ಬೆಂಗಳೂರು(ಆ.10): ಪ್ರೀತಿಸಿ ವಿವಾಹವಾಗಿದ್ದ ಪತ್ನಿಗೆ ಕೊರೋನಾ ಸೋಂಕು ದೃಢಪಡುತ್ತಿದ್ದಂತೆ ಪರಾರಿಯಾದ ಪತಿ, ಆಕೆ ಚಿಕಿತ್ಸೆ ಸಿಗದೇ ಮೃತಪಟ್ಟರೂ ಬಾರದೇ ಇರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಂಕರಮಠ ವಾರ್ಡ್‌ನ ಜೆ.ಸಿ.ನಗರದಲ್ಲಿ ಈ ಘಟನೆ ಜರುಗಿದ್ದು, 27 ವರ್ಷದ ಸೋಂಕಿತ ಮಹಿಳೆ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ದುರಳ ಪತಿ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದಾನೆ.

ಉತ್ತರ ಕರ್ನಾಟಕ ಮೂಲದ ಈ ಜೋಡಿ ಎರಡು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಆತ ಕಾರು ಚಾಲಕನಾಗಿದ್ದು, ಆಕೆ ಒರಾಯನ್‌ ಮಾಲ್‌ನಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಳು. ಕಳೆದ ಬುಧವಾರ ಆಕೆ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿ ಮನೆಗೆ ಕರೆತಂದಿದ್ದಾನೆ. ಗುರುವಾರ ಮಹಿಳೆಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಮನೆಯಲ್ಲಿ ಪತ್ನಿಯೊಬ್ಬಳನ್ನೇ ಬಿಟ್ಟು ಪರಾರಿಯಾಗಿದ್ದಾನೆ.

ಬೆಂಗಳೂರಲ್ಲಿ ಮಹಾಮಾರಿ ಕೊರೋನಾ ಸಾವಿನ ಪ್ರಮಾಣ ಇಳಿಮುಖ!

ಮನೆಯಲ್ಲಿ ದಂಪತಿ ಮಾತ್ರ ಇದ್ದರು. ಪತಿ ಪರಾರಿಯಾದ ಬಳಿಕ ಒಂಟಿಯಾದ ಮಹಿಳೆಗೆ ಉಸಿರಾಟದ ತೊಂದರೆ ತೀವ್ರವಾಗಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಯಾರೊಬ್ಬರು ನೆರವಿಗೆ ಸಿಕ್ಕಿಲ್ಲ. ಹೀಗಾಗಿ ಸೋಂಕಿತ ಮಹಿಳೆ ನರಳಿ ನರಳಿ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಆಕೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಶನಿವಾರ ಮನೆಯ ಮಾಲೀಕ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಮೊಬೈಲ್‌ ಸ್ವಿಚ್‌ ಆಫ್‌:

ಘಟನೆಯಿಂದ ಹೆದರಿದ ಮನೆ ಮಾಲೀಕ ಶಂಕರಮಠ ವಾರ್ಡ್‌ನ ಪಾಲಿಕೆ ಸದಸ್ಯ ಎಂ.ಶಿವರಾಜು ಅವರನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮನೆ ಬಳಿ ಬಂದಿರುವ ಶಿವರಾಜು ಅವರು ಬಿಬಿಎಂಪಿಯಿಂದ ಆ್ಯಂಬುಲೆನ್ಸ್‌ ತರಿಸಿ ಕೋವಿಡ್‌ ನಿಯಮಾವಳಿ ಅನ್ವಯ ಆಕೆಯ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾರೆ. ಮನೆ ಮಾಲೀಕ, ಪಾಲಿಕೆ ಸದಸ್ಯ ಹಲವು ಬಾರಿ ಕರೆ ಮಾಡಿದರೂ ಸೋಂಕಿತ ಪತಿ ಕರೆ ಸ್ವೀಕರಿಸಿಲ್ಲ. ಕೊನೆಗೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾನೆ. ಅನ್ಯ ಮಾರ್ಗ ಇಲ್ಲದೆ, ಆತನ ವಿರುದ್ಧ ಪೊಲೀಸ್‌ ಠಾಣೆಗೆ ದೂರು ದಾಖಲಿಸಲಾಗಿದೆ.

ನಮಗೂ ಆಕೆಗೂ ಸಂಬಂಧವಿಲ್ಲ:

ಪ್ರೀತಿಸಿ ವಿವಾಹ ಮಾಡಿಕೊಂಡು ಇದೀಗ ಪತ್ನಿಗೆ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಆಕೆಯನ್ನು ಏಕಾಂಗಿಯಾಗಿ ಬಿಟ್ಟು ಪರಾರಿಯಾಗಿದ್ದೇನೆ. ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇನ್ನು ಮೃತ ಸೋಂಕಿತೆಯ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ವಿಚಾರ ಹೇಳಿದಾಗ, ಅವರು ಸಹ ಆಕೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಆಕೆ ಆತನೊಂದಿಗೆ ಮದುವೆಯಾದಾಗಲೇ ನಮ್ಮ ಸಂಬಂಧ ಕಡಿದುಕೊಂಡಿತು ಎಂದು ಹೇಳಿ ಕರೆ ಸ್ಥಗಿತಗೊಳಿಸಿದರು. ಹೀಗಾಗಿ ಬಿಬಿಎಂಪಿ ಸಿಬ್ಬಂದಿಯೇ ಮೃತಳ ಅಂತ್ಯ ಸಂಸ್ಕಾರ ನೆರವೇರಿಸಿದರು ಎಂದು ಪಾಲಿಕೆ ಸದಸ್ಯ ಶಿವರಾಜು ಹೇಳಿದರು.