ಬೆಂಗಳೂರು (ಡಿ.13): ಸಾರಿಗೆ ನೌಕರರ ಮುಷ್ಕರದ ಸಂದರ್ಭದಲ್ಲಿ ಪ್ರಯಾಣಿಕರ ಅಸಹಾಯಕತೆ ಮತ್ತು ಅನಿವಾರ್ಯತೆಯನ್ನು ದುರುಪಯೋಗಿಸಿಕೊಂಡು ಖಾಸಗಿ ಬಸ್‌, ಟ್ಯಾಕ್ಸಿ, ಆಟೋ ಚಾಲಕರು, ಮಾಲೀಕರು ಪ್ರಯಾಣಿಕರಿಂದ ಮನಸ್ಸೋ ಇಚ್ಛೆ ಪ್ರಯಾಣ ದರ ವಸೂಲಿ ಮಾಡಿರುವ ಘಟನೆಗಳು ಶನಿವಾರವೂ ರಾಜ್ಯಾದ್ಯಂತ ನಡೆದಿವೆ.

ಮಂಡ್ಯದಿಂದ ಬೆಂಗಳೂರಿಗೆ ಅನೇಕ ಖಾಸಗಿ ಬಸ್‌ಗಳು ಕಾರ್ಯಾಚರಿಸಿದ್ದು, ಮಾಮೂಲಿ 95 ರು. ಇದ್ದ ಟಿಕೆಟ್‌ಗೆ 140 ರು. ನಿಗದಿಪಡಿಸಿದ್ದರು. ಇನ್ನು ಮೈಸೂರಿನಿಂದ ಹುಣಸೂರಿಗೆ 50 ರು.ಗೆ ಬದಲಾಗೆ 80 ರು. ಪಡೆದುಕೊಳ್ಳುತ್ತಿದ್ದರು. ಬೆಂಗಳೂರಿನಲ್ಲಿ ಆಟೋ, ಟ್ಯಾಕ್ಸಿ ಚಾಲಕರು ನಿಗದಿಪಡಿಸಿದ್ದೇ ದರ ಎಂಬಂತಾಗಿತ್ತು ಪರಿಸ್ಥಿತಿ. ಇನ್ನು ಮಹಾನಗರದಿಂದ ಮೈಸೂರಿಗೆ ಕಾರ್ಯಾಚರಿಸುತ್ತಿದ್ದ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ 140 ರು. ಟಿಕೆಟ್‌ ದರಕ್ಕೆ ಬದಲಾಗಿ 250 ರು. ವಸೂಲಿ ಮಾಡಿರುವ ಬಗ್ಗೆಯೂ ಆರೋಪಗಳು ಕೇಳಿಬಂದಿವೆ.

ಮುಷ್ಕರ ನಿರತರಿಗೆ ಮಾತುಕತೆಗೆ ಮುಕ್ತ ಅಹ್ವಾನ ನೀಡಿದ ಸಾರಿಗೆ ಸಚಿವರು ..

ವಿಜಯಪುರ ಜಿಲ್ಲೆಯಲ್ಲಿ ಖಾಸಗಿ ವಾಹನಗಳಾದ ಕ್ರೂಷರ್‌, ಆಟೋ, ಖಾಸಗಿ ಬಸ್‌ಗಳ ಸಂಚಾರವಿದ್ದು, 30 ರಿಂದ  40 ರು. ದರದ ಬದಲು . 100ರಿಂದ 150 ರು. ದರ ಸುಲಿಗೆ ಮಾಡಿರುವುದು ಕಂಡುಬಂತು. ಇದೇ ರೀತಿಯ ಪರಿಸ್ಥಿತಿ ಹಾವೇರಿ, ಕೊಪ್ಪಳ, ಧಾರವಾಡ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಬೀದರ್‌, ಗದಗ, ಹಾಸನ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರುಗಳಲ್ಲೂ ಇತ್ತು ಎನ್ನಲಾಗಿದೆ.