ಬೆಂಗಳೂರು(ಆ.10): ಕೊರೋನಾ ಭೀತಿಯ ನಡುವೆಯೂ ‘ಶ್ರೀಕೃಷ್ಣ ಜನ್ಮಾಷ್ಟಮಿ’ ಆಚರಣೆಗೆ ನಗರದ ದೇವಾಲಯಗಳಲ್ಲಿ ಸಕಲ ಸಿದ್ಧತೆ ನಡೆದಿದ್ದು, ಕೆಲ ದೇವಾಲಯಗಳು ಕೃಷ್ಣನ ಆರಾಧನೆಯನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಿವೆ. ಭಕ್ತರು ಮನೆಯಲ್ಲಿಯೇ ಕುಳಿತು ಜನ್ಮಾಷ್ಟಮಿಯ ವೈಭವವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಆ.11 ಮತ್ತು 12ರಂದು ಎರಡು ದಿನ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಜರುಗಲಿದೆ. ಕೋವಿಡ್‌-19 ಹಿನ್ನೆಲೆ ದೇವಾಲಯಗಳಿಗೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಹೀಗಾಗಿ ಕೃಷ್ಣನ ಆರಾಧನೆ ಆನ್‌ಲೈನ್‌ನಲ್ಲಿ ಪ್ರಸಾರವಾಗಲಿದೆ.
ನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಇಸ್ಕಾನ್‌ ದೇವಸ್ಥಾನ, ಬಸವನಗುಡಿಯ ಪುತ್ತಿಗೆ ಮಠದ ಗೋವರ್ಧನಗಿರಿ ಕ್ಷೇತ್ರ, ಪೂರ್ಣಪ್ರಜ್ಞ ನಗರದ ಪೂರ್ಣ ಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಸೇರಿದಂತೆ ನಾನಾ ಕೃಷ್ಣ ದೇವಾಲಯಗಳು ಮತ್ತು ಮಠಗಳು ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಜ್ಜಾಗಿವೆ. ಆಯಾ ಮಠದ ವೆಬ…ಸೈಟ್‌, ಫೇಸ್‌ಬುಕ್‌ ಪೇಜ್‌ಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.

ಪತ್ನಿಗೆ ಪಾಸಿಟಿವ್‌ ಎನ್ನುತ್ತಿದ್ದಂತೆ ಪತಿ ಎಸ್ಕೇಪ್‌: ಹೆಂಡ್ತಿ ಸತ್ರೂ ಬಾರದ ಕ್ರೂರಿ ಗಂಡ

ಇಸ್ಕಾನ್‌ನಿಂದ ‘ಸ್ವಾಗತಂ ಕೃಷ್ಣ ಲೈವ್‌’:

ಶ್ರೀಕೃಷ್ಣ ಜನ್ಮಾಷ್ಟಮಿಗೆ ಇಸ್ಕಾನ್‌ ಈಗಾಗಲೇ ಸಜ್ಜುಗೊಂಡಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ಇಸ್ಕಾನ್‌ನಲ್ಲಿ ಭಕ್ತರಿಗೆ ನೇರ ದರ್ಶನ ಅವಕಾಶವಿಲ್ಲ. ಆದರೆ, ಆನ್‌ಲೈನ್‌ನಲ್ಲಿ ದೇವರ ದರ್ಶನ ಮಾಡಬಹುದು. ಜಾಲತಾಣ (ಇಸ್ಕಾನ್‌ ಯುಟ್ಯೂಬ್‌ ಚಾನೆಲ್‌, ಇನ್‌ಸ್ಟಾಗ್ರಾಮ, ಫೇಸ್‌ಬುಕ್‌, ಟ್ವಿಟರ್‌) ಮೂಲಕ ‘ಸ್ವಾಗತಂ ಕೃಷ್ಣ ಲೈವ್‌’ ಶೀರ್ಷಿಕೆಯಡಿ ಪ್ರಸಾರವಾಗಲಿದೆ.

ಆ.11 ಮತ್ತು 12ರಂದು ಸುಮಾರು 20 ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರವಾಗಲಿದೆ. ವೈಭವೋಪೇತ ತೆಪ್ಪೋತ್ಸವ, ಪಂಚಗವ್ಯ, ಪಂಚಾಮೃತ, ಅಭಿಷೇಕ, ದೀಪಾಲಂಕಾರ, ಪುಷ್ಪವೃಷ್ಟಿ, ಚಾಮರ ಸೇವೆ, ಉಯ್ಯಾಲೆ ಸೇವೆಯನ್ನು ವೀಕ್ಷಣೆ ಮಾಡಬಹುದು. ಜತೆಗೆ ನೃತ್ಯ, ಸಂಗೀತ, ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಎರಡೂ ದಿನ ಬೆಳಗ್ಗೆ 6.30 ರಿಂದ ರಾತ್ರಿ 12 ರವರೆಗೆ ಇಸ್ಕಾನ್‌ನ ವೆಬ್‌ಸೈಚ್‌ ಮತ್ತು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದೆ. ಆ.12ರಂದು ಸಂಜೆ 4ಕ್ಕೆ ನಟ ಯಶ್‌ ಮಕ್ಕಳ ಕುರಿತು ಮಾತನಾಡಲಿದ್ದಾರೆ.

ವ್ಯಾಪಾರ ಭಾರೀ ಕುಸಿತ

ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಗೆ ಗರಿಗೆದರುತ್ತಿದ್ದ ಮಾರುಕಟ್ಟೆಗಳು ಕಳೆ ಕಳೆದುಕೊಂಡಿವೆ. ಶ್ರೀಕೃಷ್ಣನ ಗೊಂಬೆಗಳು, ರಾಧೆ-ಕೃಷ್ಣರ ರೆಡಿಮೇಡ್‌ ಡ್ರೆಸ್‌ಗಳು, ಅಲಂಕಾರಿಕ ವಸ್ತುಗಳು ಮಾರಾಟಕ್ಕೆ ಕೊರೋನಾ ಕಂಟಕವಾಗಿ ಪರಿಣಮಿಸಿದೆ.

ಕೊರೋನಾ ಸೋಂಕು ನಡುವೆಯೂ ಮಾರುಕಟ್ಟೆಯಲ್ಲಿ ಮನಸೂರೆಗೊಳ್ಳುವ ಶ್ರೀಕೃಷ್ಣನ ಗೊಂಬೆಗಳು, ರಾಧೆ-ಕೃಷ್ಣರ ರೆಡಿಮೇಡ್‌ ಡ್ರೆಸ್‌ಗಳು, ಅಲಂಕಾರಿಕ ವಸ್ತುಗಳು ರಾರಾಜಿಸುತ್ತಿವೆ. ಆದರೆ, ಕೊಳ್ಳುವವರಿಲ್ಲ. ಅದ್ಧೂರಿಯಾಗಿ ಹಬ್ಬ ಆಚರಿಸುತ್ತಿದ್ದವರು ಲಡ್ಡು ಗೋಪಾಲ ಕೃಷ್ಣನ ಗೊಂಬೆಗಳು, ಕೊಳಲು, ಬೆಣ್ಣೆ ಮಡಿಕೆ, ದೀಪಾಲಂಕಾರಿಕ ವಸ್ತುಗಳು ಸೇರಿದಂತೆ ವಿವಿಧ ಮಾದರಿಯ ಗೊಂಬೆಗಳನ್ನು ಪೂಜೆಗಾಗಿ ಖರೀದಿಸುತ್ತಿದ್ದರು. ಆದರೆ, ಈ ವರ್ಷ ಸೋಂಕಿನ ಭೀತಿ ಜನರನ್ನು ಹಬ್ಬದಿಂದ ವಿಮುಕ್ತರನ್ನಾಗಿಸಿದೆ.

ಪ್ರತಿವರ್ಷ ಮನೆಯಲ್ಲಿ ವಿಜೃಂಭಣೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿದ್ದವರು ಸರಳ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಶಾಲೆಗಳು ಮುಚ್ಚಿರುವುದು ವ್ಯಾಪಾರಿಗಳಿಗೆ ಪೆಟ್ಟು ನೀಡಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಶಾಲೆಗಳು, ಸಂಘ ಸಂಸ್ಥೆಗಳು ರಾಧೆ-ಕೃಷ್ಣರ ಛದ್ಮವೇಶ ಸ್ಪರ್ಧೆ ಏರ್ಪಡಿಸುತ್ತಿದ್ದವು. ಪೋಷಕರು ಮಕ್ಕಳಿಗೆ ರಾಧೆ-ಕೃಷ್ಣರ ವೇಷಭೂಷಣ ತೊಡಿಸಿ ಸಂಭ್ರಮಿಸುತ್ತಿದ್ದರು. ಈ ಸಮಯದಲ್ಲಿ ಮಕ್ಕಳಿಗಾಗಿ ರಾಧೆ-ಕೃಷ್ಣರ ರೆಡಿಮೇಡ್‌ ಡ್ರೆಸ್‌ಗಳು ಹೆಚ್ಚಾಗಿ ಖರೀದಿಯಾಗುತ್ತಿದ್ದವು. ಆದರೆ, ಈ ಬಾರಿ ಶಾಲೆಗಳು ಮುಚ್ಚಿರುವುದರಿಂದ ಇವುಗಳ ಮಾರಾಟವೂ ಕುಸಿದಿದೆ. ಕೊರೋನಾದಿಂದ ಜನರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.