ಬೆಂಗಳೂರು (ಮಾ.29) :  ಏಪ್ರಿಲ್‌ 7ರಿಂದ ಸಾರಿಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಕೂಟದ ಮುಖಂಡರು ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಕೈಗೊಂಡು ಸಾರಿಗೆ ನೌಕರರನ್ನು ಮುಷ್ಕರಕ್ಕೆ ಅಣಿಗೊಳಿಸುವ ಕಾರ್ಯ ಚುರುಕುಗೊಳಿಸಿದ್ದಾರೆ.

ಈ ಮೂರು ತಂಡಗಳು ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಕಲಬುರಗಿ, ಬೀದರ್‌ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಎಲ್ಲ ಡಿಪೋಗಳಿಗೆ ಭೇಟಿ ನೀಡಿ, ಮುಷ್ಕರಕ್ಕೆ ನೌಕರರ ಬೆಂಬಲ ಕೋರುತ್ತಿದ್ದಾರೆ.

KSRTC ಬಸ್‌ಗಳ ಸಂಚಾರ ತಾತ್ಕಾಲಿಕ ರದ್ದು

ಈ ನಡುವೆ ರಾಜ್ಯ ಸರ್ಕಾರ ಸಾರಿಗೆ ನೌಕರರ ಮುಷ್ಕರ ಮಾಡಿದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ವಾಹನಗಳಿಗೆ ತಾತ್ಕಾಲಿಕ ಪರವಾನಗಿ ನೀಡಿ ಸಾರಿಗೆ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ. ಈ ಸಂಬಂಧ ಆಸಕ್ತ ಖಾಸಗಿ ವಾಹನಗಳು ಸಾರಿಗೆ ಪ್ರಾಧಿಕಾರಿಗಳಿಂದ ತಾತ್ಕಾಲಿಕ ರಹದಾರಿ ಪಡೆಯಲು ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಸರ್ಕಾರ ಈ ನಡೆಯ ಬಳಿಕವೂ ಸಾರಿಗೆ ನೌಕರರ ಕೂಟ ಮುಷ್ಕರ ಯಶಸ್ವಿಗೊಳಿಸುವ ಸಂಬಂಧ ನೌಕರರ ಬೆಂಬಲ ಪಡೆಯಲು ಒತ್ತು ನೀಡಿದೆ.

ಕಳೆದ ಡಿಸೆಂಬರ್‌ನಲ್ಲಿ ಹತ್ತು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸಿದ ಮುಷ್ಕರದ ವೇಳೆ ರಾಜ್ಯ ಸರ್ಕಾರ ನಡೆಸಿದ ಸಂಧಾನ ಸಭೆಯಲ್ಲಿ ಸರ್ಕಾರಿ ನೌಕರರಾಗಿ ಪರಿಗಣಿಸುವ ಬೇಡಿಕೆ ಹೊರತುಪಡಿಸಿ, ಉಳಿದ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಬೇಡಿಕೆ ಈಡೇರಿಸಲು ಆರು ತಿಂಗಳ ಗಡುವು ನೀಡಲಾಗಿತ್ತು.

ಈ ನಡುವೆ ರಾಜ್ಯ ಸರ್ಕಾರ ಒಂಬತ್ತು ಬೇಡಿಕೆ ಪೈಕಿ ಎಂಟು ಬೇಡಿಕೆ ಈಡೇರಿಸಲಾಗಿದೆ ಎಂದು ಹೇಳುತ್ತಿದೆ. ಆದರೆ, ಸಾರಿಗೆ ನೌಕರರ ಕೂಟ ಸರ್ಕಾರ ಏಕಪಕ್ಷೀಯವಾಗಿ ಕೈಗೊಂಡಿರುವ ನಿರ್ಧಾರಗಳಿಂದ ನೌಕರರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಹೀಗಾಗಿ ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ಒಪ್ಪಿಗೆ ಇಲ್ಲ ಎಂದು ಹೇಳಿದೆ.

ಬೇಡಿಕೆ ಈಡೇರಿಕೆಗೆ ನೀಡಿದ್ದ ಆರು ತಿಂಗಳ ಗಡುವು ಮಾ.15ರಂದು ಅಂತ್ಯಗೊಂಡ ನಂತರ ನೌಕರರ ಕೂಟ ಕಾರ್ಮಿಕ ಕಾಯ್ದೆ ನಿಯಮಾನುಸಾರ ಮಾ.16ರಂದು ಸರ್ಕಾರಕ್ಕೆ ನೋಟಿಸ್‌ ನೀಡಿ, ಏ.7ರಿಂದ ಮುಷ್ಕರ ನಡೆಸುವುದಾಗಿ ಹೇಳಿದೆ.