ಬೆಂಗಳೂರು(ಮೇ.23): ಕಳೆದ ಮೂರು ದಿನಗಳಿಂದ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಸಂಖ್ಯೆಯು ನಾಲ್ಕನೇ ದಿನವಾದ ಶುಕ್ರವಾರ ದಿಢೀರ್‌ ಕುಸಿತವಾಗಿದೆ.

ನಿಗಮದ ವ್ಯಾಪ್ತಿಯಲ್ಲಿ ಶುಕ್ರವಾರ ಮೂರು ಸಾವಿರ ಬಸ್‌ ಕಾರ್ಯಾಚರಣೆ ಮಾಡಲು ಯೋಜಿಸಿದ್ದ ನಿಗಮವು ಪ್ರಯಾಣಿಕರ ಕೊರತೆಯಿಂದ 2,660 ಬಸ್‌ಗಳನ್ನು ಮಾತ್ರ ಕಾರ್ಯಾಚರಣೆ ಮಾಡಿದ್ದು, ಒಟ್ಟು 74,414 ಮಂದಿ ರಾಜ್ಯದ ವಿವಿಧೆಡೆಗೆ ಪ್ರಯಾಣ ಮಾಡಿದ್ದಾರೆ.

ಲಾಕ್‌ಡೌನ್‌: ತುತ್ತು ಅನ್ನಕ್ಕೂ KSRTC ಸಿಬ್ಬಂದಿ ಪರದಾಟ

ಗುರುವಾರ 2,732 ಬಸ್‌ ಕಾರ್ಯಾಚರಣೆ ಮಾಡಿದ್ದು, 85,373 ಮಂದಿ ಪ್ರಯಾಣಿಸಿದ್ದರು. ಇದಕ್ಕೆ ಹೋಲಿಕೆ ಮಾಡಿದರೆ ಶುಕ್ರವಾರ 72 ಬಸ್‌ ಕಾರ್ಯಾಚರಣೆ ಕಡಿಮೆಯಾಗಿದ್ದು, ಪ್ರಯಾಣಿಕರ ಸಂಖ್ಯೆ 10,959 ಕುಸಿತವಾಗಿತ್ತು.
ನಗರದಿಂದ ಶುಕ್ರವಾರ 766 ಬಸ್‌ ಕಾರ್ಯಾಚರಣೆ ಮಾಡಿದ್ದು, 11,603 ಮಂದಿ ಪ್ರಯಾಣಿಸಿದರು.

ಬಸ್‌ ನಿಲ್ದಾಣದ ಕೌಂಟರ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸಲು ಅವಕಾಶ ಕಲ್ಪಿಸಿದೆ. ಶನಿವಾರ ಸಂಚರಿಸಲು 6,189 ಮಂದಿ ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದಾರೆ.