ಮೋಹನ ಹಂಡ್ರಂಗಿ

ಬೆಂಗಳೂರು[ಫೆ.10]: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮಹಿಳಾ ಪ್ರಯಾಣಿಕರು ಹಾಗೂ ನಿರ್ವಾಹಕಿಯರ ಆರೋಗ್ಯ ಮತ್ತು ಶುಚಿತ್ವದ ದೃಷ್ಟಿಯಿಂದ ನಿಗಮದ 9 ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ‘ಸ್ಯಾನಿಟರಿ ನ್ಯಾಪ್ಕಿನ್‌ ವೆಂಡಿಂಗ್‌ ಮಷಿನ್‌’ ಹಾಗೂ ‘ಸ್ಯಾನಿಟರಿ ನ್ಯಾಪ್ಕಿನ್‌ ಡಿಸ್ಪೆನ್ಸರಿ ಮಷಿನ್‌’ ಅಳಡಿಸಲು ಮುಂದಾಗಿದೆ.

ಮೂರು ತಿಂಗಳ ಹಿಂದೆಯಷ್ಟೇ ಪ್ರಾಯೋಗಿಕವಾಗಿ ನಗರದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಅಳವಡಿಸಿದ್ದ ಎರಡು ಸ್ಯಾನಿಟರಿ ನ್ಯಾಪ್ಕಿನ್‌ ಮಷಿನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಉತ್ತೇಜಿತಗೊಂಡಿರುವ ಕೆಎಸ್‌ಆರ್‌ಟಿಸಿ, ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ನಿಗಮ ವ್ಯಾಪ್ತಿಯ 9 ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಈ ಮಷಿನ್‌ಗಳನ್ನು ಅಳವಡಿಸಲು ನಿರ್ಧರಿಸಿದೆ.

ನಿಲ್ದಾಣದಲ್ಲಿ ಅಳವಡಿಕೆ ಯಾವಾಗ?

ಮೈಸೂರು ರಸ್ತೆ ಸ್ಯಾಟಲೈಟ್‌ ಬಸ್‌ ನಿಲ್ದಾಣ, ಮೈಸೂರು ಬಸ್‌ ನಿಲ್ದಾಣ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಮಂಗಳೂರು, ಹಾಸನ, ತುಮಕೂರು ಹಾಗೂ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣಗಳನ್ನು ಈ ಸ್ಯಾನಿಟರಿ ನ್ಯಾಪ್ಕಿನ್‌ ವೆಂಡಿಂಗ್‌ ಮತ್ತು ಡಿಸ್ಪೆನ್ಸರಿ ಮಷಿನ್‌ ಅಳವಡಿಕೆಗೆ ಆಯ್ಕೆ ಮಾಡಲಾಗಿದೆ. ಇದರ ಜತೆಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ ಎರಡರಲ್ಲೂ ಈ ಮಷಿನ್‌ ಅಳವಡಿಸಲು ತೀರ್ಮಾನಿಸಿದೆ.

ಕೆಎಸ್‌ಆರ್‌ಟಿಸಿಯ 17 ವಿಭಾಗಗಳ ವ್ಯಾಪ್ತಿಯಲ್ಲಿ ಪ್ರತಿ ದಿನ 30 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ಈ ಪೈಕಿ 8 ಲಕ್ಷದಷ್ಟುಮಹಿಳಾ ಪ್ರಯಾಣಿಕರಿರುತ್ತಾರೆ. ಅಂತೆಯೇ ನಿಗಮದ ಬಸ್‌ಗಳಲ್ಲಿ ಸುಮಾರು ಒಂದು ಸಾವಿರ ನಿರ್ವಾಹಕಿಯರು ಕಾರ್ಯನಿರ್ವಹಿಸುತ್ತಾರೆ. ಈ ಎಲ್ಲರ ಆರೋಗ್ಯ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಿಗಮ ಈ ಕ್ರಮಕ್ಕೆ ಮುಂದಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಎಲ್ಲ ಮಹಿಳಾ ಪ್ರಯಾಣಿಕರು ಬ್ಯಾಗ್‌ಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ ಇರಿಸಿಕೊಂಡಿರುವುದಿಲ್ಲ. ಹೀಗಾಗಿ ಅಗತ್ಯ ಬಿದ್ದಾಗ ಮೆಡಿಕಲ್‌ ಶಾಪ್‌ ಹುಡುಕಿಕೊಂಡು ಹೋಗಬೇಕಾಗುತ್ತದೆ. ಆದ್ದರಿಂದ ಬಸ್‌ ನಿಲ್ದಾಣಗಳಲ್ಲೇ ಸುಲಭವಾಗಿ ಸ್ಯಾನಿಟರಿ ನ್ಯಾಪ್ಕಿನ್‌ ಒದಗಿಸಲು ಹಾಗೂ ಬಳಸಿದ ನ್ಯಾಪ್ಕಿನ್‌ ಬರ್ನ್‌ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಒಂದು ನ್ಯಾಪ್ಕಿನ್‌ಗೆ 5 ರು.:

ಬಸ್‌ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ಐದು ರು. ಪಾವತಿಸಿ ಒಂದು ಸ್ಯಾನಿಟರಿ ನ್ಯಾಪ್ಕಿನ್‌ ಪಡೆಯಬಹುದು. ಈ ಮಷಿನ್‌ಗಳ ಬಳಿ ಪ್ರಯಾಣಿಕರ ಸಹಾಯಕ್ಕಾಗಿ ಹೌಸ್‌ ಕಿಪಿಂಗ್‌ ಸಿಬ್ಬಂದಿ ಇರುತ್ತಾರೆ. ಈ ಸಿಬ್ಬಂದಿ ಬಳಕೆ ಮಾಡಿದ ಸ್ಯಾನಿಟರಿ ನ್ಯಾಪ್ಕಿನ್‌ ಬರ್ನ್‌ ಮಾಡಲೂ ನೆರವಾಗಲಿದ್ದಾರೆ. ಈ ಎರಡು ಮಷಿನ್‌ಗಳಿಗೆ 32 ಸಾವಿರ ರು. ವೆಚ್ಚವಾಗಲಿದೆ. ನಿಗಮವೇ ಮಷಿನ್‌ಗಳ ಖರೀದಿಗೆ ಹಣ ವಿನಿಯೋಗಿಸುತ್ತಿದೆ.