಾಂತ್ರಿಕ ಮೇಲ್ವಿಚಾರಕರು ಹಾಗೂ ತಾಂತ್ರಿಕ ಸಿಬ್ಬಂದಿ ತಮ್ಮ ವಾರದ ರಜೆಯನ್ನು ರದ್ದುಪಡಿಸಿ ಸದರಿ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಸೆಪ್ಟೆಂಬರ್‌ ಮಾಸಾಂತ್ಯದ ವೇಳೆಗೆ ಎಲ್ಲ ನಿರ್ವಹಣೆ ಮಾಡಿ ಬಸ್ಸುಗಳ ಸುಗಮ ಕಾರ್ಯಾಚರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಮೂಲಕ ಸಾರ್ವಜನಿಕರ ಪ್ರಯಾಣಕ್ಕೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.