ಕರ್ನಾಟಕ ಲೋಕ ಸೇವಾ ಆಯೋಗ (KPSC) ನಡೆಸಿದ 384 ಕೆಎಎಸ್ ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ ದೊಡ್ಡ ಹಗರಣದ ಆರೋಪ ಕೇಳಿಬಂದಿದೆ. ಒಂದೇ ಪರೀಕ್ಷಾ ಕೊಠಡಿಯಿಂದ ಹಲವರು ಉತ್ತೀರ್ಣರಾಗಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು (ಮಾ.23): ಕರ್ನಾಟಕ ಲೋಕ ಸೇವಾ ಆಯೋಗ (KPSC) ನಡೆಸಿದ 384 ಕೆ.ಎ.ಎಸ್ (KAS) ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶದ ಬೆನ್ನಲ್ಲೇ ಇದೀಗ ದೊಡ್ಡ ಮಟ್ಟದ ಹಗರಣದ ಆರೋಪ ಕೇಳಿಬಂದಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯು, ಈ ಬಗ್ಗೆ ಸಿಬಿಐ (CBI) ತನಿಖೆಯಾಗಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ಸರಣಿ ಪ್ರತಿಭಟನೆಗೆ ಕರೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಹಗರಣದ ಆರೋಪ?

ಕಳೆದ ವರ್ಷ ಮೇ ತಿಂಗಳಿನಲ್ಲಿ 384 ಕೆಎಎಸ್ ಹುದ್ದೆಗಳಿಗಾಗಿ ಕೆಪಿಎಸ್ಸಿ ಮುಖ್ಯ ಪರೀಕ್ಷೆಯನ್ನು ನಡೆಸಿತ್ತು. ಇತ್ತೀಚೆಗಷ್ಟೇ ಈ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಫಲಿತಾಂಶದ ಪಟ್ಟಿಯನ್ನು ಗಮನಿಸಿದ ಅಭ್ಯರ್ಥಿಗಳಲ್ಲಿ ಹಲವು ಅನುಮಾನಗಳು ಮೂಡಿವೆ. ಮುಖ್ಯವಾಗಿ, ಪರೀಕ್ಷಾ ಕೇಂದ್ರವೊಂದರ ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 12ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿರುವುದು ದೊಡ್ಡ ಮಟ್ಟದ ಸಂಶಯಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲದೆ, ಒಂದೇ ಸೀರಿಯಲ್ ನಂಬರ್ ಹೊಂದಿರುವವರು ಹಾಗೂ ಒಂದೇ ಮನೆಯ ಇಬ್ಬರಿಂದ ಮೂರು ಸದಸ್ಯರು ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಅಕ್ರಮದ ಆರೋಪಕ್ಕೆ ಪುಷ್ಠಿ ನೀಡುವಂತಿದೆ. ಅರ್ಹ ಮತ್ತು ಪ್ರಾಮಾಣಿಕವಾಗಿ ಓದಿದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆಕ್ರೋಶ ಅಭ್ಯರ್ಥಿಗಳಲ್ಲಿ ಮನೆ ಮಾಡಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಿರಂತರವಾಗಿ ವರದಿ ಮಾಡುವ ಮೂಲಕ ಅಭ್ಯರ್ಥಿಗಳ ಧ್ವನಿಯಾಗಿ ನಿಂತಿದೆ.

ರಾಜ್ಯಾದ್ಯಂತ ಹೋರಾಟದ ಕಿಚ್ಚು:

ಈ ಅಕ್ರಮದ ವಾಸನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯು ಅಭ್ಯರ್ಥಿಗಳ ಪರವಾಗಿ ಬೀದಿಗಿಳಿಯಲು ಸಿದ್ಧವಾಗಿದೆ. ಸಂಘಟನೆಯ ಮುಖಂಡ ಕಾಂತಕುಮಾರ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿ, "ಈ ಹಗರಣವು ಸಾವಿರಾರು ಬಡ ವಿದ್ಯಾರ್ಥಿಗಳ ಭವಿಷ್ಯದ ಜೊತೆಗಿನ ಆಟವಾಗಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು" ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯ ವೇಳಾಪಟ್ಟಿ:

ಅಕ್ರಮವನ್ನು ಖಂಡಿಸಿ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಸಂಘಟನೆ ತೀರ್ಮಾನಿಸಿದೆ:

ಕಲಬುರ್ಗಿ: ಇಂದು (ಮಾರ್ಚ್ 23) ಬೃಹತ್ ಪ್ರತಿಭಟನೆ ನಡೆಯಲಿದೆ.

ವಿಜಯಪುರ: ಮಾರ್ಚ್ 27 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಧಾರವಾಡ: ಏಪ್ರಿಲ್ 8 ರಂದು ವಿದ್ಯಾರ್ಥಿಗಳಿಂದ ಬೃಹತ್ ಹೋರಾಟ ನಡೆಯಲಿದೆ.

ಅಭ್ಯರ್ಥಿಗಳ ಬೇಡಿಕೆ ಏನು?

'ವರ್ಷಗಟ್ಟಲೆ ಕಷ್ಟಪಟ್ಟು ಓದಿದ ನಮಗೆ ಈ ಫಲಿತಾಂಶ ಆಘಾತ ತಂದಿದೆ. ಒಂದೇ ರೂಮಿನಲ್ಲಿ ಸಾಲು ಸಾಲಾಗಿ ಜನ ಪಾಸ್ ಆಗಲು ಹೇಗೆ ಸಾಧ್ಯ? ಇದು ವ್ಯವಸ್ಥಿತ ಸಂಚು' ಎಂದು ಅಭ್ಯರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಪಾಡಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಕೇಂದ್ರ ತನಿಖಾ ದಳದಿಂದಲೇ (CBI) ತನಿಖೆ ನಡೆಯಬೇಕು ಎಂಬುದು ಹೋರಾಟಗಾರರ ಏಕೈಕ ಬೇಡಿಕೆಯಾಗಿದೆ. ಈ ಹೋರಾಟದ ಕಿಚ್ಚು ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೂ ವ್ಯಾಪಿಸುವ ಸಾಧ್ಯತೆಯಿದ್ದು, ಸರ್ಕಾರ ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.