ವಜಾಗೊಂಡ ಸಾರಿಗೆ ನೌಕರರ ಮರುನೇಮಕ: ಸಚಿವ ಶ್ರೀರಾಮುಲು ಹೇಳಿದ್ದಿಷ್ಟು

*   ಯಾವುದೇ ವಿಚಾರ ಇದ್ದರೂ ನೌಕರರು ರಸ್ತೆಗೆ ಇಳಿದು ಹೋರಾಟ ಮಾಡಬಾರದು
*   ಸಾರಿಗೆ ನೌಕರರ ಬಾಕಿ ವೇತನ ಸಂಬಂಧ ಸಿಎಂ ಜೊತೆ ಚರ್ಚಿಸಿದ್ದೇನೆ
*   ವೇತನಕ್ಕಾಗಿ 2500 ಕೋಟಿ ರು. ಅನುದಾನ ನೀಡಿದ ಸರ್ಕಾರ 

Government Committed to Reappoint of Dismissed KSRTC Employees Says Sriramulu grg

ಬೆಂಗಳೂರು(ಅ.01): ಸಾರಿಗೆ(KSRTC) ಮುಷ್ಕರದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾ, ಅಮಾನತು, ವರ್ಗಾವಣೆಯಾದ ಸಾರಿಗೆ ನೌಕರರ ಹಿತ ಕಾಪಾಡಲು ಸರ್ಕಾರ ಬದ್ಧವಿದೆ. ಹೀಗಾಗಿ ಸೇವೆಗೆ ಪುನರ್‌ ನೇಮಕ ವಿಚಾರದಲ್ಲಿ ನೌಕರರು ಯಾವುದೇ ಭಯ, ಆತಂಕ ಪಡುವ ಅಗತ್ಯವಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramul) ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಮುಷ್ಕರದಲ್ಲಿ(Strike) ಭಾಗಿಯಾದ ಆರೋಪದಡಿ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸುಮಾರು ಆರು ಸಾವಿರ ನೌಕರರಿಗೆ ತೊಂದರೆಯಾಗಿದೆ. ಬಿಎಂಟಿಸಿವೊಂದರಲ್ಲೇ ಸುಮಾರು ನಾಲ್ಕು ಸಾವಿರ ಮಂದಿ ಇದ್ದಾರೆ. ಇದರಲ್ಲಿ ಎಫ್‌ಐಆರ್‌(FIR) ದಾಖಲಾದ ನೌಕರರು ಇದ್ದಾರೆ. ಎಲ್ಲರನ್ನೂ ಸೇವೆಗೆ ಪುನರ್‌ ನೇಮಿಸಿಕೊಳ್ಳುವ ಸಂಬಂಧ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದರು.

1998ರ ಮಾದರಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಈ ಪ್ರಕರಣಗಳನ್ನು ಸಾರಿಗೆ ನಿಗಮಗಳ ಆಡಳಿತ ಮಂಡಳಿಯ ಸಭೆ ಎದುರು ಇರಿಸಿ ಬಗೆಹರಿಸಲು ಚಿಂತಿಸಲಾಗಿದೆ. ಅಂತೆಯೆ ಕಾರ್ಮಿಕ ನ್ಯಾಯಾಲಯಕ್ಕೆ ಪ್ರಕರಣ ತಂದು ರಾಜಿಯಾಗಿ ಪುನರ್‌ ನೇಮಕ ಮಾಡಿಕೊಳ್ಳುವ ಬಗ್ಗೆಯೂ ಚರ್ಚಿಸಲಾಗಿದೆ. ಹೀಗಾಗಿ ಸೇವೆಯಿಂದ ಹೊರಗೆ ಇರುವ ನೌಕರರು ಆತಂಕ, ಭಯ ಪಡುವ ಅಗತ್ಯವಿಲ್ಲ. ತಾವೇ ಮುಂದಾಳತ್ವ ವಹಿಸಿಕೊಂಡು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ರಾಜ್ಯಕ್ಕೆ ಬಂತು ಮೊದಲ ಎಲೆಕ್ಟ್ರಿಕ್‌ ಬಸ್‌: ಒಮ್ಮೆ ಚಾರ್ಜ್‌ ಮಾಡಿದ್ರೆ ಎಷ್ಟು ಕಿಮಿ ಓಡುತ್ತೆ?

ಸಾರಿಗೆ ಮುಷ್ಕರದ ವೇಳೆ ನೌಕರರಿಗೆ ಕುಮ್ಮಕ್ಕು ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನಾನು ಚರ್ಚೆ ಮಾಡಲ್ಲ. ಯಾರದೋ ಮಾತಿನಿಂದ ಮುಷ್ಕರಕ್ಕೆ ಇಳಿದ ನೌಕರರು ವಜಾ, ವರ್ಗಾವಣೆ, ಅಮಾನತು ಶಿಕ್ಷೆಗೆ ಗುರಿಯಾಗಿ ಈಗ ಪಶ್ಚಾತಾಪ ಪಡುತ್ತಿದ್ದಾರೆ. ಇದನ್ನು ಸರಿಪಡಿಸುವ ಕಡೆಗೆ ಗಮನ ಹರಿಸಿದ್ದೇನೆ. ಒಂದು ವೇಳೆ ಮುಷ್ಕರಕ್ಕೆ ಪ್ರಚೋದನೆ ನೀಡಿದ್ದರೆ, ಯಾರೇ ಆಗಿದ್ದರೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಮುಂದಿನ ದಿನಗಳಲ್ಲಿ ಯಾವುದೇ ವಿಚಾರ ಇದ್ದರೂ ನೌಕರರು ರಸ್ತೆಗೆ ಇಳಿದು ಹೋರಾಟ ಮಾಡಬಾರದು. ಏಕೆಂದರೆ, ಕೆಲವರು ಈ ಸಂದರ್ಭವನ್ನು ಬಳಸಿಕೊಳ್ಳುತ್ತಾರೆ. ಹೀಗಾಗಿ ನೌಕರರ ಯಾವುದೇ ಸಮಸ್ಯೆ ಇದ್ದರೂ ಮಾತುಕತೆ ಮೂಲಕ ಬಗೆಹರಿಸುವುದಾಗಿ ಸಚಿವ ಶ್ರೀರಾಮುಲು ತಿಳಿಸಿದರು.

ಸಾರಿಗೆ ನೌಕರರ ಬಾಕಿ ವೇತನ(Salary) ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಕಳೆದ ಎರಡು ವರ್ಷಗಳಿಂದ ನೌಕರರ ವೇತನಕ್ಕಾಗಿ ಸರ್ಕಾರ 2500 ಕೋಟಿ ರು. ಅನುದಾನ ನೀಡಿದೆ. ಬಾಕಿ ವೇತನ ಶೀಘ್ರದಲ್ಲೇ ನೀಡಲು ವ್ಯವಸ್ಥೆ ಮಾಡುವುದಾಗಿ ಹೇಳಿದರು.
 

Latest Videos
Follow Us:
Download App:
  • android
  • ios