ಬೆಂಗಳೂರು :  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ಬಸ್‌ನಲ್ಲಿ ಬಿಟ್ಟು ಹೋಗಿದ್ದ ಆರು ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಾಲ್ಕು ಸಾವಿರ ರು. ನಗದು ಇದ್ದ ಬ್ಯಾಗ್‌ ಅನ್ನು ಪ್ರಯಾಣಿಕನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕನಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ಗುರುವಾರ ಐದು ಸಾವಿರ ರು. ನಗದು ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಎಸ್ಸಾರ್ಟಿಸಿಯ ಚಿತ್ರದುರ್ಗ ವಿಭಾಗದ ಶಿರಾ ಘಟಕದ ನಿರ್ವಾಹಕ ಆರ್‌.ಶ್ರೀಧರ್‌ ಪ್ರಾಮಾಣಿಕತೆ ಮರೆದಿದ್ದಾರೆ. ಶ್ರೀಧರ್‌ ಜ.8ರಂದು ಶಿರಾ- ಬೆಂಗಳೂರು- ಪಾವಗಡ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪ್ರಯಾಣಿಕರೊಬ್ಬರು ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗ್‌ಅನ್ನು ಬಸ್‌ನಲ್ಲೇ ಬಿಟ್ಟು ಹೋಗಿದ್ದರು.

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಬ್ಯಾಗ್‌ ಗಮನಿಸಿದ್ದ ನಿರ್ವಾಹಕ ಶ್ರೀಧರ್‌, ಕೂಡಲೇ ಘಟಕ ವ್ಯವಸ್ಥಾಪಕರಿಗೆ ಬ್ಯಾಗ್‌ನ ವಿಚಾರ ತಿಳಿಸಿ ಬಳಿಕ ಪ್ರಯಾಣಿಕರಿಗೆ ಬ್ಯಾಗ್‌ ಹಿಂದಿರುಗಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಂತಿನಗರದ ಕೆಎಸ್ಸಾರ್ಟಿಸಿ ಕೇಂದ್ರದ ಕಚೇರಿಯಲ್ಲಿ ನಿರ್ವಾಹಕ ಶ್ರೀಧರ್‌ ಅವರಿಗೆ ಬಹುಮಾನ ನೀಡಿ ಸನ್ಮಾನಿಸಿಲಾಯಿತು.

ನಿರ್ವಾಹಕ ಶ್ರೀಧರ್‌ ಅವರ ನಿಸ್ವಾರ್ಥ ಸೇವೆ ಇತರೆ ಸಿಬ್ಬಂದಿಗೆ ಸ್ಫೂರ್ತಿದಾಯಕ ಹಾಗೂ ಮಾದರಿಯಾಗಿದೆ ಎಂದು ಕಳಸದ ತಿಳಿಸಿದ್ದಾರೆ.