Asianet Suvarna News Asianet Suvarna News

KSRTC Electric Bus: ತಿಂಗಳಲ್ಲಿ 7 ಜಿಲ್ಲೆಗೆ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್‌ ಬಸ್‌

ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ಗಳಿಗೆ ಪ್ರತಿ ಕಿ.ಮೀಗೆ 70 ರು. ಆಗುತ್ತಿದೆ. ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣಾ ವೆಚ್ಚ ಪ್ರತಿ ಕಿ.ಮೀಗೆ 55 ರು. ಆಗಿದೆ. ಎಲೆಕ್ಟ್ರಿಕ್‌ ಬಸ್‌ಗಳ ಮೂಲಕ 15 ರು. ಉಳಿತಾಯವಾಗಲಿದೆ. ಬಸ್‌ ಪೂರೈಸಿದ ಕಂಪನಿಯೇ ಚಾಲಕರನ್ನು ನೇಮಿಸಿ, ಬಸ್‌ಗಳನ್ನು ನಿರ್ವಹಿಸಲಿದೆ.

KSRTC Electric Bus to 7 Districts in a Month in Karnataka grg
Author
First Published Jan 14, 2023, 11:12 AM IST

ಬೆಂಗಳೂರು(ಜ.14): ಮುಂದಿನ ಒಂದು ತಿಂಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ 7 ಜಿಲ್ಲೆಗಳಿಗೆ ಕೆಎಸ್ಸಾರ್ಟಿಸಿ ವಿದ್ಯುತ್‌ ಚಾಲಿತ ಬಸ್‌ಗಳು (ಎಲೆಕ್ಟ್ರಿಕ್‌ ಬಸ್‌ಗಳು) ಕಾರ್ಯಾಚರಣೆ ನಡೆಸಲಿವೆ. ಶುಕ್ರವಾರ ಬೆಂಗಳೂರಿನಿಂದ ರಾಮನಗರಕ್ಕೆ ಪ್ರಾಯೋಜಿಕವಾಗಿ ಕೆಎಸ್‌ಆರ್‌ಟಿಸಿ ವಿದ್ಯುತ್‌ ಬಸ್‌ ಸಂಚಾರಕ್ಕೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ಚಾಲನೆ ನೀಡಿ ಮಾತನಾಡಿದರು. ಮಕರ ಸಂಕ್ರಾಂತಿಯ ನಂತರ ಜನವರಿ 16ರಂದು ಕೆಎಸ್‌ಆರ್‌ಟಿಸಿ ವಿದ್ಯುತ್‌ ಬಸ್‌ ವಾಣಿಜ್ಯ ಸಂಚಾರ ಆರಂಭಿಸಲಿದ್ದು ಬೆಂಗಳೂರು-ಮೈಸೂರು ನಡುವೆ ಕಾರ್ಯಾಚರಣೆ ನಡೆಸಲಿದೆ. ಮೈಸೂರು-ಬೆಂಗಳೂರಿಗೆ ತಲಾ 300 ರು.ಟಿಕೆಟ್‌ ದರ ನಿಗದಿ ಮಾಡಿದ್ದೇವೆ. ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್‌ ಬಸ್‌ ಖರೀದಿ ಮಾಡಿದ್ದು, ರಾಜ್ಯದ 7 ಕಡೆಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನು ಮಾಡುತ್ತಿದ್ದೇವೆ ಎಂದರು.

ಮುಂದಿನ 1 ತಿಂಗಳಲ್ಲಿ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿಗೆ ಎಲೆಕ್ಟ್ರಿಕ್‌ ಬಸ್‌ಗಳು ಸಂಚರಿಸಲಿವೆ. ಎಲೆಕ್ಟ್ರಿಕ್‌ ಬಸ್‌ ಹವಾನಿಯಂತ್ರಿತ (ಎಸಿ) ವ್ಯವಸ್ಥೆ ಒಳಗೊಂಡಿದ್ದು, ಚಾಲಕ ಮತ್ತು ನಿರ್ವಾಹಕ ಹಾಗೂ 43 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಇದೆ. ಒಮ್ಮೆ ಚಾಜ್‌ರ್‍ ಮಾಡಿದರೆ 250 ರಿಂದ 270 ಕಿ.ಮೀ ಸಾಗಲಿದೆ ಎಂದರು.

ಕೆಎಸ್ಆರ್‌ಟಿಸಿಗೂ ಬಂತು ಎಲೆಕ್ಟ್ರಿಕ್ ಬಸ್: ಇಂದಿನಿಂದ ಸಂಚಾರ ಆರಂಭ

ವಿಮಾನದಂತಹ ಅನುಭವ!

ಕೆಎಸ್‌ಆರ್‌ಟಿಸಿ ಒಟ್ಟು 50 ಎಲೆಕ್ಟ್ರಿಕ್‌ ಬಸ್‌ಗಳಿಗೆ ಹೈದರಾಬಾದ್‌ನ ಓಲೆಕ್ಟ್ರಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಡಿ.31ರಂದು ಸಾರಿಗೆ ಸಚಿವ ಶ್ರೀರಾಮುಲು ಎಲೆಕ್ಟ್ರಿಕ್‌ ಬಸ್‌ಗೆ ಚಾಲನೆ ನೀಡಿದ್ದರು. ಈ ಎಲೆಕ್ಟ್ರಿಕ್‌ ಬಸ್‌ನಲ್ಲಿ ಪ್ರಯಾಣಿಕರು ಹೊಗೆ ಹಾಗೂ ಶಬ್ದರಹಿತವಾಗಿ ಪ್ರಯಾಣಿಸಬಹುದು. ಎಲೆಕ್ಟ್ರಿಕ್‌ ಬಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳು, ತುರ್ತು ನಿರ್ಗಮನ ದ್ವಾರ, ಅಗ್ನಿಶಾಮಕ ಸಾಧನ, ಎಮರ್ಜೆನ್ಸಿ ಬಟನ್‌, ಪ್ರಥಮ ಚಿಕಿತ್ಸಾ ಕಿಟ್‌, ಎರಡು ಟೀವಿ, ಅತ್ಯಾಧುನಿಕ ಬ್ರೇಕಿಂಗ್‌, ಸುಧಾರಿತ ಬ್ಯಾಟರಿ, ಐಷಾರಾಮಿ ಪುಶ್‌ಬ್ಯಾಕ್‌ ಸೀಟ್‌ಗಳು, ಪ್ರತಿ ಸೀಟಿಗೆ ಎನೇಬಲ್ಡ್‌ ಯುಎಸ್‌ಬಿ ಚಾರ್ಜರ್‌ಗಳು, ಎಸಿ ಅಳವಡಿಸಲಾಗಿದ್ದು ವಿಮಾನದಲ್ಲಿ ಸಂಚರಿಸಿದ ಅನುಭವ ನೀಡುತ್ತದೆ.

ನಿರ್ವಹಣೆ ವೋಲ್ವೋಗಿಂತ ಅಗ್ಗ

ಸದ್ಯ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ಗಳಿಗೆ ಪ್ರತಿ ಕಿ.ಮೀಗೆ 70 ರು. ಆಗುತ್ತಿದೆ. ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣಾ ವೆಚ್ಚ ಪ್ರತಿ ಕಿ.ಮೀಗೆ 55 ರು. ಆಗಿದೆ. ಎಲೆಕ್ಟ್ರಿಕ್‌ ಬಸ್‌ಗಳ ಮೂಲಕ 15 ರು. ಉಳಿತಾಯವಾಗಲಿದೆ. ಬಸ್‌ ಪೂರೈಸಿದ ಕಂಪನಿಯೇ ಚಾಲಕರನ್ನು ನೇಮಿಸಿ, ಬಸ್‌ಗಳನ್ನು ನಿರ್ವಹಿಸಲಿದೆ.

KSRTC Electric Bus: ಕೆಎಸ್ಆರ್‌ಟಿಸಿಗೆ ಎಂಟ್ರಿ ಕೊಟ್ಟ ಮೊದಲ ಎಲೆಕ್ಟ್ರಿಕ್ ಬಸ್

ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ಗಳಂತೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಕೂಡಾ ನಿರ್ಮಿಸಿದ ಕಂಪನಿಯ ಸಂಚಾರ ಮತ್ತು ನಿರ್ವಹಣೆ ಮಾಡಲಿದೆ. ಚಾಲಕರನ್ನು ಕೂಡಾ ಬಸ್‌ ಕಂಪನಿಯೇ ನೇಮಿಸಲಿದೆ. ಕೇಂದ್ರ ಸರ್ಕಾರದ ಫೆಮ್‌ 2 ಕಾರ್ಯಕ್ರಮದಡಿ ಜಿಸಿಸಿ ಮಾದರಿಯಲ್ಲಿ ಸಬ್ಸಿಡಿಯಲ್ಲಿ 55 ಲಕ್ಷ ರು.ಗೆ ಬಸ್‌ಗಳನ್ನು ನೀಡಲಾಗುತ್ತಿದೆ. ಬಸ್‌ ಪೂರ್ಣ ವೆಚ್ಚ 1.8 ಕೋಟಿ ರು. ಆಗಿದೆ.

ಎಲೆಕ್ಟ್ರಿಕ್‌ ಬಸ್‌ ಓಡಾಟಕ್ಕೆ ನಿರ್ಧರಿಸಿರುವ ಮಾರ್ಗ

ಬೆಂಗಳೂರು-ಮಡಿಕೇರಿ
ಬೆಂಗಳೂರು-ದಾವಣಗೆರೆ
ಬೆಂಗಳೂರು-ಮೈಸೂರು
ಬೆಂಗಳೂರು-ಚಿಕ್ಕಮಗಳೂರು
ಬೆಂಗಳೂರು-ವಿರಾಜಪೇಟೆ
ಬೆಂಗಳೂರು- ಶಿವಮೊಗ್ಗ

ಬಸ್‌ಗಳ ಜಾರ್ಜಿಂಗ್‌ಗಾಗಿ ಬೆಂಗಳೂರು ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಹೊಸ ಘಟಕ (3 ಸಾವಿರ ಕೆವಿಎ), ಮೈಸೂರು ಬಸ್‌ ನಿಲ್ದಾಣ (500 ಕೆವಿಎ), ಮಡಿಕೇರಿ ಡಿಪೋ (600 ಕೆವಿಎ), ವಿರಾಜಪೇಟೆ ಬಸ್‌ ನಿಲ್ದಾಣ (400 ಕೆವಿಎ), ದಾವಣಗೆರೆ ಘಟಕ-1 (900 ಕೆವಿಎ), ಶಿವಮೊಗ್ಗ ಡಿಪೋ (650 ಕೆವಿಎ) ಮತ್ತು ಚಿಕ್ಕಮಗಳೂರು ಡಿಪೋನಲ್ಲಿ (600 ಕೆವಿಎ) ಚಾರ್ಜಿಂಗ್‌ ಕೇಂದ್ರಗಳನ್ನು ಮಾಡುತ್ತಿರುವುದಾಗಿ ತಿಳಿಸಿದರು.

Follow Us:
Download App:
  • android
  • ios