'ಶಕ್ತಿ' ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಆದಾಯ ಹೆಚ್ಚಾಗಿದ್ದರೂ, ದಸರಾ ಆಯುಧ ಪೂಜೆಗಾಗಿ ಪ್ರತಿ ಬಸ್‌ಗೆ ಕೇವಲ ₹150 ನೀಡಿರುವುದು ಸಿಬ್ಬಂದಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ದುಬಾರಿ ಕಾಲದಲ್ಲಿ ಇಷ್ಟು ಕಡಿಮೆ ಹಣದಲ್ಲಿ ಪೂಜೆ ಅಸಾಧ್ಯವೆಂದಿರುವ ನೌಕರರು ಹೇಳಿದದಾರೆ.

ಬೆಂಗಳೂರು (ಸೆ.27): ರಾಜ್ಯದಲ್ಲಿ 'ಶಕ್ತಿ' ಯೋಜನೆ ಯಶಸ್ವಿಯಾಗಿ ಜಾರಿಯಾಗಿ, ಸಾರಿಗೆ ನಿಗಮಗಳಿಗೆ ಕೋಟ್ಯಂತರ ರೂಪಾಯಿ ಆದಾಯ ಹರಿದುಬರುತ್ತಿದ್ದರೂ, ಮುಂಬರುವ ದಸರಾ ಹಬ್ಬದ ಪ್ರಮುಖ ಆಯುಧ ಪೂಜೆಗಾಗಿ ನಿಗಮಗಳು ಪ್ರತಿ ಬಸ್ ಅಥವಾ ವಾಹನಕ್ಕೆ ಕೇವಲ ₹150 ರಷ್ಟು ಅಲ್ಪ ಮೊತ್ತವನ್ನು ಮಾತ್ರ ಬಿಡುಗಡೆ ಮಾಡಿರುವುದು ಸಿಬ್ಬಂದಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಾಲ್ಕು ಸಾರಿಗೆ ಸಂಸ್ಥೆಗಳ (KSRTC, BMTC, NWKRTC, KKRTC) ಸಿಬ್ಬಂದಿಗಳು ಈ ಕುರಿತು ಸಾರಿಗೆ ಸಚಿವರನ್ನು ಮತ್ತು ಇಲಾಖೆಯ ನಿರ್ಧಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ‘ದಸರಾ ಹಬ್ಬ ಆಚರಿಸಲು, ವಾಹನಕ್ಕೆ ಪೂಜೆ ಮಾಡಲು ಈ ಕಾಲದಲ್ಲಿ ಕೇವಲ ₹150 ರೂಪಾಯಿ ಸಾಕಾ?’ ಎಂದು ಸಿಬ್ಬಂದಿ ಹತಾಶೆಯಿಂದ ಕೇಳುತ್ತಿದ್ದಾರೆ.

ದುಬಾರಿ ದುನಿಯಾದಲ್ಲಿ ಕಂಜೂಸು ನೀತಿ:

ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಗಳು ತಮ್ಮ ಬಸ್‌ಗಳು ಮತ್ತು ಇಲಾಖಾ ವಾಹನಗಳಿಗೆ ಸಂಪ್ರದಾಯದಂತೆ ಆಯುಧ ಪೂಜೆ ಮಾಡುವುದು ವಾಡಿಕೆ. ಆದರೆ, ಈ ವರ್ಷ ಸಂಸ್ಥೆಯು ನಿಗದಿಪಡಿಸಿದ ಹಣವು ಮಾರುಕಟ್ಟೆ ಬೆಲೆಯ ಮುಂದೆ ತೀರಾ ನಗಣ್ಯವಾಗಿದೆ. ಸಿಬ್ಬಂದಿಯ ಪ್ರಕಾರ, ದುಬಾರಿಯಾದ ಈ ದಿನಗಳಲ್ಲಿ 'ಒಂದು ಮಾರು ಹೂವಿನ ಹಾರವೇ ₹100 ರೂಪಾಯಿ ದಾಟಿದೆ. ಜೊತೆಗೆ ಬಾಳೆಕಂದು, ತೆಂಗಿನಕಾಯಿ, ಅರಿಶಿನ, ಕುಂಕುಮ, ಊದಬತ್ತಿ ಮತ್ತು ಸಿಹಿ ತಿಂಡಿಗಳನ್ನು ಸೇರಿಸಿದರೆ ₹150 ರಲ್ಲಿ ಒಂದು ಬಸ್‌ಗೆ ಪೂಜೆ ಮಾಡುವುದು ಸಂಪೂರ್ಣ ಅಸಾಧ್ಯದ ಮಾತು. ಇಷ್ಟು ಹಣದಲ್ಲಿ ಪೂಜೆ ಮಾಡಲು ಸಾಧ್ಯವೇ ಇಲ್ಲ ಎಂದು ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ.

ಬಿಡುಗಡೆಯಾದ ಹಣದ ವಿವರ:

  • ಪ್ರತಿ ಬಸ್ / ಇಲಾಖಾ ವಾಹನಕ್ಕೆ: ₹150/-
  • ವಿಭಾಗೀಯ ಕಾರ್ಯಾಗಾರಕ್ಕೆ (Divisional Workshop): ₹2,000/-
  • ಪ್ರಾದೇಶಿಕ ಕಾರ್ಯಾಗಾರಕ್ಕೆ (Regional Workshop): ₹4,000/-

ಕಾರ್ಯಾಗಾರಗಳಿಗೆ ಬಿಡುಗಡೆಯಾದ ಮೊತ್ತವೂ ದೊಡ್ಡ ಪ್ರಮಾಣದಲ್ಲಿಲ್ಲ. ಆದರೆ, ಅತಿ ಹೆಚ್ಚು ಸಂಖ್ಯೆಯಲ್ಲಿರುವ ಬಸ್‌ಗಳಿಗೆ ಬಿಡುಗಡೆ ಮಾಡಿರುವ ₹150 ಸದ್ಯದ ಜ್ವಲಂತ ಸಮಸ್ಯೆಯಾಗಿದೆ.

ಆದಾಯ ಹೆಚ್ಚಿದರೂ ಅನುದಾನಕ್ಕೆ ಕತ್ತರಿ:

ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿ ಮಾಡಿದ ಬಳಿಕ, ಮಹಿಳಾ ಪ್ರಯಾಣಿಕರ ಓಡಾಟ ಹೆಚ್ಚಾಗಿ ನಿಗಮಗಳಿಗೆ ಸಾಕಷ್ಟು ಆದಾಯ ಬರುತ್ತಿದೆ. ಸಂಸ್ಥೆಗಳ ಹಣಕಾಸು ಪರಿಸ್ಥಿತಿ ಮೊದಲಿಗಿಂತ ಸುಧಾರಿಸುತ್ತಿರುವಾಗಲೇ, ಇಲಾಖೆಯು ಇಷ್ಟು 'ಕಂಜೂಸು' (Miserly) ನೀತಿ ಅನುಸರಿಸಲು ಕಾರಣವೇನು ಎಂದು ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ. ಸಾರಿಗೆ ಸಚಿವರು ಕೂಡಲೇ ಮಧ್ಯಪ್ರವೇಶಿಸಿ, ಪ್ರತಿ ವಾಹನಕ್ಕೆ ಬಿಡುಗಡೆ ಮಾಡುವ ಹಣವನ್ನು ಕನಿಷ್ಠ ₹500 ಕ್ಕೆ ಏರಿಸಬೇಕು ಎಂದು ನಾಲ್ಕೂ ನಿಗಮಗಳ ನೌಕರರು ಒತ್ತಾಯಿಸಿದ್ದಾರೆ.

ಒಂದು ಕಡೆ ಶಕ್ತಿ ಯೋಜನೆ ಜಾರಿಯಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಆದಾಯ ಬರುತ್ತಿದ್ದರೆ, ಇನ್ನೊಂದು ಕಡೆ ನಮ್ಮ ವಾಹನಗಳ ಆಯುಧ ಪೂಜೆಗಾಗಿ ಸಿಬ್ಬಂದಿಯೇ ಹಣ ಹಾಕಿ ಹಬ್ಬ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಹಣವೂ ಬೇಡ, ಹಬ್ಬ ಆಚರಣೆಯೂ ಬೇಡ' ಎಂದು ಸಿಬ್ಬಂದಿ ಹಬ್ಬದ ಆಚರಣೆಯಿಂದಲೇ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ.