ಬೆಂಗಳೂರು (ನ.09):  ‘ಕೊರೋನಾದಿಂದ ಜನರು ನರಳುತ್ತಿರುವಾಗ ವಿದ್ಯುತ್‌ ದರ ಏರಿಕೆ ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ವಿದ್ಯುತ್‌ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ‘ಕಳೆದ 9 ತಿಂಗಳಿಂದ ಕೊರೋನಾ ಸೋಂಕು ಜನರನ್ನು ಬಾಧಿಸುತ್ತಿದೆ. ಪರಿಣಾಮ ಜನಸಾಮಾನ್ಯರ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು ಜೀವನ ನಿರ್ವಹಣೆಯೂ ಕಷ್ಟಎಂಬಂತಾಗಿದೆ. ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟಉಂಟಾಗಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತಾಗಿದೆ. ವ್ಯಾಪಾರಗಳಿಲ್ಲದೆ ವ್ಯಾಪಾರಿಗಳು ಸಹ ನಷ್ಟಕ್ಕೆ ಗುರಿಯಾಗಿದ್ದಾರೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ರೈತರ ಉತ್ಪನ್ನಗಳು ಹಾಗೂ ಬದುಕು ಹಾಳಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್‌ ದರ ಏರಿಕೆ ಮಾಡಿದ್ದು ಬಡವರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ’ ಎಂದು ಕಿಡಿ ಕಾರಿದ್ದಾರೆ.

'ಎಲ್ಲವೂ ಉಲ್ಟಾಪಲ್ಟಾ : ಎರಡೂ ಕಡೆ ಕೈ ಗೆಲುವು ಖಚಿತ' ...

‘ರಾಜ್ಯದಲ್ಲಿ ಈಗಾಗಲೇ ಜನರು ಸಂಕಷ್ಟದಲ್ಲಿರುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುವವರೆಗೆ ವಿದ್ಯುತ್‌ ದರ ಏರಿಕೆಯಂತಹ ನಿರ್ಧಾರಗಳನ್ನು ಕೈಬಿಡಬೇಕು. ಈ ಕೂಡಲೇ ಆದೇಶ ಹಿಂಪಡೆಯಬೇಕು’ ಒತ್ತಾಯಿಸಿದ್ದಾರೆ.