ಉಚಿತ ಪ್ರಯಾಣ 2ನೇ ದಿನ: ಬಸ್‌ಗಳು ರಶ್‌

ರೈಲು ಬಿಟ್ಟು ಬಸ್‌ ಏರಿದ ಮಹಿಳೆಯರು, ಸರ್ಕಾರಿ ಬಸ್‌ ಭರ್ತಿ, ಖಾಸಗಿ ಬಸ್‌ಗಳು ಖಾಲಿ, ಖಾಲಿ

KSRTC Buses Rush Due to Free Travel For Women in Karnataka  grg

ಬೆಂಗಳೂರು/ಹುಬ್ಬಳ್ಳಿ(ಜೂ.13): ‘ಶಕ್ತಿ’ ಯೋಜನೆ ಜಾರಿಯ ಎರಡನೇ ದಿನವಾದ ಸೋಮವಾರ ರಾಜ್ಯದೆಲ್ಲೆಡೆಯ ಬಸ್‌ ನಿಲ್ದಾ​ಣ​ಗ​ಳಲ್ಲಿ ಎಲ್ಲಿ ನೋಡಿ​ದರೂ ಮಹಿ​ಳೆ​ಯರ ದಂಡೇ ಕಂಡು ಬಂತು.

ಭಾನುವಾರ ರಜಾ ದಿನವಾಗಿತ್ತು. ಸೋಮವಾರ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ತೆರಳುವ ಮಹಿಳೆಯರ ಸಂಖ್ಯೆ ಜಾಸ್ತಿ ಇದ್ದಿದರಿಂದ ಬೆಳಗ್ಗೆಯಿಂದಲೇ ಬಹುತೇಕ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ ಕಂಡು ಬಂತು. ಇಷ್ಟುದಿನ ಮಾಸಿಕ ಪಾಸ್‌ ತೋರಿಸಿ ಸಂಚರಿಸುತ್ತಿದ್ದ ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರು ಸೋಮವಾರ ಆಧಾರ್‌ ಕಾರ್ಡ್‌, ಇಲಾಖೆ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸಿದರು. ಸರ್ಕಾರದ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರವಾಸಿ ತಾಣ​ಗಳ ಚೇತ​ರಿ​ಕೆಗೆ ‘ಶಕ್ತಿ’ ಯೋಜನೆ ಟಾನಿಕ್‌

ಬಾಗಲಕೋಟೆ, ಗದಗ, ಕಲಬುರಗಿ, ಚಿತ್ರದುರ್ಗ ಸೇರಿ ಕೆಲವೆಡೆ ಬಸ್ಸಿನ ಆಸ​ನ​ಗಳು ತುಂಬಿ ಬಸ್ಸಿನ ಬಾಗಿಲ ಬಳಿ ಜೋತು ಬಿದ್ದು, ಮಹಿ​ಳೆ​ಯರು ಪ್ರಯಾ​ಣಿ​ಸಿದರು. ಇಷ್ಟುದಿವಸ ಬಸ್ಸಿ​ನಲ್ಲಿ ಆಸ​ನ​ಗ​ಳನ್ನು ಹಿಡಿ​ಯಲು ಕಿಟಕಿ ಮೂಲಕ ಕರ​ವಸ್ತ್ರ ಹಾಕುತ್ತಿದ್ದ ಮಹಿಳೆಯರು, ಸೀಟ್‌ ಮೇಲಿದ್ದ ಕರವಸ್ತ್ರ ತೆಗೆದು ಕೂತರೆ ಎನ್ನುವ ಕಾರಣಕ್ಕೆ ಬಸ್ಸಿನ ಕಿಟ​ಕಿ​ಯಿಂದ ಮಕ್ಕ​ಳನ್ನೇ ಒಳಗೆ ಇಳಿಸಿ ಆಸ​ನ​ಗ​ಳನ್ನು ಹಿಡಿ​ಯಲು ಹರ​ಸಾ​ಹಸ ಪಡುತ್ತಿದ್ದ ದೃಶ್ಯ ಕಂಡು ಬಂತು.

ಈ ಮಧ್ಯೆ, ದೂರದ ಊರಿಂದ ಬಂದವರು ಗುರು​ತಿನ ಚೀಟಿ ಇಲ್ಲದೆ ಪರ​ದಾ​ಡಿದ ಪ್ರಸಂಗ ಗದಗ, ಮಂಗಳೂರು, ಉಡುಪಿ ಮತ್ತಿತರ ಕಡೆ ಕಂಡು ಬಂತು. ಮಂಗಳೂರಿನಲ್ಲಿ ಗುರುತಿನ ಚೀಟಿ ಇಲ್ಲದ್ದರಿಂದ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಗೆ ಪುರುಷ ಪ್ರಯಾಣಿಕರೊಬ್ಬರು 50 ರು.ನೀಡಿ ಟಿಕೆಟ್‌ ತೆಗೆದುಕೊಂಡು ಪ್ರಯಾಣಿಸಲು ಸಹಾಯ ಮಾಡಿದರು. ಗದಗಿನಲ್ಲಿ ವ್ಯಾಪಾರಕ್ಕೆಂದು ಬಂದಿದ್ದ ಗಿರಿಜಮ್ಮ ಎಂಬ ಮಹಿಳೆ, ಬುಟ್ಟಿಹೊತ್ತು​ಕೊಂಡು ಬಸ್‌ ಹತ್ತಲು ಕಂಡಕ್ಟರ್‌ ಅವಕಾಶ ನೀಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಬಸ್‌ನೊಳಗೆ ಲಗೇಜ್‌ ಒಯ್ಯಲು ಅವಕಾಶ ನೀಡದ್ದಕ್ಕೆ ಕೆಲವೆಡೆ ಗಲಾಟೆಗಳು ನಡೆದವು.

ಮಂಗಳೂರು: ಮಹಿಳಾ ‘ಶಕ್ತಿ’ ಯೋಜನೆ: ಮೊದಲ ದಿನ 5454 ಮಹಿಳೆಯರ ಪ್ರಯಾಣ!

ಗ್ರಾಮೀಣ ಭಾಗದಿಂದ ಕಾಲೇಜಿಗೆ ತೆರಳಲು ನಿಂತಿದ್ದ ನೂರಾರು ವಿದ್ಯಾರ್ಥಿಗಳು ಬಸ್ಸುಗಳು ಭರ್ತಿಯಾಗಿದ್ದರಿಂದ ಶಾಲಾ, ಕಾಲೇಜಿಗೆ ಹೋಗಲು ಪರದಾಡಿದರು. ಕೆಲವೆಡೆ ವಿದ್ಯಾರ್ಥಿಗಳು ಲಾರಿ ಏರಿ ಪ್ರಯಾಣ ಬೆಳೆಸಿದರು. ಹುಬ್ಬಳ್ಳಿ, ರಾಯಚೂರು ಸೇರಿ ಕೆಲವೆಡೆ ಪುರುಷ ಪ್ರಯಾಣಿಕರು ಖಾಸಗಿ ವಾಹ​ನ​ಗಳ ಮೊರೆ ಹೋದರು.

ಇದೇ ವೇಳೆ, ಶಿವಮೊಗ್ಗ, ಸಾಗರ, ಉಡುಪಿ, ಮಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಬಳ್ಳಾರಿ, ಕುರುಗೋಡು, ಕಂಪ್ಲಿ ಮತ್ತಿತರೆಡೆ ನಿತ್ಯ 1,000 ರಿಂದ 1,500 ವರೆಗೆ ದುಡಿಯುತ್ತಿದ್ದ ಟಾಟಾ ಎಸಿ ಪ್ಯಾಸೆಂಜರ್‌ ವಾಹನಗಳು, ಆಟೋಗಳು ಪ್ರಯಾಣಿಕರಿಲ್ಲದೆ ನಿಂತಿದ್ದು ಕಂಡು ಬಂತು. ಹಾವೇರಿ, ಹುಬ್ಬಳ್ಳಿ, ದಾವಣಗೆರೆ, ರಾಣೆಬೆನ್ನೂರು ಮತ್ತಿತರ ಕಡೆ ಇಷ್ಟುದಿನ ರೈಲಿನಲ್ಲಿ ಸಂಚರಿಸುತ್ತಿದ್ದ ಮಹಿಳಾ ನೌಕರರೂ ಬಸ್‌ ಹತ್ತಿ ಆಗಮಿಸಿದ್ದು ವಿಶೇಷವಾಗಿತ್ತು. ಈ ಮಧ್ಯೆ, ಕಚೇರಿಗಳಲ್ಲಿ ಕಸ ಗುಡಿಸುವ ಮಹಿಳೆಯೊಬ್ಬಳು ಈ ಯೋಜನೆಯ ಅರಿವಿಲ್ಲದೆ, ಎಂದಿನಂತೆ 10 ರು.ನೀಡಿದ್ದು, ಕಂಡಕ್ಟರ್‌ ಆಕೆಗೆ ಉಚಿತ ಪ್ರಯಾಣದ ಟಿಕೇಟು ನೀಡಿ, ಯಾಮಾರಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

Latest Videos
Follow Us:
Download App:
  • android
  • ios